More

    ಸಹನೆ ಕಲಿಸಿದ ಗುರು ಅನುಭವದ ಆಗರ

    ಕನ್ನಡ ಚಿತ್ರರಂಗದ ಅಪ್ರತಿಮ ಪ್ರತಿಭಾವಂತ ನಟ-ನಿರ್ದೇಶಕ-ನಿರ್ವಪಕ ಕಾಶೀನಾಥ್, ನಮ್ಮನ್ನೆಲ್ಲ ಅಗಲಿ ಇಂದಿಗೆ ಭರ್ತಿ 2 ವರ್ಷ. ಅದೆಷ್ಟೋ ಜನರಿಗೆ ಗುರು ಎನಿಸಿಕೊಂಡಿದ್ದ ಅವರ ಪಾಲಿನ ಶ್ರೇಷ್ಠ ಶಿಷ್ಯ ಎಂದರೆ ಉಪೇಂದ್ರ. ಇನ್ನು ‘ಅನುಭವ’ ಸಿನಿಮಾ ಎಂದಾಕ್ಷಣ ಕಾಶೀನಾಥ್ ಜತೆಗೇ ನೆನಪಾಗುವ ಮತ್ತೊಂದು ಹೆಸರು ಅಭಿನಯ. ಕಾಶೀನಾಥ್ ಜತೆಗೆ ಉಪೇಂದ್ರ ಹಾಗೂ ಅಭಿನಯ ಅವರ ‘ಅನುಭವ’ದ ಅನಿಸಿಕೆಗಳ ಝುಲಕ್ ಇಲ್ಲಿದೆ.

    ಚಿರಪರಿಚಿತ ಆಗಿಸಿದ ಅಪರಿಚಿತ

    ‘ಅವರೊಂದಿಗೆ ‘ಅನುಭವ’ ಸಿನಿಮಾದಲ್ಲಿ ಅಭಿನಯಿಸಿದ್ದಾಗ ನಾನಿನ್ನೂ ಚಿಕ್ಕಹುಡುಗಿ. ನನಗೆ ಏನೆಂದರೆ ಏನೂ ಗೊತ್ತಿರಲಿಲ್ಲ. ಹೀಗಾಗಿ ಅದಾಗಲೇ ಅವರು ‘ಅಪರಿಚಿತ’ ಸಿನಿಮಾ ಮೂಲಕ ಜನಪ್ರಿಯರಾಗಿದ್ದರೂ ನನಗೆ ಅಪರಿಚಿತರಾಗೇ ಇದ್ದರು. ಚಿತ್ರದ ಕಥೆ ಕೂಡ ನನ್ನ ಅಮ್ಮ ಕೇಳಿದ್ದು, ಅವರು ಅಭಿನಯಿಸು ಎಂದರು ಅಭಿನಯಿಸಿದೆ. ಅದೊಂದು ‘ಅನುಭವ’ ನನ್ನನ್ನು ಈಗಲೂ ‘ಅನುಭವ ಅಭಿನಯ’ ಎಂದೇ ಗುರುತಿಸುವಂತೆ ಮಾಡಿದೆ..’

