ಸಂಡೂರು: ತಾಲೂಕಿನ ರಣಜೀತ್ ಪುರ-ನರಸಾಪುರ ಗ್ರಾಮಗಳ ವ್ಯಾಪ್ತಿಯ ಜಮೀನು ಮತ್ತು ತೋಟಗಳಿಗೆ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿವಿ ಹಾಗೂ ಮುನಿರಾಬಾದ್‌ನ ತೋಟಗಾರಿಕಾ ವಿಜ್ಞಾನಿಗಳ ತಂಡ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿತು.
ರಣಜೀತ್‌ಪುರ ಇನ್ಫಾಸ್ಟ್ರೇಕ್ಚರ್ ಪ್ರೈ.ಲಿ.(ಆರ್‌ಐಪಿಎಲ್) ಕಾರ್ಖಾನೆ ಸೂಸುತ್ತಿರುವ ಕಪ್ಪು ಧೂಳಿನಿಂದ ಜಮೀನುಗಳಲ್ಲಿನ ಮಣ್ಣಿನ ಫಲವತ್ತು ಹಾಳಾಗುತ್ತಿದೆ. ಜಮೀನುಗಳಲ್ಲಿ ಬೆಳೆದ ಬೆಳೆಗಳು ಹಾಳಾಗಿವೆ. ಶೇಂಗಾ, ಜೋಳ, ಮೆಕ್ಕೆಜೋಳ, ಹತ್ತಿ ಸೇರಿ ಇತ್ಯಾದಿ ಬೆಳೆಗಳು ಹಾಗೂ ತೋಟಗಾರಿಕೆ ವಾಣಿಜ್ಯ ಬೆಳೆಗಳಾದ ಅಡಿಕೆ, ತೆಂಗು, ಮಾವು, ಬಾಳೆ ಬೆಳೆಗಳಲ್ಲಿ ಕರಿಧೂಳು ಮೆತ್ತಿಕೊಂಡು ಫಸಲು ಕುಂಠಿತವಾಗುತ್ತಿದೆ. ಅಲ್ಲದೆ ಮಿತಿಮೀರಿದ ಕರಿ ಧೂಳಿನಿಂದಾಗಿ ಬೆಳೆಗಳ ಇಳುವರಿಯೂ ಕಡಿಮೆಯಾಗುತ್ತಿದೆ. ರೈತರು ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದಾರೆ. ಕಪ್ಪು ಧೂಳಿನಿಂದ ರೈತರ ಬೆಳೆಗಳ ಮೇಲೆ ಆಗಿರುವ ಹಾನಿಯನ್ನು ಅಧ್ಯಯನ ಮಾಡಬೇಕು ಎಂದು ರೈತ ಸಂಘದ ಅಧ್ಯಕ್ಷ ಕರೂರು ಮಾಧವರೆಡ್ಡಿ ಆಗ್ರಹಿಸಿದರು.
ವಿಠಲನಗರದ, ನರಸಾಪುರ, ರಣಜೀತಪುರದ ರೈತ ಪಿ.ಮಂಜುನಾಥ, ಪಿ.ಸಿ.ಪರಮೇಶ್, ಎಚ್.ಕಾಡಪ್ಪ, ಜಿ.ಕೆ.ನಾಗರಾಜ್ ಮುಂತಾದ ರೈತರ ತೋಟಗಳಿಗೆ ಭೇಟಿ ನೀಡಿದ ವಿಜ್ಞಾನಿಗಳ ತಂಡವು ಅಲ್ಲಿನ ಬಾಳೆ, ಅಡಿಕೆ, ಮೆಕ್ಕೆಜೋಳ ಮುಂತಾದ ಬೆಳೆಗಳ ಮೇಲೆ ಅವರಿಸಿರುವ ಕಪ್ಪು ಧೂಳಿನಿಂದ ಉಂಟಾಗುತ್ತಿರುವ ತೊಂದರೆಗಳ ಮಾಹಿತಿ ಸಂಗ್ರಹಿಸಿದರು.
ಅಡಿಕೆ, ಬಾಳೆ, ಮೆಕ್ಕೆಜೋಳ ಮತ್ತಿತರ ಬೆಳೆಗಳಿಗೆ ಕಾರ್ಖಾನೆಯಿಂದ ಹೊರಸೂಸುವ ಕಪ್ಪು ಧೂಳಿನಿಂದ ನೆಲ, ಜಲ, ಮಲಿನವಾಗಿದೆ. ಅಲ್ಲದೆ ಬೆಳೆಗಳು ಹಾಳಾಗಿವೆ. ಮೆಕ್ಕೆಜೋಳದ ಸೊಪ್ಪಿನ ಮೇಲೆ ಧೂಳು ಕುಳಿತುಕೊಳ್ಳುವುದರಿಂದ ದನಗಳು ತಿನ್ನುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು. ತಾಲೂಕು ತೋಟಗಾರಿಕೆ ಎಡಿ ಹನುಮಪ್ಪ ನಾಯಕ, ವಿಜ್ಞಾನಿಗಳಾದ ಡಾ.ಮುಕೇಶ ಚವ್ಹಾಣ, ಡಾ.ರಾಘವೇಂದ್ರ ಆಚಾರಿ, ಸಸ್ಯರೋಗಶಾಸ್ತ್ರ ಪ್ರಾಧ್ಯಾಪಕ ಡಾ. ಕೃಷ್ಣ ಡಿ.ಕುರುಬೆಟ್ಟ, ಸಹಾಯಕ ಪ್ರಾಧ್ಯಾಪಕ ಬೇಸಾಯ ಶಾಸ್ತ್ರ ಡಾ.ಯೋಗಿಶಪ್ಪ, ತೋಟಗಾರಿಕೆ ಸಹಾಯಕ ಪ್ರಾಧ್ಯಾಪಕ ಡಾ.ಆರ್.ಲೋಕೇಶ, ಸಂಡೂರು ತೋಟಗಾರಿಕೆ ಇಲಾಖೆ ಎಡಿ ಹನುಮಪ್ಪ ನಾಯಕ ಜರಕುಂಠಿ, ಸಹಾಯಕ ತೋಟಗಾರಿಕೆ ನಿರ್ದೇಶಕ ಟಿ.ವಿ.ಉದಯ ಇದ್ದರು.