More

    ಜಯದೊಂದಿಗೆ ಟೆನಿಸ್​ಗೆ ಮರಳಿದ ಸಾನಿಯಾ

    ಹೋಬರ್ಟ್: ಭಾರತದ ಅಗ್ರ ಆಟಗಾರ್ತಿ ಸಾನಿಯಾ ಮಿರ್ಜಾ ತಾಯ್ತನದ ಬಿಡುವಿನ ಬಳಿಕ ಗೆಲುವಿನೊಂದಿಗೆ ವೃತ್ತಿಪರ ಟೆನಿಸ್​ಗೆ ಮರಳಿದ್ದಾರೆ. ಹೋಬರ್ಟ್ ಇಂಟರ್​ನ್ಯಾಷನಲ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಉಕ್ರೇನ್​ನ ನಾಡಿಯಾ ಕಿಚೆನೋಕ್ ಜತೆಯಾಗಿ ಆಡಿದ 33 ವರ್ಷದ ಸಾನಿಯಾ ಮಿರ್ಜಾ ಕ್ವಾರ್ಟರ್​ಫೈನಲ್​ಗೇರಿದ್ದಾರೆ.

    ಎರಡು ವರ್ಷಗಳ ಬಳಿಕ ಡಬ್ಲ್ಯುಟಿಎ ಸರ್ಕ್ಯೂಟ್​ಗೆ ಮರಳಿದ ಸಾನಿಯಾ ಹಾಗೂ ಕಿಚನೋಕ್ 2-6, 7-6 (3), 10-3 ರಿಂದ ಜಾರ್ಜಿಯಾದ ಒಕ್ಸಾನಾ ಕಲಾಶ್ನಿಕೋವಾ ಹಾಗೂ ಜಪಾನ್​ನ ಮಿಯು ಕಾಟೋ ಜೋಡಿಯನ್ನು 1 ಗಂಟೆ 41 ನಿಮಿಷದ ಹೋರಾಟದಲ್ಲಿ ಮಣಿಸಿದರು. ಇಂಡೋ-ಉಕ್ರೇನ್ ಜೋಡಿ ಮುಂದಿನ ಸುತ್ತಿನಲ್ಲಿ ಅಮೆರಿಕದ ವಾನಿಯಾ ಕಿಂಗ್ ಹಾಗೂ ಕ್ರಿಸ್ಟಿನಾ ಮೆಕ್​ಹಾಲೆ ಜೋಡಿಯನ್ನು ಎದುರಿಸಲಿದೆ. ಅಮೆರಿಕದ ಜೋಡಿ, 4ನೇ ಶ್ರೇಯಾಂಕದ ಜೋಡಿ ಸ್ಪೇನ್​ನ ಜಿಯಾರ್ಜಿನಾ ಗಾರ್ಸಿಯಾ ಪರೇಜ್ ಹಾಗೂ ಸಾರಾ ಸೋರಿಬೆಸ್ ಟೋರ್ವೆರನ್ನು 6-2, 7-5 ರಿಂದ ಸೋಲಿಸಿತು.

    ಸಾನಿಯಾ ಜೋಡಿ ಉತ್ತಮ ಆರಂಭ ಪಡೆದುಕೊಂಡಿರಲಿಲ್ಲ. ಮೊದಲ ಸೆಟ್​ನ ಆರಂಭದಲ್ಲಿಯೇ ಡಬಲ್ ಫಾಲ್ಟ್ ಮಾಡಿ ಕೊಂಡಿದ್ದಲ್ಲದೆ, ತಮಗೆ ಸಿಕ್ಕಿದ 7 ಬ್ರೇಕ್ ಪಾಯಿಂಟ್ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಎರಡು ಬಾರಿ ಸರ್ವ್ ಬ್ರೇಕ್​ಗೂ ಒಳಗಾಗಿದ್ದರಿಂದ ಸೋಲು ಕಂಡಿದ್ದರು. ಆದರೆ, 2ನೇ ಸೆಟ್​ನಲ್ಲಿ ಎದುರಾಳಿ ಆಟಗಾರ್ತಿಯರ ಅಸ್ಥಿರ ನಿರ್ವಹಣೆ ಸಮಬಲ ಸಾಧಿಸಲು ನೆರವಾಯಿತು. ಅಂತಿಮ ಸೆಟ್​ನಲ್ಲಿ ಸಾನಿಯಾ ಜೋಡಿ ಅದ್ಭುತ ನಿರ್ವಹಣೆ ತೋರುವ ಮೂಲಕ ಗೆಲುವು ಕಂಡರು. ಗಾಯದಿಂದಾಗಿ ವಿಶ್ರಾಂತಿ ಪಡೆದುಕೊಂಡಿದ್ದ ಸಾನಿಯಾ, 2018ರ ಏಪ್ರಿಲ್​ನಿಂದ ಪುತ್ರ ಇಜಾನ್​ನ ಜನನದ ಕಾರಣದಿಂದಾಗಿ ಟೆನಿಸ್​ನಿಂದ ವಿಶ್ರಾಂತಿ ಪಡೆದುಕೊಂಡಿದ್ದರು. 2017ರ ಅಕ್ಟೋಬರ್​ನಲ್ಲಿ ನಡೆದ ಚೀನಾ ಓಪನ್​ನಲ್ಲಿ ಸಾನಿಯಾ ಕೊನೆಯದಾಗಿ ಆಡಿದ್ದರು.

    ಭಾರತೀಯ ಟೆನಿಸ್​ನ ಅಗ್ರ ಹೆಸರುಗಳಲ್ಲಿ ಒಂದಾಗಿರುವ ಸಾನಿಯಾ, ಹಿಂದೊಮ್ಮೆ ಡಬಲ್ಸ್​ನಲ್ಲಿ ನಂ.1 ಆಟಗಾರ್ತಿಯಾಗಿದ್ದರು. ಅದಲ್ಲದೆ, 6 ಗ್ರಾ್ಯಂಡ್ ಸ್ಲಾಂ ಪ್ರಶಸ್ತಿಗಳನ್ನೂ ಇವರು ಜಯಿಸಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts