ಸಂಡೂರು: ಉದ್ಯೋಗ ಖಾತ್ರಿ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸುವುದಕ್ಕಾಗಿ ಏ.14ರವರೆಗೆ ತಾಲೂಕಿನ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ‘ನಾರಿಯರ ನಡೆ ನರೇಗಾ ಕಡೆ’ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ಉದ್ಯೋಗ ಖಾತ್ರಿ ಎಡಿ ರೇಣುಕಾಚಾರ್ಯ ಸ್ವಾಮಿ ತಿಳಿಸಿದರು.

ಚೋರನೂರು ಗ್ರಾ.ಪಂ.ನಲ್ಲಿ ಗುರುವಾರ ಆಯೋಜಿಸಿದ್ದ ಅಭಿಯಾನದಲ್ಲಿ ಮಾತನಾಡಿದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನರೇಗಾ ಕಾಮಗಾರಿಗಳಲ್ಲಿ ಭಾಗವಹಿಸಿ, ಗ್ರಾ.ಪಂ. ಮಟ್ಟದಲ್ಲಿ ಉತ್ತಮ ಆಸ್ತಿಗಳ ಸೃಜನೆ ಜತೆಗೆ ಗ್ರಾಮಾಭಿವೃದ್ದಿಯಲ್ಲಿ ಪಾಲ್ಗೊಳ್ಳಬೇಕು. ಈ ಯೋಜನೆಯಡಿ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ಆರು ತಿಂಗಳಿಂದ ಮೂರು ವರ್ಷದೊಳಗಿನ ಮಕ್ಕಳ ತಾಯಂದಿರು ಕೂಸಿನ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗಬಹುದು. ಮಕ್ಕಳ ಆರೈಕೆ ಮಾಡಲು ಸಿಬ್ಬಂದಿ ಇರುತ್ತಾರೆ. ನರೇಗಾ ಯೋಜನೆಯಡಿ ಮಹಿಳೆಯರು ಹೆಚ್ಚು ಭಾಗವಹಿಸುವಂತೆ ಮಾಡುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ಹೇಳಿದರು.
ಪಿಡಿಒ ಕರಿಬಸಪ್ಪ, ತಾಲೂಕು ಐಇಸಿ ಸಂಯೋಜಕ ಯಂಕಪ್ಪ, ಡಿಇಒ ಶಿವಕುಮಾರ, ಗ್ರಾಮ ಕಾಯಕಮಿತ್ರ ಲಕ್ಷ್ಮೀ, ಮೇಟಿಗಳು, ಗ್ರಾಪಂ ಸಿಬ್ಬಂದಿ ಹಾಜರಿದ್ದರು.