ಬಡವರಿಗೆ ವಸತಿ ಸೌಕರ್ಯ ಒದಗಿಸಿ

ಗ್ರಾಪಂ ಕಚೇರಿ ಎದುರು ಡಿವೈಎಫ್ಐ ನೇತೃತ್ವದಲ್ಲಿ ಸ್ಥಳೀಯರಿಂದ ಪ್ರತಿಭಟನೆ

ಸಂಡೂರು (ಬಳ್ಳಾರಿ): ತಾಲೂಕಿನ ತಾಳೂರು ಗ್ರಾಮದ ಸೂರಿಲ್ಲದ ಬಡವರಿಗೆ ವಸತಿ ಯೋಜನೆಯಡಿ ನಿವೇಶನ ಮಂಜೂರು ಮಾಡಿ ಮನೆ ನಿರ್ಮಿಸಿ ಕೊಡಬೇಕು ಎಂದು ಒತ್ತಾಯಿಸಿ ಡಿವೈಎಫ್ಐ ನೇತೃತ್ವದಲ್ಲಿ ಸ್ಥಳೀಯರು ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿದರು.

ತಾಲೂಕು ಅಧ್ಯಕ್ಷ ಎಸ್.ಕಾಲೂಬಾ ಮಾತನಾಡಿ, ವಸತಿ ಸೌಕರ್ಯಕ್ಕೆ ಜು.24ರಂದು ಗ್ರಾಪಂಗೆ 30ಕ್ಕೂ ಹೆಚ್ಚು ಅರ್ಜಿ ಸಲ್ಲಿಸಲಾಗಿದೆ. ಆದರೆ, ತಾಪಂಯಲ್ಲಿ ತಾಳೂರಿನಿಂದ ಕೇವಲ 4 ಅರ್ಜಿಗಳು ಸಲ್ಲಿಕೆಯಾಗಿವೆ. ಸಂಘಟನೆಯಿಂದ ಸ್ವೀಕೃತಿ ಪಡೆದು ಸಲ್ಲಿಸಿದ 30ಕ್ಕೂ ಹೆಚ್ಚು ಅರ್ಜಿಗಳು ಎಲ್ಲಿ ನಾಪತ್ತೆಯಾದವು?. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಳೂರು, ಜೋಗದಲ್ಲಿ ನೂರಾರು ವಸತಿ ರಹಿತ ಕುಟುಂಬಗಳಿವೆ. ಕೆಲವರಿಗೆ ನಿವೇಶನವಿದ್ದರೆ ಮನೆಯಿಲ್ಲ. ಕೆಲವರು ನಿವೇಶನ ಇಲ್ಲದೆ ಬಾಡಿಗೆ ಮನೆ, ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಒಂದೇ ಮನೆಯಲ್ಲಿ 2-3 ಕುಟುಂಬಗಳು ವಾಸಿಸುತ್ತಿವೆ. ಆದ್ದರಿಂದ ವಿಮುಕ್ತ ದೇವದಾಸಿಯರು ಸೇರಿ ಅರ್ಹ ಲಾನುಭವಿಗಳ ಸಮೀಕ್ಷೆ ಕೈಗೊಂಡು ವಸತಿ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ, ತಾಪಂ ಎಡಿ ಮಡಗಿನ ಬಸಪ್ಪಗೆ ಮನವಿ ಸಲ್ಲಿಸಿದರು. ಮುಖಂಡರಾದ ಎ.ಸ್ವಾಮಿ, ತಿಪ್ಪೇಸ್ವಾಮಿ, ವಿ.ಸ್ವಾಮಿ, ಇಮಾಮ್‌ಸಾಬ್, ಎಚ್.ನಾಗರಾಜ, ಖಾಸಿಂಬೀ ಇತರರಿದ್ದರು.