ಬೇಲೂರು: ಪಟ್ಟಣದ ದಿವ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೊಸ ವರ್ಷಾಚರಣೆ ಹಾಗೂ ಮಕರ ಸಂಕ್ರಾಂತಿ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಹೊಸ ಉಡುಗೆ ತೊಡುಗೆಯೊಂದಿಗೆ ಎಳ್ಳು, ಬೆಲ್ಲ ವಿತರಿಸಿ ಸಂಭ್ರಮಿಸಿದರು.
ಕಾರ್ಯಕ್ರಮದ ವೇದಿಕೆ ಮತ್ತು ಮುಂಭಾಗವನ್ನು ಕಬ್ಬಿನ ಜಲ್ಲೆ, ಭತ್ತದ ರಾಶಿ, ಮಾವಿನ ಸೊಪ್ಪಿನ ತಳಿರು ತೋರಣ, ಮಣ್ಣಿನ ಹಣತೆ, ಬಣ್ಣ ಬಣ್ಣದ ರಂಗೋಲಿ ಹಾಗೂ ಹೂವಿನಿಂದ ಸಿಂಗರಿಸಿ ಗ್ರಾಮೀಣ ಸೊಡಗಿನ ರೀತಿಯಲ್ಲಿ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ಸಂಸ್ಥೆ ಕಾರ್ಯದರ್ಶಿ ವನಜಾಕ್ಷಿ ಹಾಗೂ ಸಂಸ್ಥಾಪಕ ಅಧ್ಯಕ್ಷ ಗೌಡೇಗೌಡ ಉದ್ಘಾಟಿಸಿದರು.
ಸಂಸ್ಥಾಪಕ ಅಧ್ಯಕ್ಷ ಗೌಡೇಗೌಡ ಮಾತನಾಡಿ, ಮಕರ ಸಂಕ್ರಾಂತಿ ಹಬ್ಬ ಧಾರ್ಮಿಕ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ಹಲವು ಜನರೊಂದಿಗೆ ಬೆರೆಯುವ ಮೂಲಕ ಸಂತೋಷ ಮತ್ತು ಸಹೋದರತ್ವವನ್ನು ತುಂಬುತ್ತದೆ. ಜತೆಗೆ ಎಳ್ಳು ಬೆಲ್ಲ ಹಂಚಿ ನೆರೆ ಹೊರೆಯವರನ್ನು ಗೌರವಿಸುವ, ಶಾಂತಿ ಸೌಹಾರ್ದತೆ ಹೊಂದಿದೆ. ಸಂಕ್ರಾಂತಿ ಹಬ್ಬ ಸಂತೋಷ, ಸಂಪತ್ತು, ಸಮೃದ್ಧಿಯ ಸಂಕೇತವಾಗಿದ್ದು ನಾಡಿನಲ್ಲಿ ಎಲ್ಲರಿಗೂ ಸುಖ, ಶಾಂತಿ ನೆಮ್ಮದಿ ಲಭಿಸಲೆಂದು ಶುಭ ಕೋರಿದರು. ವಿದ್ಯಾರ್ಥಿಗಳು ಸಂಕ್ರಾಂತಿ ಹಬ್ಬದ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.
ಮುಖ್ಯೋಪಾಧ್ಯಾಯ ಚೇತನ್, ಶಿಕ್ಷಕ ಪುಟ್ಟೇಗೌಡ, ನಾಗರಾಜು, ಸುನೀಲ್, ಶಿಕ್ಷಕಿಯರಾದ ಋತು, ಅಂಬರೀನ್, ತರನಮ್ ಇತರರು ಇದ್ದರು.