ಮಾಗಡಿ : ಸರ್ಕಾರ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಿದ್ದು, ಮತ್ತಷ್ಟು ಒತ್ತು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುವುದಾಗಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ತಾಲೂಕಿನ ಮರೂರು ಹಾಲು ಉತ್ಪಾದಕ ಸಹಕಾರ ಸಂಘದ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಹೈನುಗಾರಿಕೆ ರೈತರ ಸಂಜೀವಿನಿಯಾಗಿದೆ. ಬೆಂಗಳೂರು ಒಕ್ಕೂಟ ವ್ಯಾಪ್ತಿಯ ಯಾವ ತಾಲೂಕಿನಲ್ಲೂ ಇಲ್ಲದಷ್ಟು ಹಾಲು ಉತ್ಪಾದಕ ಸಹಕಾರ ಸಂಘಗಳು ಮಾಗಡಿ ತಾಲೂಕಿನಲ್ಲಿದೆ, ಪಕ್ಷಾತೀತವಾಗಿ, ಜಾತ್ಯತೀತವಾಗಿ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳು ಆರಂಭಿಸಿರುವುದರಿಂದ ಪ್ರತಿಯೊಬ್ಬ ರೈತರು ಹಸುಗಳನ್ನು ಸಾಕಿಕೊಂಡು ಉತ್ತಮ ಜೀವನ ನಡೆಸುತ್ತಿದ್ದಾರೆ ಎಂದರು.
35 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಡೇರಿ ಈಗ ಸ್ವಂತ ಕಟ್ಟಡ ನಿರ್ಮಿಸಿಕೊಂಡಿರುವುದು ಸ್ವಾಗತಾರ್ಹ, ಬಹುತೇಕ ಡೇರಿಗಳಿಗೆ ಸ್ವಂತ ಕಟ್ಟಡಗಳಿದ್ದು, ಉಳಿದ ಡೇರಿಗಳ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕರ ಅನುದಾನದಿಂದ ಸಹಕಾರ ನೀಡುವುದಾಗಿ ತಿಳಿಸಿದರು.
ಬಮೂಲ್ ನಿರ್ದೇಶಕ ನರಸಿಂಹಮೂರ್ತಿ ಮಾತನಾಡಿ, ತಾಲೂಕಿನಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳು ಉತ್ತಮವಾಗಿ ನಡೆಯುತ್ತಿದೆ. ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಆ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ. ಕಾರ್ಯದರ್ಶಿಗಳು ಸಂಘಗಳನ್ನು ಅಭಿವೃದ್ಧಿಗೊಳಿಸಿ ಉತ್ಪಾದಕರಿಗೆ ಸಹಕರಿಸಿದರೆ ಹೆಚ್ಚು ಹಾಲು ಉತ್ಪಾದಿಸಲು ಸಹಕಾರಿಯಾಗುತ್ತದೆ. ಸಹಕಾರ ಸಂಘ ಎಲ್ಲ ಇಲಾಖೆಗಳಿಗಿಂತ ಉತ್ತಮವಾಗಿದೆ, ಪ್ರತಿ ದಿನ 16 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದರಿಂದ ಪ್ರತಿ ತಿಂಗಳು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ಕೋಟ್ಯಂತರ ಹಣ ಹಾಲು ಉತ್ಪಾದಕರ ಖಾತೆಗೆ ನೇರವಾಗಿ ಜಮೆಯಾಗುತ್ತಿದೆ ಎಂದರು.
ಕಾರ್ಯದರ್ಶಿ ಸಂಜೀವಯ್ಯ ಮಾತನಾಡಿ, ಪ್ರತಿ ದಿನ 950 ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, 23 ಲಕ್ಷ ಲಾಭಾಂಶ ಹೊಂದಿದೆ. ಈ ಹಣದಿಂದ ನೂತನ ಕಟ್ಟಡಕ್ಕೆ 19 ಲಕ್ಷ ರೂ. ನೀಡಿ ಉಳಿಕೆ 4 ಲಕ್ಷ ರೂ. ಲಾಭಾಂಶದ ಉಳಿಕೆ ಹಣ ಇದೆ ಎಂದರು.
ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹ : ಸರ್ಕಾರ ಪ್ರತಿ ಲೀಟರ್ ಹಾಲಿಗೆ ಗ್ರಾಹಕರಿಗೆ 50 ರೂ., ಮಾರಾಟ ಮಾಡಿ ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ವೈಜ್ಞಾನಿಕ ಬೆಲೆಯಾಗಿ 40 ರೂ. ನೀಡಬೇಕು, ಈಗ ಪ್ರತಿ ಲೀಟರ್ ಹಾಲಿಗೆ ನೀಡುತ್ತಿರುವ 32, 15 ರೂ. ಉತ್ಪಾದಕರಿಗೆ ನಷ್ಟವಾಗುತ್ತಿದೆ. ಇದೇ ರೀತಿ ಮುಂದುವರಿದರೆ ಉತ್ಪಾದಕರು ಹೈನುಗಾರಿಕೆ ಬಿಡುವ ಸಂಭವವಿದ್ದು, ಆಗ ಹಾಲಿಗೆ ಹಾಹಾಕಾರ ಉಂಟಾಗಲಿದೆ. ಹಾಲಿನ ದರ ಏರಿಸಿದರೆ ಒಕ್ಕೂಟ ಹಾಗೂ ಉತ್ಪಾದಕರಿಗೆ ಅನುಕೂಲವಾಗುತ್ತದೆ. ನೆರೆ ರಾಜ್ಯಗಳಲ್ಲಿ ಪ್ರತಿ ಲೀಟರ್ ಹಾಲಿನ ದರ 55 ರಿಂದ 60 ರೂ ಇದೆ. ಆದರೆ, ಕರ್ನಾಟಕದಲ್ಲಿ ಕಡಿಮೆ ಇರುವುದು ಬೇಸರವಾಗಿದೆ. ಕರ್ನಾಟಕದಲ್ಲಿ ತರಕಾರಿ ಮತ್ತು ಹಾಲಿನ ಬೆಲೆ ಅತಿ ಕಡಿಮೆಗೆ ಸಿಗುತ್ತದೆ. ಬೇರೆ ವಸ್ತುಗಳ ಬೆಲೆ ದುಭಾರಿಯಾಗಿದ್ದು, ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತಂದು ಉತ್ಪಾದಕರಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವುದಾಗಿ ಬಮೂಲ್ ನಿರ್ದೇಶಕ ನರಸಿಂಹಮೂರ್ತಿ ತಿಳಿಸಿದರು.
ಮಾಜಿ ಶಾಸಕ ಎ.ಮಂಜುನಾಥ್, ಬಮೂಲ್ ನಿರ್ದೇಶಕ ಕೆಇಬಿ ರಾಜಣ್ಣ, ಡೇರಿ ಅಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಎಂ.ನಂಜೇಗೌಡ, ನಿರ್ದೆಶಕರಾದ ಕೆ.ಹನುಮಂತಯ್ಯ, ಶಿವಣ್ಣ, ರಂಗಸ್ವಾಮಯ್ಯ, ಶಶಿಧರ್, ಕೆಂಚಯ್ಯ, ಹೊನ್ನಮ್ಮ, ರುಕ್ಷ್ಮಿಣಮ್ಮ, ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಎಂ.ಆರ್.ಮಂಜುನಾಥ್, ಮುಖಂಡರಾದ ವೆಂಕಟೇಶಪ್ಪ, ಮರಿಗೌಡ, ಸಾಗರ್ ಗೌಡ, ಕಾಳೇಗೌಡ ಇತರರು ಇದ್ದರು.