blank

ಸಂಕ್ರಾಂತಿ ಸಡಗರ ವೈವಿಧ್ಯದ ಸಂಭ್ರಮ

blank

ಸಂಕ್ರಾಂತಿ ನಿಸರ್ಗದಲ್ಲಿ ಬದಲಾವಣೆಯನ್ನು ಸೂಚಿಸುವ, ರೈತರಲ್ಲಿ ಹರ್ಷ ಮೂಡಿಸುವ ಹಬ್ಬ. ಕರ್ನಾಟಕದ ವಿವಿಧ ಭಾಗಗಳಲ್ಲಿ ಇದರ ಆಚರಣೆ ವಿಭಿನ್ನ ಮತ್ತು ವಿಶಿಷ್ಟ. ಈ ಸ್ಥಳೀಯ ಆಚರಣೆಗಳು ಸಂಸ್ಕೃತಿಗೆ, ಹಬ್ಬದ ಸಡಗರಕ್ಕೆ ಇನ್ನಷ್ಟು ಶಕ್ತಿ ತುಂಬುತ್ತವೆ. ಮನಸ್ಸುಗಳನ್ನು ಚೇತೋಹಾರಿಗೊಳಿಸುತ್ತವೆ. ಈ ವೈವಿಧ್ಯಮಯ ಸಂಕ್ರಾಂತಿಯ ಬೇರೆ-ಬೇರೆ ಬಣ್ಣಗಳನ್ನು ಇಲ್ಲಿ ಪರಿಚಯಿಸಲಾಗಿದೆ. ಇದು ಮಕರ ಸಂಕ್ರಾಂತಿಗೆ ವಿಜಯವಾಣಿ ವಿಶೇಷ.

ರಾಸುಗಳಿಗೆ ಕಿಚ್ಚು ಹಾಯಿಸುವ ಪದ್ಧತಿ

ಸಂಕ್ರಾಂತಿ ಹಬ್ಬದ ಪ್ರಯುಕ್ತ ಮೈಸೂರು ತಾಲೂಕಿನ ಸಿದ್ದಲಿಂಗಪುರದಲ್ಲಿ ಪ್ರತಿ ವರ್ಷ ನಡೆಯುವ ರಾಸುಗಳಿಗೆ ಕಿಚ್ಚು ಹಾಯಿಸುವ ಕಾರ್ಯ ಈ ಭಾಗದಲ್ಲೇ ವಿಶೇಷ ಮತ್ತು ಬಹಳ ಪ್ರಸಿದ್ಧಿ. ಗ್ರಾಮದ ಚಂದ್ರಮೌಳೇಶ್ವರ ದೇಗುಲದ ಎದುರು ಧಗಧಗನೆ ಉರಿಯೋ ಬೆಂಕಿಯ ಉಂಡೆಯನ್ನೇ ಸೀಳಿ ಬರುವ ರಾಸುಗಳು, ಮೈನವಿರೇಳಿಸೋ ದೃಶ್ಯಗಳನ್ನು ನೋಡಲು ಜನರು ಮುಗಿಬೀಳುತ್ತಾರೆ. ಈ ಗ್ರಾಮೀಣ ಧಾರ್ವಿುಕ ಪದ್ಧತಿಯ ಅನನ್ಯ ಕ್ಷಣವನ್ನು ಕಣ್ತುಂಬಿಕೊಳ್ಳಲು ವಿದೇಶಿಯರೂ ದೌಡಾಯಿಸುತ್ತಾರೆ. ಸುಗ್ಗಿಯ ಸಂಭ್ರಮವನ್ನು ಜಾನುವಾರುಗಳೊಂದಿಗೆ ಆಚರಿಸುವ ಸಂಪ್ರದಾಯವನ್ನು ಸಿದ್ದಲಿಂಗಪುರದ ರೈತರು ಅಂದಾಜು 7 ದಶಕಗಳಿಂದ ನಡೆಸಿಕೊಂಡು ಬಂದಿದ್ದಾರೆ.

ಅಂತೆಯೇ ಸಂಕ್ರಾಂತಿ ದಿನ ಪ್ರತಿವರ್ಷ ಇಲ್ಲಿ ರಾಸುಗಳಿಗೆ ಕಿಚ್ಚು ಹಾಯಿಸಲಾಗುತ್ತದೆ. ಈ ಹಬ್ಬಕ್ಕಾಗಿ ದುಬಾರಿ ಬೆಲೆಯ ಎತ್ತುಗಳನ್ನು ಖರೀದಿಸುವುದು ಇಲ್ಲಿ ಪ್ರತಿಷ್ಠೆಯ ವಿಚಾರ. ಮೈತೊಳೆದು ಶುಚಿಗೊಳಿಸಿದ ರಾಸುಗಳ ಕೋಡುಗಳಿಗೆ ಬಣ್ಣ ಬಳಿದು ಅಂದ ಹೆಚ್ಚಿಸುತ್ತಾರೆ. ಕೊರಳಿಗೆ, ದೇಹಕ್ಕೆ ಹೂವಿನ ಮಾಲೆಗಳಿಂದ ಅಲಂಕರಿಸಿ ಬಲೂನುಗಳನ್ನು ಕಟ್ಟಿ ಗಮನ ಸೆಳೆಯುವಂತೆ ಮಾಡುತ್ತಾರೆ. ಕಿಚ್ಚು ಹಾದು ಬರುವ ರಾಸುಗಳು ಗ್ರಾಮದ ವಿವಿಧ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗುತ್ತವೆ. ಇವುಗಳ ಪಾದಪೂಜೆ ಮಾಡಿ, ಪ್ರಸಾದ ನೀಡಿ ಮನೆ ತುಂಬಿಸಿಕೊಳ್ಳಲಾಗುತ್ತದೆ.

ಆಂಧ್ರ ಕ್ಯಾಂಪ್​ಗಳಲ್ಲಿ ಭೋಗಿ ಹಬ್ಬ

ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಆಂಧ್ರ ಕ್ಯಾಂಪ್ ವಾಸಿಗಳು ಸಂಕ್ರಾಂತಿ ಹಬ್ಬವನ್ನು ಪ್ರತಿವರ್ಷ ಎದುರು ನೋಡುತ್ತಾರೆ. ಇದುವೇ ಅವರಿಗೆ ಪ್ರಮುಖ ಹಬ್ಬ. ಎರಡು ದಿನಗಳ ಕಾಲ ಆಚರಿಸುವ ಸಂಕ್ರಾಂತಿ ಸಮಯದಲ್ಲಿ ಆಂಧ್ರ ವಲಸಿಗರು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ. ಮುಖ್ಯವಾಗಿ ಸಂಕ್ರಾಂತಿಯನ್ನು ಅವರು ‘ಭೋಗಿ ಉತ್ಸವ’ ಎಂದು ಕರೆಯುತ್ತಾರೆ. ಸಂಕ್ರಾಂತಿಯ ಹಿಂದಿನ ದಿನ ಪ್ರತಿಮನೆಯ ಮುಂದೆ ಬೃಹತ್ ಆಕಾರದ ಅಗ್ಗಿಷ್ಟಿಕೆ ನಿರ್ವಿುಸುತ್ತಾರೆ. ಅದರಲ್ಲಿ ಕಿಚ್ಚು ಹತ್ತಿಸಿ, ಸುತ್ತಲೂ ರಂಗೋಲಿ ಹಾಕುತ್ತಾರೆ. ಹೆಂಗಳೆಯರು ಕೋಲಾಟ ನೃತ್ಯ ಮಾಡಿ, ಸಂತಸದಿಂದ ಹಬ್ಬ ಆಚರಿಸುತ್ತಾರೆ. ಸಂಜೆ ವೇಳೆ ಐದು ವರ್ಷದೊಳಗಿನ ಮಕ್ಕಳಿಗೆ ಭೋಗಿ ಪಳ್ಳು ಸಂಪ್ರದಾಯ ನೆರವೇರಿಸುತ್ತಾರೆ. ಜ.14ರಂದು ಮನೆಯಂಗಳಲ್ಲಿ ಮತ್ತೊಮ್ಮೆ ಚಿತ್ತಾಕರ್ಷಕ ರಂಗೋಲಿ ಬಿಡಿಸಿ, ಮನೆಯನ್ನು ಹೂವುಗಳಿಂದ ಅಲಂಕರಿಸುತ್ತಾರೆ. ಮನೆಮಂದಿ ಸಾಮೂಹಿಕವಾಗಿ ಊಟ ಮಾಡಿ ಸಂಭ್ರಮಿಸುತ್ತಾರೆ.