    – ಹೀಗೆಂದು ಕಾಶೀನಾಥ್ ಅವರೊಂದಿಗೆ ಮೊದಲ ಚಿತ್ರದಲ್ಲೇ ನಾಯಕಿಯಾಗಿ ಅಭಿನಯಿಸಿದ ಅನುಭವ ಹಂಚಿಕೊಂಡರು ಅಭಿನಯ. ‘ಕಾಶೀನಾಥ್ ಅವರು ನಮ್ಮನ್ನೆಲ್ಲ ಅಗಲಿ 2 ವರ್ಷ ಆಯಿತೆಂದರೆ ನಂಬಲಿಕ್ಕೇ ಆಗುತ್ತಿಲ್ಲ. ಏಕೆಂದರೆ ನಮ್ಮೊಳಗೆ ಅವರಿನ್ನೂ ಜೀವಂತವಾಗಿದ್ದಾರೆ. ಪ್ರತಿ ಸಲ ಮೇಕಪ್ ಹಾಕಿಕೊಳ್ಳುವಾಗಲೂ ಅವರು ನೆನಪಾಗುತ್ತಲೇ ಇರುತ್ತಾರೆ’ ಎನ್ನುತ್ತ ಕೃತಜ್ಞತಾಭಾವ ವ್ಯಕ್ತಪಡಿಸಿದರು ಅಭಿನಯ. ಕಾಶೀನಾಥ್ ಎಂಥ ಪ್ರತಿಭಾವಂತರು ಎಂಬುದಕ್ಕೆ ಅವರು ಒಂದು ಘಟನೆಯನ್ನು ಸ್ಮರಿಸಿಕೊಳ್ಳುತ್ತಾರೆ. ‘ಆಗಿನ್ನೂ ಅನುಭವ ಚಿತ್ರದ ಶೂಟಿಂಗ್ ಮುಗಿದಿತ್ತು ಅಷ್ಟೇ. ಪುಟ್ಟಣ್ಣ ಕಣಗಾಲ್ ಅವರು ತಮ್ಮ ಚಿತ್ರದಲ್ಲಿನ ತಂಗಿ ಪಾತ್ರವೊಂದಕ್ಕೆ ಕರೆಸಿದ್ದರು. ಅಲ್ಲಿಗೆ ಹೋದಾಗ ಅವರು ಪರಿಚಯ ಕೇಳಿದ್ದಕ್ಕೆ ‘ಈಗಿನ್ನೂ ಅನುಭವ ಸಿನಿಮಾದಲ್ಲಿ ಮಾಡಿದ್ದಾಳಷ್ಟೇ’ ಎಂದು ಅಮ್ಮ ಹೇಳಿದರು. ಹೌದಾ.. ಕಾಶೀನಾಥ್ ಅವರ ಅನುಭವ ಸಿನಿಮಾದಲ್ಲಿ ನಾಯಕಿ ಆಗಿ ಮಾಡಿದ ಮೇಲೆ ನೀನು ಈಗಲೇ ತಂಗಿ ಪಾತ್ರ ಮಾಡುವುದು ಸರಿಯಲ್ಲ’ ಎಂದು ಪುಟ್ಟಣ್ಣ ಅವರು ವಾಪಸ್ ಕಳಿಸಿದ್ದರು ಎನ್ನುತ್ತಾರೆ ಅಭಿನಯ.

    ‘ಅವರಿಂದ ನಾನು ಶ್ರದ್ಧೆ, ತಾಳ್ಮೆ, ಶಿಸ್ತು ಕಲಿತೆ. ಅವರ ಒಂದು ಸಿನಿಮಾದಲ್ಲಿ ಮಾಡಿದ್ದು ಒಂದು ಇನ್​ಸ್ಟಿಟ್ಯೂಟ್​ನಲ್ಲಿ ಅಭ್ಯಾಸ ಮಾಡಿದ ಹಾಗಾಯಿತು. ಮೊದಲ ಸಿನಿಮಾ ಅವರೊಂದಿಗೆ ಮಾಡಿದ್ದರಿಂದ ಆ ನಂತರ ಅದೆಷ್ಟು ಸಿನಿಮಾ ಮಾಡಿದರೂ ಕಷ್ಟ ಎನಿಸಲಿಲ್ಲ’ ಎಂಬುದು ಅಭಿನಯ ಅವರ ಅನುಭವ.

    ಪ್ರಪಂಚಕ್ಕಷ್ಟೇ ಇಲ್ಲದಿರಬಹುದು ನನ್ನೊಳಗೆ ಸದಾ ಜೀವಂತ

    ‘ಗುರು ಕಾಶೀನಾಥ್ ಅವರು ಪ್ರಪಂಚಕ್ಕಷ್ಟೇ ಇಲ್ಲದಿರಬಹುದು. ಆದರೆ ನನಗಂತೂ ಮನಸಲ್ಲಿ ಜೀವಂತವಾಗಿದ್ದಾರೆ’ ಎನ್ನುತ್ತಲೇ ಕಾಶೀನಾಥ್ ಕುರಿತು ಮಾತನಾಡಿದವರು ಅವರ ಶಿಷ್ಯ, ರಿಯಲ್ ಸ್ಟಾರ್ ಉಪೇಂದ್ರ.

