ಹೊಸದುರ್ಗ: ಮಹಾತ್ಮ ಗಾಂಧಿ ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡು 100 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮ ಸ್ವಾಗತವಾದರೂ ಕೋಟಿ ಖರ್ಚು ಮಾಡುತ್ತಿರುವುದು ಗಾಂಧಿ ವಿಚಾರಧಾರೆಗೆ ವಿರುದ್ಧವಾಗಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಸಾಣೇಹಳ್ಳಿ ಮಠದಲ್ಲಿ ಬುಧವಾರ ಈ ಕುರಿತು ಮಾತನಾಡಿ, 1924ರಲ್ಲಿ ಗಾಂಧೀಜಿ ಬೆಳಗಾವಿ ಅಧೀವೇಶನದಲ್ಲಿ ಭಾಗವಹಿಸಿ ನೂರು ವರ್ಷ ತುಂಬಿದೆ. ಇದರ ಸವಿನೆನಪು ಸ್ವಾಗತಾರ್ಹ. ಆದರೆ ಗಾಂಧಿ ತತ್ವಗಳನ್ನು ಗಾಳಿಗೆ ತೂರಿ ಅವರ ನೆನಪು ಮಾಡಿಕೊಳ್ಳುವುದು. ಅದಕ್ಕಾಗಿ ಕೋಟಿ ಹಣ ದುರ್ವಿನಿಯೋಗ ಮಾಡುವುದು ಗಾಂಧೀಜಿ ಅವರಿಗೆ ಪ್ರಿಯವಾದ ಕಾರ್ಯವಲ್ಲ ಎಂದರು.
ದೀಪಾಲಂಕಾರ, ಪ್ರತಿಮೆ ಅನಾವರಣ ಸಾಂಕೇತಿಕವಾಗಿಟ್ಟು ಗಾಂಧಿ ವಿಚಾರಗಳನ್ನು ಜನಮನದಲ್ಲಿ ಬಿತ್ತುವ ಕಾರ್ಯ ನಡೆಯಬೇಕು. ಅವರ ಕೃತಿಗಳನ್ನು ಕಡಿಮೆ ಬೆಲೆಯಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.
ಸರಳತೆ, ಪ್ರಾಮಾಣಿಕತೆ, ಸತ್ಯ, ಅಹಿಂಸೆ, ಸತ್ಯಾಗ್ರಹದ ಮಹತ್ವವನ್ನು ಅರಿತು ಆ ದಾರಿಯಲ್ಲಿ ಜನಪ್ರತಿನಿಧಿಗಳು ಮೊದಲು ನಡೆಯುವ ಸಂಕಲ್ಪ ಮಾಡಬೇಕು. ಗಾಂಧಿ ಭಾರತಕ್ಕೇ ಮೀಸಲಿಟ್ಟಿರುವ ಕೋಟಿ ಹಣ ಸದುಪಯೋಗವಾಗುವಂತಹ ಯೋಜನೆಗಳನ್ನು ಸರ್ಕಾರ ಹಾಕಿಕೊಳ್ಳಬೇಕು. ಗಾಂಧೀಜಿ ಅವರ ಬದುಕನ್ನು ಕಟ್ಟಿಕೊಡುವಂತಹ ನಾಟಕ, ಸಂಗೀತ, ನೃತ್ಯ, ಪುಸ್ತಕ ಪ್ರಕಟಣೆ ಇಂತಹ ವಿಧಾಯಕ ಚಟುವಟಿಕೆಗಳತ್ತ ಸರ್ಕಾರ ಗಮನಹರಿಸಬೇಕು ಎಂದರು.