ಕೆರೆ ತುಂಬಿಸುವಂತೆ ಆಗ್ರಹಿಸಿ ಧರಣಿ

ಹೂವಿನಹಿಪ್ಪರಗಿ: ಕುದರಿ ಸಾಲವಾಡಗಿ ಶಾಖಾ ಕಾಲುವೆಯಿಂದ ಸಂಕನಾಳ-ಅಗಸಬಾಳ, ಹೂವಿನಹಿಪ್ಪರಗಿ-ಕರಭಂಟನಾಳ ಹಾಗೂ ಇನ್ನ್ನುಳಿದ ಕೆರೆಗಳ ಭರ್ತಿಗೆ ಆಗ್ರಹಿಸಿ ಗ್ರಾಮದಲ್ಲಿ ಯರನಾಳದ ಸಂಗನಬಸವ ಸ್ವಾಮೀಜಿ, ಕರಭಂಟನಾಳದ ಶಿವಕುಮಾರ ಸ್ವಾಮೀಜಿ, ಬಸವನ ಬಾಗೇವಾಡಿಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕರವೇ ಸೇರಿದಂತೆ ವಿವಿಧ ಸಂಘಟನೆಗಳಿಂದ ಮಂಗಳವಾರ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿ ನಾಡಕಚೇರಿ ಸಮೀಪ ಧರಣಿ ಆರಂಭಿಸಲಾಯಿತು.

ಗ್ರಾಮದ ಪತ್ರಿವನ ಮಠದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಬಸ್ ನಿಲ್ದಾಣದ ಮಾರ್ಗವಾಗಿ ಉಪ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು. ನಂತರ ತಹಸೀಲ್ದಾರ್ ಎಂ.ಎನ್. ಚೋರಗಸ್ತಿ ಹಾಗೂ ಕೆಬಿಜೆಎನ್​ಎಲ್ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಎಂ.ಎಸ್. ಚೌಕಿಮಠ ಅವರಿಗೆ ಮನವಿ ಸಲ್ಲಿಸಿ ಧರಣಿ ಆರಂಭಿಸಿದರು.

ಯರನಾಳದ ಸಂಗನಬಸವ ಸ್ವಾಮೀಜಿ ಮಾತನಾಡಿ, ತಾಲೂಕಿನ ಕುದರಿಸಾಲವಾಡಗಿ ಮುಖ್ಯ ಕಾಲುವೆಯ ಮಸಬಿನಾಳ ಹಾಗೂ ಇಂಗಳೇಶ್ವರ ಮಾರ್ಗ ಮಧ್ಯೆದಲ್ಲಿ ಅರ್ಧಕ್ಕೆ (1 ಕಿ.ಮೀ. 300 ಮೀಟರ್) ನಿಂತಿರುವ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ ರೈತರಿಗೆ ಹಾಗೂ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಕಲ್ಪಸಬೇಕು ಎಂದು ಆಗ್ರಹಿಸಿದರು.

ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಈ ಹಿಂದಿನ ಸರ್ಕಾರದಲ್ಲಿ ಎಂ.ಬಿ ಪಾಟೀಲರು ನೀರಾವರಿ ಮಂತ್ರಿಯಾಗಿದ್ದಾಗ ಬಿಡುಗಡೆಯಾದಷ್ಟು ಹಣ ಈಗ ನೀರಾವರಿ ಯೋಜನೆಗಳಿಗೆ ಬಿಡುಗಡೆಯಾಗುತ್ತಿಲ್ಲ. ಅದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ತಾರತಮ್ಯ ಮಾಡದೆ ಕೃಷ್ಣಾ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಹಣ ಒದಗಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.

ಕರವೇ ಜಿಲ್ಲಾ ಯುವ ಘಟಕ ಅಧ್ಯಕ್ಷ ಅಶೋಕ ಹಾರಿವಾಳ ಮಾತನಾಡಿದರು. ಮಸಬಿನಾಳದ ಸಿದ್ಧರಾಮ ಶ್ರೀಗಳು, ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದರಾಮಪ್ಪ ರಂಜಣಗಿ, ತಾಲೂಕು ಅಧ್ಯಕ್ಷ ಸಿದ್ರಾಮ ಅಂಗಡಗೇರಿ, ಮುಖಂಡ ಎಸ್.ಎ.ಹಿರೇಮಠ, ಸಿದ್ದಲಿಂಗಯ್ಯ ಹಿರೇಮಠ, ಕುಮಾರಗೌಡ ಪಾಟೀಲ, ಹಣಮಂತರಾಯ ಗುಣಕಿ, ಮಲ್ಲನಗೌಡ ನಾಡಗೌಡ, ಪಿ.ಜಿ. ಗೋಠೇದ, ರಮ್ಜಾನ್ ಮುಜಾವರ, ಸಿದ್ದು ಹಾದಿಮನಿ, ವಿಜಯಕುಮಾರ ರಾಠೋಡ ಸೇರಿದಂತೆ ಸುತ್ತಮುತ್ತಲಿನ ನೂರಾರು ರೈತರು ಭಾಗವಹಿಸಿದ್ದರು.

ಕೆರೆ ತುಂಬಿಸುವ ಭರವಸೆ: ಶಾಸಕ ಸೋಮನಗೌಡ ಪಾಟೀಲ ಸಾಸನೂರ ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಜನವರಿ 10 ರೊಳಗೆ ಕಾಲುವೆ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸುವ ಭರವಸೆ ನೀಡಿದರು. ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 24 ಕೆರೆಗಳಲ್ಲಿ 12 ಕೆರೆಗಳಿಗೆ ನೀರು ತುಂಬಿಸಿದ್ದೇನೆ. ಅತಿ ಶೀಘ್ರದಲ್ಲಿ ನೀರು ಬಿಡಿಸುವ ಕೆಲಸ ಮಾಡುತ್ತೇನೆ ಎಂದರು.