    ‘ನಾನು ಈಗಲೂ ಅವರನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿರುತ್ತೇನೆ. ಆಗೆಲ್ಲ ಅವರ ಬಳಿ ತುಂಬ ಸಲಹೆ ಕೇಳುತ್ತಿದ್ದೆ. ನನಗೆ ಆಗ ಗುರು ಅಂತ ಇದ್ದಿದ್ದು ಅವರೇ. ಮನಸಿಗೇನಾದರೂ ಅನಿಸಿದಾಗ ಅವರ ಬಳಿಗೆ ಹೋಗುತ್ತಿದ್ದೆ. ಏನಾದರೊಂದು ಸಲಹೆ ನೀಡುತ್ತಿದ್ದರು’ ಎನ್ನುತ್ತ ಹಳೇ ಘಟನೆಗಳನ್ನು ನೆನಪಿಸಿಕೊಂಡರು ಉಪ್ಪಿ.

    ‘ನನ್ನ ಸಿನಿಮಾ ಜೀವನದ ಆರಂಭ ಅವರ ಜತೆಗೇ ಆಗಿದ್ದರಿಂದ ಅವರೊಂದಿಗೆ ಕಳೆದ ಎಲ್ಲ ಕ್ಷಣಗಳೂ ಸ್ಮರಣೀಯ. ಅವರ ಜತೆ ಚರ್ಚೆಗೆ ಕುಳಿತಿದ್ದು, ಸ್ಕ್ರಿಪ್ಟ್ ಮಾಡಿದ್ದು, ಎಲ್ಲಕ್ಕಿಂತ ಹೆಚ್ಚು ಅವರ ಸಲಹೆ ತೆಗೆದುಕೊಂಡಾಗ ಸಿಗುತ್ತಿದ್ದ ಆನಂದವನ್ನು ನಾನು ಈಗ ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ಅವರು.

    ಗುರುವಾಗಿ ಕಾಶೀನಾಥ್ ಅವರು ಕಲಿಸಿದ್ದು ಏನು? ಎಂದು ಕೇಳಿದರೆ ತಾಳ್ಮೆ ಎನ್ನುತ್ತಾರೆ ಉಪೇಂದ್ರ. ‘ತಾಳ್ಮೆ ಎಂದರೇನು ಎಂಬುದನ್ನು ಅವರನ್ನು ನೋಡಿಯೇ ಕಲಿಯಬೇಕು. ಜೀವನ, ಸಿನಿಮಾ ಎಲ್ಲದಕ್ಕೂ ಸಹನೆ ಮುಖ್ಯ. ಯಾರಿಗೆ ಆ ತಾಳ್ಮೆ ಇರುತ್ತದೋ ಅವನು ಜೀವನದಲ್ಲಿ ತುಂಬ ಮುಂದೆ ಬರುತ್ತಾನೆ. ಅಂಥ ತಾಳ್ಮೆಯನ್ನು ನಾವು ಸ್ವಲ್ಪಸ್ವಲ್ಪ ಕಲಿತಿದ್ದೇ ಅವರಿಂದ’ ಎನ್ನುತ್ತಾರೆ ರಿಯಲ್ ಸ್ಟಾರ್.

    ಇನ್ನು ಕಾಶೀನಾಥ್ ಅವರ ಜತೆ ಒಂದು ಸಿನಿಮಾದಲ್ಲಿ ಪೂರ್ಣಪ್ರಮಾಣದಲ್ಲಿ ನಟಿಸಬೇಕು ಎಂಬ ಆಸೆ ಕನಸಾಗಿಯೇ ಉಳಿದಿರುವುದಕ್ಕೆ ಅವರಿಗೆ ತುಂಬ ಬೇಸರವಿದೆ. ‘ನನ್ನ ನಿರ್ದೇಶನದ ‘ಶ್’ ಸಿನಿಮಾದಲ್ಲಿ ಅವರು ಒಂದು ಸಣ್ಣ ದೃಶ್ಯದಲ್ಲಿ ನಟಿಸಿದ್ದರು. ಅದು ಹೆಮ್ಮೆಯ ಸಂಗತಿ. ಆದರೆ ಅವರೊಂದಿಗೆ ಪೂರ್ಣಪ್ರಮಾಣದಲ್ಲಿ ಒಂದು ಚಿತ್ರದಲ್ಲಿ ನಟಿಸಲು ಕಾಲ ಕೂಡಿಬರಲೇ ಇಲ್ಲ. ಆ ನೋವು ಇವತ್ತಿಗೂ ಇದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕಾಶಿ ಶಿಷ್ಯ.

