ವರ್ಷಾಂತ್ಯಕ್ಕೆ ಟೆನಿಸ್ ಕೋರ್ಟ್​ಗೆ ವಾಪಸ್

|ರಘುನಾಥ್ ಡಿಪಿ

ಬೆಂಗಳೂರು: ತಾಯ್ತನದ ಖುಷಿಯಲ್ಲಿದ್ದೇನೆ. ಫಿಟ್ನೆಸ್ ಜತೆಗೆ ಆರೋಗ್ಯ ಕಾಪಾಡಿಕೊಳ್ಳುವುದೇ ಸದ್ಯದ ಕೆಲಸ. ವರ್ಷಾಂತ್ಯದಲ್ಲಿ ಮತ್ತೆ ಟೆನಿಸ್​ಗೆ ವಾಪಸಾಗುತ್ತೇನೆ ಎಂದು ಸ್ಟಾರ್ ಟೆನಿಸ್ ಆಟಗಾರ್ತಿ 32 ವರ್ಷದ ಸಾನಿಯಾ ಮಿರ್ಜಾ ತಿಳಿಸಿದ್ದಾರೆ.

ಗುರುವಾರ ವಿಜಯವಾಣಿ ಯೊಂದಿಗೆ ಮಾತನಾಡಿದ ಸಾನಿಯಾ, ಮಗನಿಗೆ ಈಗಷ್ಟೇ 2 ತಿಂಗಳು ಕಳೆದಿದೆ. ಇನ್ನು ಹೆಚ್ಚಿನ ಸಮಯ ಅವನೊಂದಿಗೆ ಕಳೆಯಬೇಕು. ತಾಯ್ತನ ಜತೆಗೆ ಪ್ರತಿದಿನ ಕನಿಷ್ಠ ಎರಡು ಗಂಟೆಗಳ ಕಾಲ ಫಿಟ್ನೆಸ್ ಕಡೆ ಗಮನಹರಿಸುತ್ತಿದ್ದೇನೆ ಎಂದರು. ಯುಬಿ ಸಿಟಿಯಲ್ಲಿ ಸಹೋದರಿ ಅನಾಮ್ ಮಿರ್ಜಾ ಒಡೆತನದ ಲಾಬೆಲ್ ಬಜಾರ್ ಫ್ಯಾಷನ್-ಡಿಸೈನರ್ ಶೋ ರೂಂಗೆ ಸಾನಿಯಾ ಚಾಲನೆ ನೀಡಿದರು. ನಾನು ಆಡದಿದ್ದಾಗ ಯಾವುದೇ ಕಾರಣಕ್ಕೂ ನಾನು ಟೆನಿಸ್ ನೋಡುವುದಿಲ್ಲ. ಬದಲಿಗೆ ಕ್ರಿಕೆಟ್, ಫುಟ್​ಬಾಲ್​ನಂಥ ಕ್ರೀಡೆಗಳನ್ನು ನೋಡುತ್ತೇನೆ. ಇಲ್ಲವಾದರೆ ಟಿವಿ ಆಫ್ ಮಾಡಿ ಮಲಗುತ್ತೇನೆ ಎಂದರು. ಕಳೆದ 15 ವರ್ಷಗಳಿಂದ ಟೆನಿಸೇ ನನ್ನ ಜೀವನವಾಗಿದೆ. ಈಗ ತಾತ್ಕಾಲಿಕವಾಗಿ ಎಲ್ಲವನ್ನು ತ್ಯಜಿಸಿದ್ದೇನೆ. ಇನ್ನಷ್ಟು ವರ್ಷಗಳ ಕಾಲ ಟೆನಿಸ್ ಆಡಲು ಬಯಸುತ್ತೇನೆ ಎಂದು ಸಾನಿಯಾ ಹೇಳಿದರು.

ಟ್ರೇನಿಂಗ್ ಮುಂದುವರಿಸಿರುವೆ!: ಮನೆಯಲ್ಲಿ ಸುಮ್ಮನೆ ಕುಳಿತಿಲ್ಲ. ಫಿಟ್ನೆಸ್​ಗಾಗಿ ವಿಶೇಷ ಗಮನ ನೀಡುತ್ತಿದ್ದೇನೆ. ತಾಯಿಯಿಂದ ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ. ನನ್ನ ಅದೃಷ್ಟವೇನೋ ಗೊತ್ತಿಲ್ಲ. ಮಗ ಇಜಾನ್ ಮಿರ್ಜಾ ಮಲಿಕ್ ಜಾಸ್ತಿ ಅಳೋದಿಲ್ಲ್ಲ ತಾಯಿಯಾದ ನಂತರ ಇದುವರೆಗೂ ಟೆನಿಸ್ ಆಡಿಲ್ಲ ಎಂದರು.

ಸಿಂಧು ಪ್ರತಿಭಾವಂತೆ, ನನ್ನ ಬೆಸ್ಟ್ ಫ್ರೆಂಡ್

ಪಿವಿ ಸಿಂಧು ಜತೆಗಿನ ಒಡನಾಟ ಹಂಚಿಕೊಂಡ ಸಾನಿಯಾ, ಆಕೆ ನನ್ನ ಬೆಸ್ಟ್ ಫ್ರೆಂಡ್. ಪ್ರತಿಭಾವಂತ ಆಟಗಾರ್ತಿ. ಸಿಂಧು ಆಡುವುದನ್ನು ನೋಡಲು ಇಷ್ಟ . ಪಿಬಿಎಲ್​ನಲ್ಲಿ ಅವಳ ಪಂದ್ಯ ನೋಡುವ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದೆ ಎಂದರು. ಕಂಠೀರವ ಸ್ಟೇಡಿಯಂನಲ್ಲಿ ಬುಧವಾರ ಸಾನಿಯಾ, ಪಿಬಿಎಲ್ ಪಂದ್ಯ ವೀಕ್ಷಿಸಿದ್ದರು. ಈ ಬಾರಿ ಅವಳ ನೇತೃತ್ವದ ಹೈದರಾಬಾದ್ ಹಂಟರ್ಸ್ ತಂಡ ಚಾಂಪಿಯನ್ ಆಗಲೆಂದು ಬಯಸುತ್ತೇನೆ ಎಂದರು.