ಶೃಂಗೇರಿ: ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಬಹುಮುಖ್ಯ ಎಂದು ಕುದುರೆಗುಂಡಿ ಕರ್ಣಾಟಕ ಬ್ಯಾಂಕ್ ಅಧಿಕಾರಿ ಅರವಿಂದ ಸೋಮಯಾಜಿ ತಿಳಿಸಿದರು.
ಕಿಕ್ರೆ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಯುಗಾದಿ ಪ್ರಯುಕ್ತ ಆಯೋಜಿಸಿದ್ದ ನಾದ ವಸಂತ ಕಾರ್ಯಕ್ರಮದಲ್ಲಿ ಮಾತನಾಡಿ, ಹಬ್ಬದ ದಿನಗಳಲ್ಲಿ ಸಂಗೀತ ಕಾರ್ಯಕ್ರಮಗಳು ಮನಸ್ಸಿಗೆ ಸಂತೋಷ ನೀಡುತ್ತವೆ. ಸಂಗೀತ ಹಾಡುವುದು ಹಾಗೂ ಕೇಳುವುದರಿಂದ ಮನಸ್ಸು ಅರಳುತ್ತದೆ ಎಂದರು.
ಸಂಸ್ಕೃತಿಯ ಎಲ್ಲ ಪ್ರಕಾರಗಳನ್ನು ಅನಾವರಣಗೊಳಿಸುವಲ್ಲಿ ನಾವೆಲ್ಲರೂ ಒಗ್ಗೂಡಿ ಶ್ರಮಿಸಬೇಕು. ಸಾಧಕರು ಮಾಡಿದ ಸಾಧನೆ ಗುರುತಿಸಿ ಪ್ರೋತ್ಸಾಹಿಸಬೇಕು. ಆಗ ಸಮಾರಂಭ ಅರ್ಥಪೂರ್ಣವಾಗುತ್ತದೆ. ಸಂಗೀತ ಮಾನವ ಜೀವನದ ಅವಿಭಾಜ್ಯ ಅಂಗ. ಮಾನಸಿಕ ಏಕಾಗ್ರತೆಗೆ ಸಂಗೀತ ಅತ್ಯುತ್ತಮ ಸಾಧನ. ಸಂಗೀತದಿಂದ ನಮ್ಮೊಳಗಿನ ಸ್ವಾರ್ಥ ಮಾಯವಾಗುತ್ತದೆ ಎಂದು ತಿಳಿಸಿದರು.
ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ತಿಮ್ಮಪ್ಪ ಗೌಡ ಮಾತನಾಡಿ, ಪ್ರಕೃತಿಯಲ್ಲಿ ಆಗುವ ಬದಲಾವಣೆ ಸಂಕ್ರಮಣ ಸ್ಥಿತಿಯೇ ಯುಗಾದಿ. ಪ್ರಕೃತಿ ತನ್ನನ್ನು ತಾನು ಹೊಸರೂಪದಲ್ಲಿ ನವೀಕರಿಸಿಕೊಂಡು ಬೆಳೆಯುತ್ತದೆ. ನಾವೂ ಜೀವನದಲ್ಲಿ ಬರುವ ಸುಖ, ದುಃಖಗಳನ್ನು ಸಮಚಿತ್ತ ಭಾವದಿಂದ ಸ್ವೀಕರಿಸಬೇಕು ಎಂದರು.