    ಸಿನಿಮಾ ವಿಷಯದಲ್ಲಿ ಈಗಿನ ನಿರ್ದೇಶಕರು ಅಥವಾ ಕಿರಿಯ ನಿರ್ದೇಶಕರು ಕಾಶೀನಾಥ್​ರಿಂದ ಕಲಿಯಬೇಕಾದ್ದೆಂದರೆ ಪ್ಲಾ್ಯನಿಂಗ್. ‘ಅವರು ಒಂದು ಚಿತ್ರವನ್ನು 3-4 ತಿಂಗಳಲ್ಲಿ ಮುಗಿಸಿದರೂ ಒಂದು ವರ್ಷ ಪ್ಲಾ್ಯನಿಂಗ್ ಮಾಡುತ್ತಿದ್ದರು. 6 ತಿಂಗಳು ಪ್ಲಾ್ಯನ್, ಇನ್ನಾರು ತಿಂಗಳು ಸ್ಕ್ರಿಪ್ಟ್ ಮಾಡುತ್ತಿದ್ದರು. ಮಾತ್ರವಲ್ಲ ಒಂದೊಂದು ದಿನಕ್ಕೂ ಎ-ಬಿ-ಸಿ ಎಂದು 3 ಆಪ್ಷನ್ ಇಟ್ಟುಕೊಂಡಿರುತ್ತಿದ್ದರು. ಶೇ. 100 ಪರಿಪೂರ್ಣ ಎನಿಸಿದರೆ ಮಾತ್ರ ಚಿತ್ರೀಕರಣ ಶುರು ಮಾಡುತ್ತಿದ್ದರು. ನಟ, ನಿರ್ದೇಶಕ, ನಿರ್ವಪಕ ಎಲ್ಲವೂ ಅವರೇ ಆಗಿರುತ್ತಿದ್ದುದರಿಂದ ಅವರಿಗದು ಅಗತ್ಯವೂ ಇತ್ತು. ಆತುರ ಪಡದೆ ಎಲ್ಲವನ್ನೂ ಕಲಿಯಬೇಕು ಎಂಬುದನ್ನು ಅವರು ತಮ್ಮ ಕಾರ್ಯದ ಮೂಲಕವೇ ಹೇಳುತ್ತಿದ್ದರು’ ಎನ್ನುತ್ತಾರೆ ಉಪೇಂದ್ರ.

    ಗುರು ಎಂದಮೇಲೆ ಹಿತನುಡಿ, ಉಪದೇಶ ಇದ್ದೇ ಇರುತ್ತದೆ. ‘ಅವರು ನಮಗೆ ಆಗಾಗ ನೀಡುತ್ತಿದ್ದ ಹಿತವಚನ ಎಂದರೆ ಅಬ್ಸರ್ವೆಷನ್, ಅನಲೈಸೇಷನ್, ಅಪ್ಲಿಕೇಷನ್ ಎಂಬ ಮೂರು ಸಂಗತಿ. ಪ್ರತಿಯೊಂದನ್ನೂ ಗಮನಿಸಬೇಕು, ವಿಶ್ಲೇಷಿಸಬೇಕು, ಆನಂತರವೇ ಅದನ್ನು ಕಾರ್ಯರೂಪಕ್ಕೆ ತರಬೇಕು’ ಎಂದು ಕಾಶೀನಾಥ್ ಅವರು ಹೇಳಿದ್ದ ಆ ಉಪದೇಶ ಎಲ್ಲರೂ ಪಾಲಿಸಬೇಕು ಎಂಬ ಆಶಯ ಉಪೇಂದ್ರ ಅವರದು.

    | ರವಿಕಾಂತ ಕುಂದಾಪುರ ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts