ಸರ್ಕಾರಿ ನೌಕರರೆಂದು ಘೋಷಿಸಲು ಸಾರಿಗೆ ಸಿಬ್ಬಂದಿಯಿಂದ ಪತ್ರ ಚಳವಳಿ

ಸಂಡೂರು: ಸಾರಿಗೆ ಸಂಸ್ಥೆಯ ನಾಲ್ಕು ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಪಟ್ಟಣ ಡಿಪೋ ನೌಕರರು ಬುಧವಾರ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಪತ್ರ ಬರೆದು ಒತ್ತಾಯಿಸಿದರು.

ರಾಜ್ಯಾದ್ಯಂತ 1.25 ಲಕ್ಷ ನೌಕರರು ಸಾರ್ವಜನಿಕರಿಗೆ ಸಾರಿಗೆ ಸೇವೆ ಕಲ್ಪಿಸುತ್ತಿದ್ದಾರೆ. ಆದರೆ, ವೇತನ, ಪಿಂಚಣಿ, ಆರೋಗ್ಯ ಮತ್ತಿತರ ಸೌಲಭ್ಯಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಇತರೆ ಇಲಾಖೆ, ನಿಗಮ ಮಂಡಳಿ ನೌಕರರಿಗಿರುವ ಸೌಲಭ್ಯಗಳು ನಮಗಿಲ್ಲ. ಇದರಿಂದ ಚಾಲಕರು, ನಿರ್ವಾಹಕರು ಸೇರಿ ಸಾರಿಗೆ ನೌಕರರು ಮನೆ ಬಾಡಿಗೆ ಕಟ್ಟಲಾಗದೆ, ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ರಾಮನಗರ ಚುನಾವಣೆ ಪ್ರಚಾರದ ವೇಳೆ ಸಿಎಂ ಆದರೆ, ನಿಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ (ಕುಮಾರಸ್ವಾಮಿ)ನೀಡಿದ್ದೀರಿ.

ಆದರೆ, ಸಿಎಂ ಆದ ಬಳಿಕ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಆದ್ದರಿಂದ ಪತ್ರ ಚಳವಳಿ ಮೂಲಕ ಮತ್ತೊಮ್ಮೆ ಗಮನಕ್ಕೆ ತರುತ್ತಿದ್ದೇವೆ. ಈಗಲಾದರೂ ನಮ್ಮನ್ನೂ ಸರ್ಕಾರಿ ನೌಕರರೆಂದು ಘೋಷಿಸಿ ಇತರ ಇಲಾಖೆ ನೌಕರರಿಗೆ ನೀಡುವ ಸೌಲಭ್ಯ ನಮಗೂ ವಿಸ್ತರಿಸುವಂತೆ ಪತ್ರದಲ್ಲಿ ಆಗ್ರಹಿಸಿದ್ದಾರೆ.

ನೌಕರರಾದ ದಸ್ತಗಿರ್‌ಸಾಬ್, ಟೋನಿ, ವೆಂಕೋಬಿ, ಹರೀಶ್, ಪರಶುರಾಮ್, ಬಸವನಗೌಡ, ಸಂತೋಷ್, ಜಂಬಯ್ಯ, ಮೆಹಬೂಬ್, ಶಿವಣ್ಣ, ರುದ್ರಪ್ಪ, ಡೋಲೆಪ್ಪ ಇತರರಿದ್ದರು.

Leave a Reply

Your email address will not be published. Required fields are marked *