ಸಂಡೂರು: ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ರಸ್ತೆಗಳು, ಶೈಕ್ಷಣಿಕ, ಆರೋಗ್ಯ, ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಸದ ಈ.ತುಕಾರಾಮ್ ಹೇಳಿದರು.

ಪಟ್ಟಣದಲ್ಲಿ ಸಂಡೂರು ಸ್ಪೋರ್ಟ್ಸ್ ಟ್ರಸ್ಟ್‌ನಿಂದ ಶನಿವಾರ ಆಯೋಜಿಸಿದ್ದ ತಾಲೂಕು ಸರ್ಕಾರಿ ನೌಕರರ ಆಹ್ವಾನಿತ ಶಟಲ್ ಬ್ಯಾಡ್ಮಿಂಟನ್ ಡಬಲ್ಸ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. 80 ಕೋಟಿ ರೂ. ವೆಚ್ಚದಲ್ಲಿ ಕುಡಿವ ನೀರಿನ ವ್ಯವಸ್ಥೆ, 4.5 ಕೋಟಿ ರೂ. ವೆಚ್ಚದಲ್ಲಿ ಐಬಿಯಿಂದ ವಾಕಿಂಗ್ ಪಾಯಿಂಟ್, 1.20 ಕೋಟಿ ರೂ. ವೆಚ್ಚದಲ್ಲಿ ಇಂದಿರಾ ಕ್ಯಾಂಟಿನ್ ಬಳಿ ಜಿಮ್ ನಿರ್ಮಿಸಲಾಗುವುದು. ಹಾಗೆಯೇ ಡಿಎಂಎಫ್ ಅಡಿ 2 ಕೋಟಿ ರೂ. ವೆಚ್ಚದಲ್ಲಿ ಸಂಡೂರಿನ ಎಲ್ಲ ಪಾರ್ಕ್‌ಗಳ ಅಭಿವೃದ್ಧಿ ಮಾಡಲಾಗುವುದು ಎಂದರು.
ತಸೀಲ್ದಾರ ಅನಿಲ್ ಕುಮಾರ್ ಮಾತನಾಡಿ, ನಮ್ಮ ಹಿರಿಯರು ದೀರ್ಘಕಾಲ ಜೀವಿಸುತ್ತಿದ್ದರು. ಆದರೆ, ಇಂದಿನ ದಿನಗಳಲ್ಲಿ ಟಿವಿ, ಮೊಬೈಲ್‌ಗಳ ಅತಿಯಾದ ಬಳಕೆಯಿಂದ 40ರಿಂದ 60 ವರ್ಷ ಜೀವಿಸುವುದು ಕಷ್ಟಕರವಾಗಿದೆ. ಯುವಕರು, ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ, ನಿತ್ಯ ಯೋಗ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರಲು ಸಾಧ್ಯ ಎಂದರು.