ಅಹೋರಾತ್ರಿ ಧರಣಿಗೆ ಸಾಣೇಹಳ್ಳಿ ಶ್ರೀ ಬೆಂಬಲ

ಬ್ಯಾಡಗಿ: ತಾಲೂಕಿನ ಆಣೂರು ಕೆರೆಗೆ ತುಂಗಭದ್ರಾ ನದಿ ನೀರು ತುಂಬಿಸುವ ಯೋಜನೆ ಬಜೆಟ್​ನಲ್ಲಿ ಘೊಷಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಗುರುವಾರ 2ನೇ ದಿನ ಪೂರೈಸಿದ್ದು, ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯರು ಆಗಮಿಸಿ ಬೆಂಬಲಿಸಿದರು.

ಇಲ್ಲಿನ ತಹಸೀಲ್ದಾರ ಕಾರ್ಯಾಲಯ ಎದುರು ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾವಿರಾರು ರೈತರು ಶಾಮಿಯಾನ ಹಾಕಿಕೊಂಡು ಧರಣಿ ನಡೆಸುತ್ತಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯರು, ರಾಜಕಾರಣಿಗಳಿಗೆ ನೀರಾವರಿ ಯೋಜನೆ ಬೇಕಿಲ್ಲ. ಬದಲಾಗಿ ಸರ್ಕಾರದ ಅಳಿವು-ಉಳಿವಿನ ಚಿಂತೆಯಲ್ಲಿದ್ದಾರೆ. ರೈತ ಕುಲ ಉಳಿದಲ್ಲಿ ದೇಶದ ಸಮೃದ್ಧಿ ಸಾಧ್ಯವೆಂಬ ಸಿದ್ಧಾಂತಕ್ಕೆ ಮನ್ನಣೆ ಬೇಕಿದೆ. ಸಾವಿರ ಅಡಿ ಕೊರೆದರೂ ನೀರಿಲ್ಲ. ಇಂತಹ ಸನ್ನಿವೇಶದಲ್ಲಿ ಹನಿ ನೀರಿನ ಮಹತ್ವ ಅರಿತು, ಭವಿಷ್ಯದ ಯೋಜನೆ ಜಾರಿಗೊಳಿಸಲು ಸರ್ಕಾರ ಮುಂದಾಗಬೇಕು ಎಂದರು.

ಸಿರಿಗೆರೆ ಮಠದಲ್ಲಿ ಸಭೆ: ನೀರಾವರಿ ಹೋರಾಟ ವ್ಯವಸ್ಥಿತವಾಗಿ ನಡೆಯಬೇಕಿದೆ. ಉಪವಾಸದಿಂದ ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೆ ನೀವು ಕಾಣಲ್ಲ. ಸಿರಿಗೆರೆ ಮಠಕ್ಕೆ ಬನ್ನಿ, ಸಂಬಂಧಿಸಿದ ನೀರಾವರಿ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ರ್ಚಚಿಸಿ, ಯೋಜನೆ ಬೇಗನೆ ಜಾರಿಗೊಳಿಸಲು ಒತ್ತಾಯಿಸೋಣ. ಸಿರಿಗೆರೆಯ ಹಿರಿಯ ಶ್ರೀಗಳ ನೇತೃತ್ವದಲ್ಲಿ ಸಭೆ ನಡೆಸಿ, ಅಭಿಪ್ರಾಯಗಳನ್ನು ಸರ್ಕಾರಕ್ಕೆ ತಿಳಿಸೋಣ ಎಂದರು.

ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಹೋರಾಟ ಪಕ್ಷಾತೀತವಾಗಿ ನಡೆದಿದ್ದು, ನೀರಾವರಿ ಯೋಜನೆ ಜಾರಿಗೊಳಿಸಲು ಒತ್ತಾಯಿಸುತ್ತಿದ್ದೇವೆ. ಹೋರಾಟ ನಿರ್ಲಕ್ಷಿಸಿದಲ್ಲಿ ತೀವ್ರಗೊಳಿಸುತ್ತೇವೆ ಎಂದರು.

ಬಾರದ ಜಿಲ್ಲಾಧಿಕಾರಿ: ಹೋರಾಟಕ್ಕೆ ನೀರಾವರಿ ಅಧಿಕಾರಿಗಳು, ಜಿಲ್ಲಾಧಿಕಾರಿ ಸ್ಪಂದಿಸಿಲ್ಲ. ನೀರಾವರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಧರಣಿ ಸ್ಥಳಕ್ಕೆ ಬರುತ್ತಿಲ್ಲ. ಘಟನೆ ಕುರಿತು ಸರ್ಕಾರಕ್ಕೆ ತಕ್ಷಣ ವರದಿ ಕಳುಹಿಸಬೇಕು. ಎರಡು ತಿಂಗಳಿಂದ ಹೋರಾಟ ನಡೆಸಿದರೂ ಮುಖ್ಯಮಂತ್ರಿಗೆ ಸಮರ್ಪಕವಾಗಿ ಮಾಹಿತಿ ನೀಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ ಮುಖಂಡ ಎಸ್.ಆರ್. ಪಾಟೀಲ, ಎಪಿಎಂಸಿ ಅಧ್ಯಕ್ಷ ಕರಬಸಪ್ಪ ನಾಯ್ಕರ, ಪುರಸಭೆ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ರೈತ ಮುಖಂಡರಾದ ರುದ್ರಗೌಡ್ರ ಕಾಡನಗೌಡ್ರ, ಮಲ್ಲಿಕಾರ್ಜುನ ಬಳ್ಳಾರಿ, ಕಿರಣ ಗಡಿಗೋಳ, ಸುರೇಶ ಯತ್ನಳ್ಳಿ, ಶಿವಯೋಗಿ ಶಿರೂರು, ದುರ್ಗೆಶ ಮಾಳಗಿ, ಮಲ್ಲೇಶಣ್ಣ ಚಿಕ್ಕಣ್ಣನವರ, ಮಹಾದೇವಪ್ಪ ಶಿಡೇನೂರು, ಚಿಕ್ಕಪ್ಪ ಛತ್ರದ, ಮಲ್ಲೇಶಪ್ಪ ಡಂಬಳ, ಚಿದಾನಂದ ಬಡ್ಡಿಯವರ, ಚಿಕ್ಕಪ್ಪ ಛತ್ರದ, ವನಿತಾ ಗುತ್ತಲ, ಪ್ರಕಾಶ ಬನ್ನಿಹಟ್ಟಿ ಇತರರಿದ್ದರು.