ಹೊಸದುರ್ಗ: ಮನಸ್ಸಿನ ವಿಕಾರಗಳನ್ನು ಕಳೆದು ಎಲ್ಲರ ಬದುಕಿಗೆ ಬೆಳಕು ನೀಡುವಂತಹ ಆಚಾರ -ವಿಚಾರ ಎಲ್ಲರಲ್ಲೂ ಮೂಡಬೇಕು ಎನ್ನುವುದೇ ಶಿವಧ್ವಜದ ಮೂಲ ಆಶಯ. ಅದರಂತೆ ಮತ್ತೆ ಕಲ್ಯಾಣ ಅಭಿಯಾನ ಅರಸೀಕೆರೆ, ತಿಪಟೂರಿನ ತಾಲೂಕಿನ ಆಯ್ದ ಗ್ರಾಮಗಳಲ್ಲಿ ನಡೆಯಲಿದೆ ಎಂದು ಸಾಣೇಹಳ್ಳಿ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಹೇಳಿದರು.
ತರಳಬಾಳು ಶಾಖಾ ಮಠದಲ್ಲಿ ಸೋಮವಾರ ಮತ್ತೆ ಕಲ್ಯಾಣದ ಅಂಗವಾಗಿ ಆಯೋಜಿಸಿದ್ದ ಶಿವಧ್ವಜಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಜಗತ್ತಿನ ಜೀವ ಜಂತುಗಳಲ್ಲಿ ಮನುಷ್ಯ ನಾಡು ಪ್ರಾಣಿ ಆಗಬೇಕೆಂದರೆ ವರ್ತನೆಯಲ್ಲಿ ಬದಲಾವಣೆ ಕಾಣಬೇಕು ಎಂದು ಹೇಳಿದರು.
ಮನುಷ್ಯ ಕ್ರೌರ್ಯದ ಗುಣಗಳನ್ನು ತ್ಯಜಿಸಿ ಸದ್ಗುಣ ಹೊಂದುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡರೆ ಬದುಕು ಸಾರ್ಥಕತೆ ಪಡೆಯುತ್ತದೆ. ನಮ್ಮ ಆಲೋಚನೆಗಳು ಅನೇಕರಿಗೆ ಮಾರ್ಗದರ್ಶನವಾಗುವಂತೆ ಇರಬೇಕು ಎಂದು ಹೇಳಿದರು.
ನೋವು ನುಂಗಿಕೊಂಡು ನಲಿವು ನೀಡುವಂತಿರಬೇಕು. ಅಕ್ಕ ಮಹಾದೇವಿಯಂತೆ ಸ್ತುತಿ-ನಿಂದನೆಗಳು ಬಂದರೂ ಕೋಪ-ತಾಪಕ್ಕೆ ಒಳಗಾಗದೆ ಸಮಾಧಾನಿಯಾರಬೇಕು. 12ನೇ ಶತಮಾನದ ಶರಣರು ಪಾಲಿಸಿಕೊಂಡು ಬಂದ ಇದೇ ತತ್ವವನ್ನು ನಾವಿಂದು ಅನುಸರಿಸಬೇಕು ಎಂದು ಹೇಳಿದರು.
ಸಿರಿಗೆರೆಯ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಎಲ್ಲ ಕಾರ್ಯಕ್ರಮಗಳನ್ನೂ ಶಿವಧ್ವಜ ಆರೋಹಣದ ಮೂಲಕ ಪ್ರಾರಂಭಿಸುತ್ತಿದ್ದರು. ಶರಣ ವಚನಗಳ ಹಿನ್ನೆಲೆಯಲ್ಲಿ ಶಿವಧ್ವಜಾರೋಹಣ ಮಾಡುತ್ತಿದ್ದರು. ಬಸವಣ್ಣ, ಅಲ್ಲಮ, ಅಕ್ಕ ಸೇರಿ ಅನೇಕ ಶರಣರು ಶಿವಧ್ವಜದಡಿ ನಿಂತು ಬದುಕು ಕಟ್ಟಿಕೊಳ್ಳುವ ಜತೆಗೆ ಸಮಾಜದ ಬದುಕನ್ನೂ ಕಟ್ಟಿದರು ಎಂದು ಹೇಳಿದರು.
ವಿಶ್ರಾಂತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಶಿವ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮತ್ತೆ ಕಲ್ಯಾಣ ಅತ್ಯಂತ ಶ್ರೇಷ್ಠ ಚಿಂತನೆ ಹಾಗೂ ಜನಜಾಗೃತಿ ಕಾರ್ಯಕ್ರಮವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಜಾಗೃತಿಯಾಗದೇ ಸಾಧನೆ ಸಾಧ್ಯವಿಲ್ಲ. ಒಳ್ಳೆಯ ಬದುಕು, ಮಕ್ಕಳಿಗೆ ಉಜ್ವಲ ಭವಿಷ್ಯ ಬೇಕೆನ್ನುವುದಾದರೆ ಮತ್ತೆ ಕಲ್ಯಾಣದಂತಹ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿರಬೇಕು ಎಂದು ಆಶಿಸಿದರು.
ಒಂದು ತಿಂಗಳ ಕಾಲ ನಡೆಯುವ ಮತ್ತೆ ಕಲ್ಯಾಣ ಕಾರ್ಯಕ್ರಮಕ್ಕಾಗಿ ಶ್ರೀಮಠದಿಂದ ಹೊರಟ ಪಂಡಿತಾರಾಧ್ಯ ಶ್ರೀಗಳನ್ನು ಗ್ರಾಮಸ್ಥರು ವಿಜೃಂಭಣೆಯಿಂದ ಬೀಳ್ಕೊಟ್ಟರು. ಮಠದಿಂದ ಗ್ರಾಮದ ಗಡಿವರಗೆ ಜನಪದ ಕಲಾ ತಂಡಗಳೊಂದಿಗೆ ಪಾದಯಾತ್ರೆ ನಡೆಸಲಾಯಿತು. ಸಾಣೇಹಳ್ಳಿಯಲ್ಲಿ ಸಂಪೂರ್ಣ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಶ್ರೀಗಳು ಸಾಗುವ ರಸ್ತೆಯನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿದ್ದು. ರಸ್ತೆಯನ್ನು ಬಣ್ಣ ಬಣ್ಣದ ರಂಗವಲ್ಲಿ ಮೂಲಕ ಮಹಿಳೆಯರು ಸಿಂಗರಿಸಿದ್ದರು. ಶಿವಧ್ವಜ ಕಟ್ಟಿದ ನೂರಾರು ಬೈಕ್, ಕಾರುಗಳಲ್ಲಿ ಭಕ್ತರು ಶ್ರೀಗಳೊಂದಿಗೆ ತೆರಳಿದರು.