ಅಂಬಿಗರ ಚೌಡಯ್ಯ ವಚನ ಗ್ರಂಥಗಳ ರಥೋತ್ಸವ

ಹಾವೇರಿ ತಾಲೂಕಿನ ಸುಕ್ಷೇತ್ರ ನರಸೀಪುರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಸಂಕ್ರಾಂತಿ ಸಂದರ್ಭದಲ್ಲಿ (ಜ. 14, 15ರಂದು) ಅಂಬಿಗರ ಏಳನೇ ಶರಣ ಸಂಸ್ಕೃತಿ ಉತ್ಸವ ಜರುಗಿಸಲಾಗುತ್ತದೆ. ಸಂಕ್ರಾಂತಿ ಮರುದಿನ (ಜ. 15ರಂದು) ಸಂಜೆ 5 ಗಂಟೆಗೆ ಗೋಧೂಳಿ ಸಮಯದಲ್ಲಿ ಅಂಬಿಗರ ಚೌಡಯ್ಯನವರ ವಚನ ಗ್ರಂಥಗಳ ಮಹಾರಥೋತ್ಸವ ನಡೆಯುತ್ತದೆ. ಅಲಂಕರಿಸಿದ ರಥದಲ್ಲಿ ವಚನ ಗ್ರಂಥಗಳನ್ನು ಇಟ್ಟು ಮೆರವಣಿಗೆ ಮಾಡುವುದು ಇಲ್ಲಿನ ವಿಶೇಷತೆಯಾಗಿದೆ. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಮಹತ್ವ ಸಾರುವುದು ಇದರ ಉದ್ದೇಶವಾಗಿದೆ ಎನ್ನುತ್ತಾರೆ ಗುರುಪೀಠದ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ.

ವಿಭಿನ್ನವಾಗಿ ಆಚರಣೆ

ಸಂಕ್ರಾಂತಿಯನ್ನು ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ ಒಂದೊಂದು ಭಾಗದಲ್ಲೂ ವಿಭಿನ್ನವಾಗಿ ಆಚರಿಸುತ್ತಾರೆ. ಎಳ್ಳು-ಬೆಲ್ಲ ಹಂಚುವ ಜತೆಗೆ ಸಂಕ್ರಮಣ ಕಾಲದ ಪುಣ್ಯಸ್ನಾನಕ್ಕೂ ಹೆಚ್ಚಿನ ಮಹತ್ವವಿದೆ. ನದಿಗಳ ಸಂಗಮ ಕ್ಷೇತ್ರದಲ್ಲಿ ಸಂಕ್ರಾಂತಿಯಂದು ಸ್ನಾನ ಮಾಡಿದರೆ ಪುಣ್ಯಪ್ರಾಪ್ತಿಯಾಗುತ್ತದೆಂಬ ನಂಬಿಕೆಯಿಂದ ತುಂಗಾ-ಭದ್ರಾ ನದಿಗಳ ಸಂಗಮವಾದ ಕೂಡಲಿಯಲ್ಲಿ ಸಂಕ್ರಾಂತಿಯ ಪುಣ್ಯಸ್ನಾನಕ್ಕೆ ರಾಜ್ಯದ ವಿವಿಧ ಭಾಗಗಳಿಂದಲೂ ಜನ ಆಗಮಿಸುತ್ತಾರೆ. ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಆಯೋಜಿಸಲಾಗುವ ಎರಡು ದಿನಗಳ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸುತ್ತಾರೆ. ಸೊರಬ ತಾಲೂಕು ಬಂಕಸಾಣದಲ್ಲಿ ಜಾತ್ರೆ ಹಾಗೂ ವರದಾ ನದಿಯಲ್ಲಿ ಪುಣ್ಯಸ್ನಾನ ಮಾಡಲಾಗುತ್ತದೆ. ಸೊರಬ, ಶಿಕಾರಿಪುರ ತಾಲೂಕುಗಳಲ್ಲಿ ದೀಪಾವಳಿಯಿಂದ ಆರಂಭವಾಗುವ ಹೋರಿ ಬೆದರಿಸುವ ಸ್ಪರ್ಧೆ ಸಂಕ್ರಾಂತಿಯಲ್ಲಿ ಮತ್ತಷ್ಟು ಬಿರುಸು ಪಡೆಯುತ್ತದೆ. ಶಿವಮೊಗ್ಗದಲ್ಲಿ ಸೀತಾ ರಾಮಾಂಜನೇಯರ ತೆಪ್ಪೋತ್ಸವ ಕಳೆದ 74 ವರ್ಷಗಳಿಂದ ನಡೆಯುತ್ತಿದೆ. ತುಂಗಾ ನದಿಯಲ್ಲಿ ತೆಪ್ಪೋತ್ಸವ ಹಾಗೂ ಸಿಡಿಮದ್ದುಗಳ ಪ್ರದರ್ಶನ ನಡೆಯುತ್ತದೆ. ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆಯಂದು ಆರಂಭವಾಗುವ ಜಾತ್ರೆ ಮುಕ್ತಾಯವಾಗುವುದು ಸಂಕ್ರಾಂತಿ ಬಳಿಕವೇ.

