ರಿಷಭ್​ ಪಂತ್​ ಈಗಿನ ಜನರೇಷನ್​ನ ವೀರೇಂದ್ರ ಸೆಹ್ವಾಗ್​: ಸಂಜಯ್​ ಮಂಜ್ರೇಕರ್​

ನವದೆಹಲಿ: ಟೀಂ ಇಂಡಿಯಾದ ಯುವ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ರಿಷಭ್​ ಪಂತ್​ ಈ ತಲೆಮಾರಿನ ವೀರೇಂದ್ರ ಸೆಹ್ವಾಗ್​ ಇದ್ದಂತೆ ಎಂದು ಮಾಜಿ ಕ್ರಿಕೆಟಿಗ ಸಂಜಯ್​ ಮಂಜ್ರೇಕರ್​ ಅಭಿಪ್ರಾಯ ಪಟ್ಟಿದ್ದಾರೆ.

ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪರ ಅದ್ಭುತ ಪ್ರದರ್ಶನ ನೀಡುತ್ತಿರುವ ರಿಷಭ್​ ಪಂತ್​ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್​ನಿಂದ ಎದುರಾಳಿ ತಂಡಗಳ ಬೌಲರ್​ಗಳಿಗೆ ನಡುಕ ಹುಟ್ಟಿಸಿದ್ದಾರೆ.

ರಿಷಭ್​ ಪಂತ್​ ಕುರಿತು ಟ್ವೀಟ್​ ಮಾಡಿರುವ ಮಂಜ್ರೇಕರ್​ ‘ಪಂತ್​ ಈಗಿನ ತಲೆಮಾರಿನ ವೀರೇಂದ್ರ ಸೆಹ್ವಾಗ್​. ಇವರಂತಹ ಬ್ಯಾಟ್ಸ್​ಮನ್​ ಅನ್ನು ಅವರ ಪಾಡಿಗೆ ಬಿಡಬೇಕು. ಅವರನ್ನು ತಂಡಕ್ಕೆ ಆಯ್ಕೆ ಮಾಡಿ ಅಥವಾ ತಂಡದಿಂದ ಕೈಬಿಡಿ. ಅವರನ್ನು ಬದಲಿಸಲು ಪ್ರಯತ್ನಿಸಬೇಡಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಿಷಭ್​ ಪಂತ್​ ಬುಧವಾರ ಸನ್​ರೈಸರ್ಸ್​ ಹೈದ್ರಾಬಾದ್​ ವಿರುದ್ಧ ನಡೆದ ಎಲಿಮಿನೇಟರ್​ ಪಂದ್ಯದಲ್ಲಿ ಕೇವಲ 21 ಬಾಲ್​ಗಳಿಗೆ 49 ರನ್​ ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಿಷಭ್​ ಈ ಐಪಿಎಲ್​ ಋತುವಿನಲ್ಲಿ ಒಟ್ಟು 15 ಪಂದ್ಯಗಳನ್ನಾಡಿದ್ದು, 163.63ರ ಸರಾಸರಿಯಲ್ಲಿ 450 ರನ್​ ಗಳಿಸಿದ್ದಾರೆ.

ರಿಷಭ್​ ಪಂತ್​ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮತ್ತು ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೂ ಅವರನ್ನು ವಿಶ್ವಕಪ್​ಗೆ ಆಯ್ಕೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ರಿಷಭ್​ ಪಂತ್​ ಪರ ಹಲವು ಮಾಜಿ ಕ್ರಿಕೆಟಿಗರು ಬ್ಯಾಟ್​ ಬೀಸುತ್ತಿದ್ದು, ಯುವ ಬ್ಯಾಟ್ಸ್​ಮನ್​ಗೆ ಬೆಂಬಲ ಸೂಚಿಸುತ್ತಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *