ಗಂಧದ ಮರ ಬೆಳೆಯುವ ರೈತನೇ ಮಾಲೀಕ

|ದ್ವಾರಕನಾಥ್​ ಎಲ್​.

ಬರುವ ದಿನಗಳಲ್ಲಿ ರಾಜ್ಯದ ರೈತರು ತಮ್ಮ ಜಮೀನಿನಲ್ಲಿ ನಿಶ್ಚಿಂತೆಯಿಂದ ಶ್ರೀಗಂಧ ಬೆಳೆಸಬಹುದು. ಬೆಳೆಸಿದ ಗಂಧದ ಸಸಿಯನ್ನು ಕಳ್ಳರೇನಾದರೂ ಕಡಿದು ಹೊತ್ತೊಯ್ದರೆ ಪೊಲೀಸರಿಗೆ ದೂರನ್ನೂ ಕೊಡಬಹುದು. ಅವರು ಕೂಡ ಈ ಕಳ್ಳರನ್ನು ಹಿಡಿಯುವ ಬದಲು ‘ಯಾರ ಪರ್ವಿುಷನ್ ಪಡೆದು ಶ್ರೀಗಂಧ ಬೆಳೆದಿದ್ದೀರಿ?’ ಎಂದು ನಿಮ್ಮನ್ನೇ ಪ್ರಶ್ನಿಸುವುದಿಲ್ಲ. ಎಲ್ಲೇ ಶ್ರೀಗಂಧ ಬೆಳೆದಿದ್ದರೂ, ಖಾಸಗಿಯಾಗಿ ಕಷ್ಟಪಟ್ಟು ಬೆಳೆಸಿದ್ದರೂ ಅದು ಬೆಳೆದವರದ್ದಲ್ಲ, ಸರ್ಕಾರದ್ದು ಎಂದು ಅಬ್ಬರಿಸಿ ಕೇಸ್ ಜಡಿಯುವುದಿಲ್ಲ. ಏಕೆಂದರೆ ಇನ್ನು ಮುಂದೆ ಶ್ರೀಗಂಧ ಬೆಳೆಗಾರರೇ ಮಾಲೀಕರು ಎಂಬ ಕಾನೂನು ಬರುವ ಲಕ್ಷಣಗಳು ಕಾಣಿಸತೊಡಗಿವೆ. ರಾಜ್ಯದ ರೈತರಿಗೆ ಪ್ರಮುಖ ಆದಾಯದ ಮೂಲವಾಗಬಲ್ಲ ಶ್ರೀಗಂಧ ಬೆಳೆಸುವ ಸಂಬಂಧ ಇದ್ದ ತೊಡಕುಗಳನ್ನು ನಿವಾರಿಸಲು ಚಿಂತನೆ ನಡೆದಿದೆ. ಅರಣ್ಯ ಕಾಯ್ದೆ 1927ರ ನಿಯಮಗಳನ್ನು ಸಡಿಲಗೊಳಿಸಿ ಶ್ರೀಗಂಧ ಬೆಳೆಯುವವರೇ ಮಾಲೀಕರು ಎಂದು ತಿದ್ದುಪಡಿ ತರುವಂತೆ ಅರಣ್ಯ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದೆ. ಕಡಿಮೆ ವೆಚ್ಚದಲ್ಲಿ ಕೈ ತುಂಬ ಸಂಪಾದಿಸಬಹುದಾದ ಶ್ರೀಗಂಧದ ಮರ ಬೆಳೆಯಲು ಪ್ರೋತ್ಸಾಹ ನೀಡುವತ್ತ ಅರಣ್ಯಇಲಾಖೆ ಕಾರ್ಯಕ್ರಮ ರೂಪಿಸುತ್ತಿದೆ. ಇದರೊಂದಿಗೆ ಕರ್ನಾಟಕ ಮತ್ತೊಮ್ಮೆ ಶ್ರೀಗಂಧದ ನಾಡಾಗುವ ಲಕ್ಷಣ ಗೋಚರಿಸುತ್ತಿದೆ.

