ಬಿಟ್ಟಿ ಸಲಹೆ ನೀಡಿದ್ದ ಪುರುಷರಿಗೆ ಖಡಕ್​ ಪ್ರತಿಕ್ರಿಯೆ ನೀಡಿದ ತುಂಬು ಗರ್ಭಿಣಿ ಸಾನಿಯಾ ಮಿರ್ಜಾ

ಮುಂಬೈ: ಸಾನಿಯಾ ಮಿರ್ಜಾ ಗರ್ಭಿಣಿ ಎಂಬ ವಿಷಯ ತಿಳಿದಾಗಿನಿಂದ ಹಲವು ಜನ ಟ್ವಿಟರ್​ನಲ್ಲಿ ಹಾಗೆ ಮಾಡಿ, ಹೀಗೆ ಮಾಡಿ ಎಂದು ಸಲಹೆ ನೀಡಿದ್ದರು. ಅದರಲ್ಲೂ ಹೆಚ್ಚಾಗಿ ಪುರುಷರೇ ತುಂಬ ಸಲಹೆಗಳನ್ನು ನೀಡಿದ್ದರು. ಕೆಲವರಂತೂ ಗರ್ಭಾವಸ್ಥೆಯಲ್ಲಿ ಆಗುವ ತೊಂದರೆಗಳ ಬಗ್ಗೆಯೇ ಜಾಸ್ತಿ ಹೇಳಿದ್ದರು.

ಇದನ್ನೆಲ್ಲ ನೋಡಿದ ಸಾನಿಯಾ ಈಗ ಅವರಿಗೆಲ್ಲ ಉತ್ತರಿಸುವಂತೆ ಎರಡು ಖಡಕ್​ ಟ್ವೀಟ್​ ಮಾಡಿದ್ದಾರೆ. ನನಗೆ ಸಲಹೆಗಳನ್ನು ನೀಡಿದ, ಅದರಲ್ಲೂ ಹೆಚ್ಚಾಗಿ ಪುರುಷರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಇವರೆಲ್ಲ ಗರ್ಭಾವಸ್ಥೆಯೆಂದರೆ 9 ತಿಂಗಳು ಕಾಲ ಸುಮ್ಮನೆ ಹೊದ್ದು ಮಲಗಿರುವುದು, ಮನೆಯಲ್ಲೇ ಕುಳಿತಿರುವುದು ಹಾಗೇ ಅದೊಂದು ಸಂಕೋಚ ತರುವ ಸಮಯ ಎಂದು ಭಾವಿಸಿರುವಂತಿದೆ ಎಂದು ಒಂದು ಟ್ವೀಟ್​ ಮಾಡಿದ್ದರೆ, ಇನ್ನೊಂದು ಟ್ವೀಟ್​ನಲ್ಲಿ, ಗರ್ಭಿಣಿಯರೆಂದರೆ ರೋಗಗ್ರಸ್ಥರಲ್ಲ. ಅವರು ಅಸ್ಪೃಶ್ಯರೂ ಅಲ್ಲ. ಅವರೂ ಸಹ ಸಹಜವಾಗಿಯೇ ಇರುತ್ತಾರೆ. ನೀವೆಲ್ಲರೂ ಕೂಡ ನಿಮ್ಮ ತಾಯಿಯ ಗರ್ಭದಿಂದಲೇ ಬಂದಿದ್ದೀರಿ ಎಂದು ಪೋಸ್ಟ್​ ಮಾಡಿದ್ದಾರೆ.