ಸಂಡೂರು: ತಾಲೂಕಿನ ಅಗ್ರಹಾರ ಗ್ರಾ.ಪಂ. ಬಳಿ ಇರುವ ಸರ್ಕಾರಿ ಜಾಗದಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ಆರಂಭಿಸುವಂತೆ ಆಗ್ರಹಿಸಿ ರೈತಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕದಿಂದ ಸೋಮವಾರ ಪ್ರಭಾರ ಪಿಡಿಒ ಕುಮಾರಸ್ವಾಮಿಗೆ ಮನವಿ ಸಲ್ಲಿಸಲಾಯಿತು.

ರೈತ ಸಂಘದ ತಾಲೂಕು ಉಪಾಧ್ಯಕ್ಷ ಟಿ.ಯರ‌್ರಿಸ್ವಾಮಿ ಮಾತನಾಡಿ, ಆಗ್ರಹಾರ ಗ್ರಾಮದ ಗ್ರಾ.ಪಂ. ಬಳಿ ಇರುವ ಸರ್ಕಾರಿ ಜಾಗದಲ್ಲಿ ಏಳು ಹಳ್ಳಿಗಳ ಕಸ ವಿಲೇವಾರಿ ಮಾಡಲಾಗುತ್ತಿದ್ದು, ಅಲ್ಲಿ ತ್ಯಾಜ್ಯ ಸಂಸ್ಕರಣ ಘಟಕವೂ ಇಲ್ಲ. ಇದರಿಂದಾಗಿ ತ್ಯಾಜ್ಯ ಹಾರಿ ಹೋಗಿ ರೈತರ ಭೂಮಿ ಸೇರುತ್ತಿದೆ ಎಂದು ದೂರಿದರು.
ಮಣ್ಣಲ್ಲಿ ಕರಗದ ಪ್ಲಾಸ್ಟಿಕ್‌ನಿಂದ ಕೃಷಿ ಜಮೀನಿನ ಫಲವತ್ತತೆ ಹಾಳಾಗುತ್ತದೆ. ತ್ಯಾಜ್ಯ ವಿಲೇವಾರಿ ವಾಹನ ಬಂದು ಒಂದು ವರ್ಷ ಗತಿಸಿದರೂ ಇದುವರೆಗೆ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಿಸುತ್ತಿಲ್ಲ. ಗ್ರಾ.ಪಂ.ಗೆ ಸಂಬಂಧಿಸಿದ ಎಂಟು ಎಕರೆ ಭೂಮಿಯಿದ್ದು, ಅದರಲ್ಲೇ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಿಸಬೇಕೆಂದು ಒತ್ತಾಯಿಸಿದರು. ಗ್ರಾಮ ಘಟಕದ ಅಧ್ಯಕ್ಷ ಮಹೇಶ್, ಕೆ.ಕೊಟ್ರೇಶಿ, ಟಿ.ಗುರುಸ್ವಾಮಿ, ತಾತಪ್ಪ, ಎಚ್.ನಾಗರಾಜ್, ತಿಪ್ಪೇಸ್ವಾಮಿ ಮುಂತಾದವರಿದ್ದರು.