ವಾಲ್ಮೀಕಿಗೆ ಅವಮಾನ ಮಾಡಿದ ಕಾಂಗ್ರೆಸ್-ಜೆಡಿಎಸ್

<ಬಿ.ಎಸ್.ಯಡಿಯೂರಪ್ಪ ಆರೋಪ> ಸಂಡೂರಿನಲ್ಲಿ ಬಿಜೆಪಿ ಪ್ರಚಾರ ಸಭೆ> ಸಿದ್ದರಾಮಯ್ಯ ವಿರುದ್ಧ ಟೀಕೆ>

ಸಂಡೂರು(ಬಳ್ಳಾರಿ): ಸಚಿವ ಡಿ.ಕೆ.ಶಿವಕುಮಾರ್ ನಮ್ಮ ಪಕ್ಷದ ಹಿತೈಷಿಗಳು. ಶಾಂತಾರನ್ನು ಗೆಲ್ಲಿಸಲೆಂದೇ ಅವರು ಬಳ್ಳಾರಿಗೆ ಬಂದಿದ್ದಾರೆ. ಅವರನ್ನು ಟೀಕಿಸದಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕುಹಕವಾಡಿದ್ದಾರೆ. ಜತೆಗೆ ವೇದಿಕೆಯಲ್ಲೇ ಶ್ರೀರಾಮುಲು ಸೇರಿ ಇತರರಿಗೆ ‘ಡಿಕೆಶಿಯನ್ನು ಅವರ ಪಾಡಿಗೆ ಬಿಟ್ಟುಬಿಡಿ’ ಎಂದರು.

ಪಟ್ಟಣದಲ್ಲಿ ಶನಿವಾರ ಮತದಾರರ ಸಭೆಯಲ್ಲಿ ಮಾತನಾಡಿದ ಬಿಎಸ್‌ವೈ, ಮೈಸೂರಲ್ಲಿ ಅಪ್ಪ-ಮಗ ಸೇರಿ ಸಿದ್ದರಾಮಯ್ಯರನ್ನು ಸೋಲಿಸಿದರು. ಆದರೆ, ಚುನಾವಣೆ ಬಳಿಕ ರಾಹು-ಕೇತು ಶನಿಗಳಿಂದ ಸೋಲಬೇಕಾಯಿತು ಎಂದಿದ್ದ ಸಿದ್ದರಾಮಯ್ಯ ಈಗ ಅವರೊಂದಿಗೇ ಆಡಳಿತ ನಡೆಸುತ್ತಿರುವುದು ನಾಚಿಕೆಗೇಡು ಎಂದು ಕುಟುಕಿದರು.

ವಾಲ್ಮೀಕಿ ಜಯಂತಿಗೆ ಸಿಎಂ ಎಚ್.ಡಿ,ಕುಮಾರಸ್ವಾಮಿ ಮತ್ತು ಡಿಸಿಎಂ ಪರಮೇಶ್ವರ ಗೈರಾದರೆ, ದೇವೇಗೌಡರು ಪ್ರಶಸ್ತಿ ಸ್ವೀಕರಿಲು ಬಾರದೆ ವಾಲ್ಮೀಕಿಗೆ ಅವಮಾನಿಸಿದ್ದಾರೆ. ಜನರಿಗೆ ದ್ರೋಹ ಬಗೆದ ಜೆಡಿಎಸ್-ಕಾಂಗ್ರೆಸ್‌ನವರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದು, ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಅವರು ಒಂದು ಲಕ್ಷಕ್ಕೂ ಅಧಿಕ ಅಂತರದಿಂದ ಜಯಗಳಿಸಲಿದ್ದಾರೆ ಎಂದರು.

ಪ್ರಮುಖರಾದ ಕರಡಿ ಸಂಗಣ್ಣ, ಶಿವರಾಜ್ ಪಾಟಿಲ್, ಬಸವನಗೌಡ ಪಾಟಿಲ್, ಶಿವನಗೌಡ ಪಾಟಿಲ್, ಚಂದ್ರಪ್ಪ, ರವಿಕುಮಾರ್, ವಿ.ಸೋಮಣ್ಣ, ಭಾರತಿ ತಿಮ್ಮಾರೆಡ್ಡಿ, ಚೆನ್ನಬಸವನಗೌಡ ಪಾಟಿಲ್, ಜಿ.ಟಿ.ಪಂಪಾಪತಿ, ಮಾಲಿಕಯ್ಯ ಗುತ್ತೆದಾರ್, ಡಿ.ರಾಘವೇಂದ್ರ, ಜಿ.ಚಿನ್ನಬಸಪ್ಪ, ಬಂಗಾರು ಹನುಮಂತ, ಶ್ರೀಕಾಂತ ಗೊಂದಿ, ಎಫ್. ಕುಮಾರನಾಯ್ಕ, ಉಡೇದ ಸುರೇಶ, ಓಬಳೇಶ ಇತರರಿದ್ದರು.

 

ಕಾಂಗ್ರೆಸ್‌ಗೆ ಸೋಲಿನ ಭೀತಿ ಕಾಡುತ್ತಿದ್ದು, ಅದಕ್ಕಾಗೇ 50 ಶಾಸಕರು ಬಳ್ಳಾರಿಗೆ ಬಂದಿದ್ದಾರೆ. ಡಿ.ಕೆ.ಶಿವಕುಮಾರ್ ದೊಡ್ಡ ಶ್ರೀಮಂತರಂತೆ. ನಿಮ್ಮ ಹಣವನ್ನು ಬಳ್ಳಾರಿ ಜನ ತುಂಬಾ ನೋಡಿದ್ದಾರೆ. ಇಲ್ಲಿನ ಮಣ್ಣಿನಲ್ಲೇ ಚಿನ್ನವಿದೆ.
| ಶ್ರೀರಾಮುಲು ಬಿಜೆಪಿ ಶಾಸಕ

ಅಂಬೇಡ್ಕರ್ ವಿರುದ್ಧ ಚುನಾವಣೆಯಲ್ಲಿ ಶಾಲೇಲಿ ಗಂಟೆ ಬಾರಿಸುವ ಪೀವನ್‌ನನ್ನು ನಿಲ್ಲಿಸಿದ ಕಾಂಗ್ರೆಸಿಗರು, ಅವರು ಸತ್ತಾಗ ಅಂತ್ಯ ಸಂಸ್ಕಾರಕ್ಕೆ ಜಾಗ ಕೊಡಲಿಲ್ಲ.
| ರಮೇಶ ಜಿಗಜಣಗಿ ಕೇಂದ್ರ ಸಚಿವ

ನಾನು ಇಟಲಿಯವಳಲ್ಲ. ನಿಮ್ಮ ಮನೆ ಮಗಳು. ನೀವು ಸಂಸತ್‌ಗೆ ಆಯ್ಕೆ ಮಾಡಿದಲ್ಲಿ ನಿಮ್ಮ ಸೇವೆ ಮಾಡುವೆ.
| ಜೆ.ಶಾಂತಾ ಬಿಜೆಪಿ ಅಭ್ಯರ್ಥಿ

ಕುಂಟ (ಜೆಡಿಎಸ್) ಮೇಲೆ ಕುಂತವ್ನೆ, ಕುರುಡ (ಕಾಂಗ್ರೆಸ್)ನಡೆಸಿಕೊಂಡು ಹೊರಟವ್ನೆ. ಈ ಕುಂಟ-ಕುಡುರ ಆಟ ಬಹಳ ದಿನ ನಡೆಯಲ್ಲ. ಸಚಿವ ಡಿಕೆಶಿ ಸೇರಿ ಕಾಂಗ್ರೆಸ್‌ನವರು ನಾಲ್ಕು ದಿನವಲ್ಲ, ನಲವತ್ತು ದಿನ ಕುಳಿತರೂ ಬಳ್ಳಾರಿಯಲ್ಲಿ ಬಿಜೆಪಿ ಗೆಲ್ಲುತ್ತೆ.
| ತೇಜಶ್ವಿನಿ ರಮೇಶ್ ಎಂಎಲ್ಸಿ

ಕಾಂಗ್ರೆಸ್ ಸರ್ಕಾರದ ಸಚಿವರು-ಶಾಸಕರು, ಮತ್ತವರ ಹೆಂಡತಿ-ಮಕ್ಕಳು ಹೋಲ್‌ಸೇಲ್ ಆಗಿ ವ್ಯವಹಾರದಲ್ಲಿ ತೊಡಗಿದ್ದಾರೆ.
| ಸಿ.ಟಿ.ರವಿ ಶಾಸಕ