ಸಂಡೂರು: ನಿರ್ಮಾಣ ವಲಯವು ತೀವ್ರ ಸ್ವರೂಪದಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಆದರೆ, ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಬದುಕಿಗೆ ಸುರಕ್ಷತೆ ಇಲ್ಲವಾಗಿದೆ ಎಂದು ಫೆಡರೇಷನ್ ತಾಲೂಕು ಅಧ್ಯಕ್ಷ ವಿ.ದೇವಣ್ಣ ಹೇಳಿದರು.
ತಾಲೂಕಿನ ಹೊಸದರೋಜಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರು ಹಾಗೂ ಇತರ ನಿರ್ಮಾಣಕಾರರ ಫೆಡರೇಷನ್ ತಾಲೂಕು ಸಮಾವೇಶದಲ್ಲಿ ಮಾತನಾಡಿದರು.
ಶೇ.30 ಮಹಿಳೆಯರು ನಿರ್ಮಾಣ ವಲಯದಲ್ಲಿ ದುಡಿಯುತ್ತಿದ್ದು, ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೌಲಭ್ಯಗಳಿಲ್ಲ. ಕಟ್ಟಡ ಕಾರ್ಮಿಕರ ಬದುಕು ದಯನೀಯವಾಗಿದೆ. ಶೈಕ್ಷಣಿಕ ಧನಸಹಾಯ ಸೇರಿ ಅನೇಕ ಸೌಲಭ್ಯಗಳು ನೈಜ ಕಟ್ಟಡ ಕಾರ್ಮಿಕರಿಗೆ ಸಿಗುತ್ತಿಲ್ಲ. ಬೋಗಸ್ ಕಾರ್ಡ್ ತಡೆಯುವ ನೆಪದಲ್ಲಿ ನಿಜವಾದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ತಾಲೂಕು ಸಹ ಕಾರ್ಯದರ್ಶಿ ಎಸ್.ಕಾಲೂಬಾ ಮಾತನಾಡಿ, ದರೋಜಿಯಲ್ಲಿ ಹೆಚ್ಚು ಮಹಿಳಾ ಕಟ್ಟಡ ಕಾರ್ಮಿಕರಿದ್ದು, ಸೌಲಭ್ಯಗಳನ್ನು ಪಡೆಯಬೇಕು ಎಂದರು. ಎನ್.ಶಂಕ್ರಣ್ಣ ತೋರಣಗಲ್ ಮಾತನಾಡಿದರು.
ಗ್ರಾಮ ಘಟಕದ ಅಧ್ಯಕ್ಷ ವಿ.ರಂಗಸ್ವಾಮಿ, ಖಜಾಂಚಿ ಯರಿಸ್ವಾಮಿ, ಮುಖಂಡರಾದ ವಿ.ಪಾಂಡುರಂಗ, ವಿ.ಚಂದ್ರ, ವಿ.ದೊಡ್ಡ ರಂಗಸ್ವಾಮಿ, ವಿ.ವೆಂಕಟೇಶ್, ಎರಿಸ್ವಾಮಿ, ಸುಧಾಕರ್, ಮಹಿಳಾ ಕಾರ್ಮಿಕರಾದ ವಿ.ಬಸಮ್ಮ, ವಿ.ಶಾಂತಮ್ಮ, ವಿ.ಚಾಮುಂಡಿ, ವಿ.ಅನಂತಮ್ಮ ಇತರರಿದ್ದರು.