ಸಂಡೂರು: ಮಹಿಳೆಯರು ಸಮಾಜದ ಅಡಿಪಾಯ ನಿರ್ಮಿಸುವಲ್ಲಿ ಪ್ರಮುಖರಾಗಿದ್ದಾರೆ ಎಂದು ಬಳ್ಳಾರಿ ವೆಂಕಟಸಾಯಿ ಇಂಡಸ್ಟ್ರೀಸ್ ಮಾಲೀಕ ಡಿ.ಚಂದ್ರಿಕಾ ಸತೀಶ್ ಹೇಳಿದರು.
ತಾಲೂಕಿನ ಕೃಷ್ಣಾನಗರ ಸಮೀಪದ ಬಿಕೆಜಿ ಗ್ಲೋಬಲ್ ಶಾಲೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಇಂದು ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ದಾಪುಗಾಲಿಡುತ್ತಿದ್ದಾರೆ. ಮಹಿಳೆಯರು ತಮ್ಮ ಗುರಿಗಳನ್ನು ಸಾಧಿಸಲು ಸಂಕಲ್ಪಬದ್ಧರಾಗಿದ್ದಾರೆ ಏನನ್ನಾದರೂ ಸಾಧಿಸಬಹುದು. ತಾಯಿ, ಮಗಳು, ತಂಗಿ, ಅಕ್ಕ, ಪತ್ನಿ, ಉದ್ಯೋಗಿ, ತೀರ್ಪುಗಾರ್ತಿ, ರಾಜಕಾರಣಿ, ವಿಜ್ಞಾನಿ, ಶಿಕ್ಷಕಿಯಾಗಿ ಹೀಗೆ ಹಲವಾರು ಕ್ಷೇತ್ರದಲ್ಲಿ ಪ್ರೇರಕ ಶಕ್ತಿಯಾಗಿ ತನ್ನ ಪಾತ್ರ ನಿಭಾಯಿಸುತ್ತಿದ್ದಾಳೆ ಎಂದರು.
ಶಾಲೆ ಸಂಸ್ಥಾಪಕ ಟ್ರಸ್ಟಿ ಬಿ.ನಾಗನಗೌಡ ಮಾತನಾಡಿ, ಈ ಜಗತ್ತಿನಲ್ಲಿ ತಾಯಿಯ ಪ್ರೀತಿಗೆ ಸಮಾನವಾದುದು ಮತ್ತೊಂದಿಲ್ಲ. ತಾಯಿ ತನ್ನ ಕುಟುಂಬವನ್ನು ನಿರ್ವಹಿಸುವ ಶಕ್ತಿಯನ್ನು ಹೊಂದಿದ್ದಾಳೆ. ಕುಟುಂಬದ ಶಾಂತಿ, ಅಭಿವೃದ್ಧಿ ಮತ್ತು ಭದ್ರತೆ ಮಹಿಳೆಯರ ಕೈಯಲ್ಲಿದೆ. ಪ್ರಪಂಚದ ಎಲ್ಲ ಮಹಾನ್ ನಾಯಕರ ಬದುಕನ್ನು ನೋಡಿದರೆ, ಅವರ ಹಿಂದೆ ಒಬ್ಬ ಪ್ರಬಲ ಮಹಿಳೆಯ ಪ್ರಭಾವವಿದೆ. ಆದ್ದರಿಂದ, ಅವರಿಗೆ ನಾವು ಎಲ್ಲ ಕ್ಷೇತ್ರಗಳಲ್ಲಿ ಪ್ರಾಧಾನ್ಯತೆ ನೀಡಬೇಕು. ಮಹಿಳಾ ಸಬಲೀಕರಣವು ಸಮಾಜದ ಶ್ರೇಯೋಭಿವೃದ್ಧಿಗೆ ಅವಶ್ಯ ಎಂದರು.
ಬಿಕೆಜಿ ಫೌಂಡರ್ ಬಿ.ಕಮಲಮ್ಮ ಮಾತನಾಡಿ, ಇಂದಿನ ದಿನದಲ್ಲಿ ವೈಜ್ಞಾನಿಕ, ರಾಜಕೀಯ, ಕಲೆ, ಕ್ರೀಡೆ, ಕೃಷಿ, ತಂತ್ರಜ್ಞಾನ, ಉದ್ದಿಮೆಯಲ್ಲಿ ಮಹಿಳೆಯರು ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಪ್ರತಿಯೊಬ್ಬ ಮಹಿಳೆ ತನ್ನ ಶಕ್ತಿ ಅರಿತು, ಧೈರ್ಯ, ಆತ್ಮವಿಶ್ವಾಸದಿಂದ ಮುಂದೆ ಬರಬೇಕು ಎಂದರು.
