
ಸಂಡೂರು: ಹದಿಹರೆಯದಲ್ಲಿ ಆರೋಗ್ಯವಾಗಿರಲು ಎಲ್ಲ ರೀತಿಯ ಅರಿವು ಅಗತ್ಯ ಎಂದು ಪ್ರಭಾರ ಮುಖ್ಯಶಿಕ್ಷಕಿ ಅಂಬುಜಾ ತಿಳಿಸಿದರು.
ತಾಲೂಕಿನ ತೋರಣಗಲ್ಲು ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹದಿಹರೆಯದವರ ಆರೋಗ್ಯ ದಿನಾಚರಣೆ ಕುರಿತು ಶುಕ್ರವಾರ ಮಾತನಾಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಅಕ್ಟೋಬರ್ ಎರಡರವರೆಗೆ ವಿವಿಧ ಆರೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಹದಿಹರೆಯದ ಮಕ್ಕಳಿಗೆ ದೈಹಿಕ, ಮಾನಸಿಕ, ಸಾಮಾಜಿಕ ಬೆಳವಣಿಗೆ ಕುರಿತು ಅರಿವು ಅವಶ್ಯ. ಇದಿಲ್ಲದಿದ್ದರೆ ಮನಸ್ಸು ಬೇಡವಾದ ಕಡೆ ಹರಿದು ಹಲವು ಸಮಸ್ಯೆ ಎದುರಿಸುವ ಜತೆಗೆ ಆರೋಗ್ಯವೂ ಹಾಳಾಗುತ್ತದೆ. ಹೀಗಾಗಿ ಸ್ಥಳೀಯವಾಗಿ ಸಿಗುವ ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ ಆರೋಗ್ಯಕರ ಬದುಕು ಸಾಗಿಸಬೇಕು ಎಂದರು.
ಹೆಣ್ಣು ಮಕ್ಕಳು ಗುಡ್ ಆ್ಯಂಡ್ ಬ್ಯಾಡ್ ಟಚ್ ಬಗ್ಗೆ ಎಚ್ಚರ ವಹಿಸಬೇಕು. ಎಲ್ಲರೂ ಪೋಕ್ಸೋ ಕಾಯ್ದೆ ಕುರಿತು ತಿಳಿದುಕೊಳ್ಳಬೇಕು. ಯಾವುದೇ ಸಮಯದಲ್ಲಿ ಅಪಾಯದ ಮುನ್ಸೂಚನೆ ಕಂಡುಬಂದಾಗ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಬಹುದು. ಅಪಾಯಕ್ಕೆ ಸಿಲುಕುವ ಮುನ್ನವೇ ಎಚ್ಚರದಿಂದ ಇರಬೇಕು ಎಂದು ತಿಳಿಸಿದರು.
ನಂತರ ಗುರಿ ಮತ್ತು ಸಾಧನೆ ಕುರಿತು ಮಕ್ಕಳಿಂದ ಬೆಲೂನ್ ಚಟುವಟಿಕೆ ಮಾಡಿಸಿ ವಿಜೇತರಿಗೆ ಪುಸ್ತಕ, ಪೆನ್ನು ನೀಡಲಾಯಿತು. ಶಿಕ್ಷಕಿ ದೀಪಾ, ಉಜ್ವಲಾ, ಪುಷ್ಪಲತಾ, ಅರ್‌ಕೆಎಸ್‌ಕೆ ಪ್ರಶಾಂತ್ ಇತರರಿದ್ದರು.