ಕಾಡುಮೊಲಕ್ಕೆ ಪೂಜೆ

ಕಾಡುಮೊಲಕ್ಕೆ ಪೂಜೆ ಸಲ್ಲಿಸುವ ಪದ್ಧತಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿದೆ. ಕಂಚೀಪುರದ ಶ್ರೀ ಕಂಚೀವರದರಾಜ ಸ್ವಾಮಿ ದೇವಾಲಯದಲ್ಲಿ ಮೊಲಕ್ಕೆ ಪೂಜೆ ಸಲ್ಲಿಸಿ, ಪುನಃ ಕಾಡಿಗೆ ಬಿಡುವ ಮೂಲಕ ಉತ್ತರಾಯಣ ಪುಣ್ಯಕಾಲವನ್ನು ವಿಶಿಷ್ಟವಾಗಿ ಆಚರಿಸುವ ಸಂಪ್ರದಾಯವಿದೆ. ಕಾಡಿನಲ್ಲಿ ಮೊಲ ಸಿಗುವವರೆಗೂ ಭಕ್ತರು ಸಂಕ್ರಾತಿ ಆಚರಿಸುವಂತಿಲ್ಲ. ಈ ಪದ್ಧ್ದ ನೂರಾರು ವರ್ಷಗಳಿಂದ ನಡೆದುಬಂದಿದೆ. ಮಕರ ಸಂಕ್ರಾಂತಿಯ ದಿನ ಮುಂಜಾನೆ ಭಕ್ತರು ಸಮೀಪದ ಅರಣ್ಯಪ್ರದೇಶಕ್ಕೆ ತೆರಳಿ ಅಲ್ಲಿ ಕಾಡುಮೊಲವನ್ನು ಹುಡುಕಿ ಜೀವಂತವಾಗಿ ಹಿಡಿದು ತರುತ್ತಾರೆ. ಸಂಜೆ ದೇವಾಲಯದಿಂದ ಹೊರಡುವ ಕಂಚೀವರದರಾಜ ಸ್ವಾಮಿಯ ಜತೆಯಲ್ಲಿ ಅದನ್ನು ಮೆರವಣಿಗೆಯ ಮೂಲಕ ಊರಬಾಗಿಲಿಗೆ ತಂದು ಅದರ ಕಿವಿಗೆ ಚಿನ್ನದ ಕಿವಿಯೋಲೆ ತೊಡಿಸುತ್ತಾರೆ. ಪೂಜೆ ಸಲ್ಲಿಸಿ ದೇವರ ಮುಂದೆ ಮೂರು ಬಾರಿ ನಿವಾಳಿಸಿದ ನಂತರ ಸುರಕ್ಷಿತವಾಗಿ ಕಾಡಿಗೆ ಬಿಡುತ್ತಾರೆ. ಸಂಜೆ ಊರ ಬಾಗಿಲಿನಲ್ಲಿ ಮೊಲವನ್ನು ಕಾಡಿಗೆ ಬಿಟ್ಟು ಹಿಂತಿರುಗುವಾಗ ಭಕ್ತರು ಕಂಚೀವರದರಾಜ ಸ್ವಾಮಿ ಮೇಲೆ ನಾಣ್ಯಗಳನ್ನು ತೂರಿ ಭಕ್ತಿ ಸಮರ್ಪಿಸುತ್ತಾರೆ.

ಎತ್ತಿನಗಾಡಿ ಓಡಿಸುವ ಸ್ಪರ್ಧೆ

ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಸುಗಳನ್ನು ಸಿಂಗರಿಸಿ ಕಿಚ್ಚು ಹಾಯಿಸುವ ಮೂಲಕ ಕೃಷಿಕರು ಸಂಭ್ರಮಿಸುತ್ತಾರೆ. ಆದರೆ ಇಂದಿನ ಯುವ ಪೀಳಿಗೆ ಎತ್ತಿನ ಗಾಡಿ ಓಟದ ಸ್ಪರ್ಧೆಗೆ ಮುಗಿಬಿದ್ದಿದ್ದಾರೆ. ಹೀಗಾಗಿ ಸಾಂಪ್ರದಾಯಿಕ ಕಿಚ್ಚು ಹಾಯಿಸುವ ಪದ್ಧತಿಗಿಂತ ಎತ್ತಿನ ಗಾಡಿ ಸ್ಪರ್ಧೆಯೇ ಪ್ರಖ್ಯಾತಿ ಪಡೆಯಲಾರಂಭಿಸಿದೆ. ಇನ್ನು ಮಲೆನಾಡು ಭಾಗದಲ್ಲಿ ರೈತಾಪಿ ವರ್ಗದವರು ಭತ್ತ ಒಕ್ಕಣೆ ಮಾಡುವ ಕಣಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಸಂಕ್ರಾಂತಿಯಂದು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುವುದು ವಾಡಿಕೆ.

ಕಿವಿ ಚುಚ್ಚುವ ಶಾಸ್ತ್ರ

ಒಂದು ಬಾರಿ ಪೂಜೆ ಸಲ್ಲಿಸಿದ ಮೊಲಕ್ಕೆ ಮತ್ತೆ ಪೂಜೆ ಸಲ್ಲಿಸುವುದಿಲ್ಲ. ಆದ್ದರಿಂದ ಪೂಜೆ ಸಲ್ಲಿಸಿದ ಮೊಲವನ್ನು ಗುರುತಿಸಲು ಅದರ ಕಿವಿಗೆ ಚಿನ್ನದ ಓಲೆ ತೊಡಿಸಲಾಗುತ್ತದೆ. ಬೇಟೆಯಾಡುವ ಜನರಿಗೆ ಕಿವಿಯೋಲೆ ಇರುವ ಮೊಲ ಸಿಕ್ಕರೆ ಕೊಲ್ಲದೆ ಬಿಟ್ಟು ಬಿಡುತ್ತಾರೆ.

ಜಾನಪದ ಸೊಗಡಿನ ಸಂಕ್ರಾಂತಿ

ಧಾರವಾಡದ ಜಾನಪದ ಸಂಶೋಧನಾ ಕೇಂದ್ರದ ಅಧ್ಯಕ್ಷೆ ವಿಶ್ವೇಶ್ವರಿ ಹಿರೇಮಠ ನೇತೃತ್ವದಲ್ಲಿ ಸಾಧನಕೇರಿ ಉದ್ಯಾನದಲ್ಲಿ ಸೋಮವಾರ ಜಾನಪದ ಸೊಗಡಿನ ಸಂಕ್ರಾಂತಿ ಹಬ್ಬದಾಚರಣೆ ದೃಶ್ಯ. ಜಾನಪದ ಶೈಲಿಯ ಹಾಡುಗಳನ್ನು ಹಾಡುತ್ತ ಸಂಕ್ರಾಂತಿ ಹಬ್ಬದ ಮಹತ್ವವನ್ನು ಕಿರಿಯರಿಗೆ ತಿಳಿಸಿಕೊಡುವ ಆಚರಣೆ ಧಾರವಾಡದಲ್ಲಿ ಕೆಲವು ವರ್ಷಗಳಿಂದ ನಡೆಯುತ್ತಿದೆ. ಸಂಕ್ರಾಂತಿ ದಿನಕ್ಕಿಂತ ಒಂದು ದಿನ ಮೊದಲೇ ಇದನ್ನು ಏರ್ಪಡಿಸಲಾಗುತ್ತಿದೆ. ಧಾರವಾಡ ನಗರದ ಜಾನಪದ ಸಂಶೋಧನಾ ಸಂಸ್ಥೆಯಿಂದ ಖ್ಯಾತ ಜಾನಪದ ಕಲಾವಿದ ದಿ. ಬಸವಲಿಂಗಯ್ಯ ಹಿರೇಮಠ ಆರಂಭಿಸಿದ್ದ ಜಾನಪದ ಶೈಲಿಯ ಹಬ್ಬದ ಸಂಭ್ರಮವನ್ನು ಪತ್ನಿ ವಿಶ್ವೇಶ್ವರಿ ಹಾಗೂ ಪುತ್ರ ಭೂಷಣ್ ಮುಂದುವರಿಸಿಕೊಂಡು ಬಂದಿದ್ದಾರೆ.

ಸಂಸ್ಥೆಯ ಮಹಿಳಾ ಸದಸ್ಯರೇ ನೇತೃತ್ವ ವಹಿಸುತ್ತಾರೆ. ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ಸಂಕ್ರಮಣದ ವಿಶೇಷ ಖಾದ್ಯಗಳನ್ನು ಮನೆಯಿಂದಲೇ ಸಿದ್ಧಪಡಿಸಿಕೊಂಡು ತರುತ್ತಾರೆ. ಸಂಕ್ರಾಂತಿ ಹಾಡುಗಳನ್ನು ಹಾಡುತ್ತ ಹಬ್ಬದ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲಾಗುತ್ತದೆ. ಸಂಕ್ರಮಣದ ನಿಮಿತ್ತ ಮೊದಲು ಗಂಗಾಪೂಜೆ ನೆರವೇರಿಸಲಾಗುತ್ತದೆ. ಎಳ್ಳು-ಬೆಲ್ಲ, ವಿವಿಧ ಬಗೆಯ ರೊಟ್ಟಿ, ಬದನೆಕಾಯಿ ಭರ್ತಾ, ಹೆಸರುಕಾಳು, ಪುಂಡಿಪಲ್ಯ, ಅವರೆಕಾಳು, ಬದನೆಕಾಯಿ ಎಣ್ಣೆಗಾಯಿ, ಕರಿಹಿಂಡಿ, ಶೇಂಗಾ ಚಟ್ನಿ, ಗುರೆಳ್ಳ ಚಟ್ನಿ, ಮಾದಲಿ, ಶೇಂಗಾ ಹೋಳಿಗೆ, ಚಿತ್ರಾನ್ನ, ಮೊಸರನ್ನ ಸೇರಿ ತರಹೇವಾರಿ ಖಾದ್ಯಗಳಿರುವ ಸಹಭೋಜನ ಹಬ್ಬದ ಸಂಭ್ರಮ ಹೆಚ್ಚಿಸುತ್ತದೆ.

ಚಿರಂಜೀವಿ, ಮಹೇಶ್​ ಬಾಬು… ಯಾರೊಬ್ಬರು ಸ್ಪಂದಿಸುತ್ತಿಲ್ಲ, ಸಾಯುವುದೇ ಉಳಿದಿರುವ ದಾರಿ! ಹಿರಿಯ ನಟಿ ಕಣ್ಣೀರು | Pavala Syamala

 

Share This Article

ಕ್ಯಾರೆಟ್​ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ | Recipe

ಕ್ಯಾರೆಟ್​​ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…

ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…

ಕಣ್ಣಿನಪೊರೆ ಸಮಸ್ಯೆಗೆ ಪರಿಹಾರ ಏನೆಂದು ಆಲೋಚಿಸುತ್ತಿದ್ದೀರಾ?; ಇಲ್ಲಿದೆ ಸೂಕ್ತ ಮನೆಮದ್ದಿನ ಮಾಹಿತಿ | Health Tips

ಪ್ರಸ್ತುತ ಕಾರ್ಯನಿರತ ಜೀವನ ಮತ್ತು ಕಳಪೆ ಜೀವನಶೈಲಿಯಿಂದಾಗಿ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಅದರಲ್ಲಿನ ಪ್ರಮುಖ ಸಮಸ್ಯೆಗಳಲ್ಲಿ…