ಈಗ ಪರಿಸ್ಥಿತಿ ಹೇಗಿದೆ?: ಕಂದಾಯ ಭೂಮಿಯಲ್ಲಿ ಶ್ರೀಗಂಧದ ಮರ ಬೆಳೆದಿದ್ದರೆ ಅರಣ್ಯ ಕಾಯ್ದೆ 1927ರ ಅನುಸಾರ ಪ್ರಕರಣಗಳನ್ನು ದಾಖಲಿಸಬಹುದಾಗಿದೆ. ಆಕಸ್ಮಿಕವಾಗಿ ಹೊಲ-ಗದ್ದೆಗಳಲ್ಲಿ, ಮನೆಯ ಹಿಂಭಾಗ ಹಾಗೂ ಮುಂಭಾಗದ ತೋಟದಲ್ಲಿ ಬೆಳೆದ ಶ್ರೀಗಂಧದ ಗಿಡಗಳಿದ್ದರೆ ಅವು ರೈತರ ನಿದ್ದೆಗೆಡಿಸುತ್ತಿವೆ. ಒಂದೆಡೆ ಕಳ್ಳರ ಭಯ, ಮತ್ತೊಂದೆಡೆ ಅರಣ್ಯ ಇಲಾಖೆ ತಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದೆಂಬ ಆತಂಕ. ಇದರಿಂದ ಅಮಾಯಕ ರೈತರು ಪ್ರಕರಣ ಎದುರಿಸುವಂತಾದ ಉದಾಹರಣೆಗಳೂ ಇವೆ. ತಾವೇ ಸಸಿ ನೆಟ್ಟು ಬೆಳೆಸಿದ ಶ್ರೀಗಂಧದ ಮರವನ್ನು ಕಡಿದು ಮಾರಾಟ ಮಾಡಲು ಅವಕಾಶವೇ ಇಲ್ಲ. ಹೀಗಾಗಿ ರೈತರು ಶ್ರೀಗಂಧದ ಸಸಿಯನ್ನು ಮರವಾಗಿ ಬೆಳೆಯಲು ಬಿಡದೆ ಕತ್ತರಿಸುತ್ತಿದ್ದಾರೆ. ಕಳ್ಳರು ರಾತ್ರೋರಾತ್ರಿ ಗಂಧದ ಗಿಡವನ್ನು ಕದ್ದು ಪರಾರಿಯಾಗುತ್ತಿದ್ದರೂ ಪೊಲೀಸರಿಗೆ ದೂರು ನೀಡುವ ಗೋಜಿಗೆ ಹೋಗುವಂತಿಲ್ಲ. ಇಂಥ ಎಲ್ಲ ರಾದ್ದಾಂತಗಳಿಗೆ ಇನ್ನು ಬ್ರೇಕ್ ಬೀಳಲಿದೆ.

ರೈತರಿಗೇ ಮರದ ಆದಾಯ: ತಿದ್ದುಪಡಿಯಾದ ನಿಯಮದ ಪ್ರಕಾರ ಆಕಸ್ಮಿಕವಾಗಿ ಬೆಳೆಯುವ ಹಾಗೂ ತಾವೇ ಬೆಳೆಸುವ ಶ್ರೀಗಂಧದ ಮರಗಳಿಂದ ಬರುವ ಆದಾಯ ರೈತರ ಕೈಗೇ ಸೇರಲಿದೆ. ಇಲಾಖೆಯಿಂದಲೇ ಸಸಿ ಪಡೆದು ಹೊಲ-ಗದ್ದೆಗಳಲ್ಲಿ ಬೆಲೆ ಬಾಳುವ ಶ್ರೀಗಂಧದ ಮರಗಳನ್ನು ಬೆಳೆಯಬಹುದಾದ ಸುವರ್ಣಾವಕಾಶ ಜನರಿಗೆ ಲಭ್ಯವಾಗಲಿದೆ.

ಲಾಭದಾಯಕ ಬೆಳೆ: ಭೂಮಿ ಹದಗೊಳಿಸುವುದು, ಗೊಬ್ಬರ, ಸಸಿ ನಿರ್ವಹಣೆ ಹಾಗೂ ಇದರ ರಕ್ಷಣೆ ಸೇರಿ ಒಂದು ಎಕರೆ ಶ್ರೀಗಂಧಧ ತೋಪು ಬೆಳೆಸಲು 15 ವರ್ಷಕ್ಕೆ ಅಂದಾಜು 15 ಲಕ್ಷ ರೂ. ಖರ್ಚಾಗಲಿದೆ. ಪ್ರತಿ ಎಕರೆಗೆ ಅಂದಾಜು 250 ಮರಗಳನ್ನು ನೆಡಬಹುದಾಗಿದ್ದ್ದು, ರೆಂಬೆ, ಕೊಂಬೆ ಹಾಗೂ ಬೇರುಗಳು ಸೇರಿ ಒಂದು ಮರಕ್ಕೆ 15 ಕೆ.ಜಿ., ಪ್ರತಿ ಎಕರೆಗೆ 3750 ಕೆ.ಜಿ. ಶ್ರೀಗಂಧ ಲಭ್ಯವಾಗಲಿದೆ. ಪ್ರತಿ ಕೆ.ಜಿ. ಗೆ ಇಂದಿನ ಮಾರುಕಟ್ಟೆ ಬೆಲೆ 6 ಸಾವಿರ ರೂ. ಇದೆ. ಅಂದರೆ ಒಂದು ಎಕರೆ ಶ್ರೀಗಂಧದಿಂದ ಅಂದಾಜು 2.25 ಕೋಟಿ ನಿವ್ವಳ ಲಾಭ ದೊರೆಯಲಿದೆ.

ಕಂಪನಿಗಳ ಜತೆ ಒಡಂಬಡಿಕೆ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆ.ಎಸ್.ಡಿ.ಎಲ್) ಸಂಸ್ಥೆಯು ರೈತರು ಬೆಳೆಸುವ ಶ್ರೀಗಂಧದ ಮರಗಳನ್ನೇ ಖರೀದಿ ಮಾಡಿ ಅದರಿಂದ ಎಣ್ಣೆಯನ್ನು ಉತ್ಪಾದಿಸಬೇಕಾಗಿರುವುದು ಕಡ್ಡಾಯ. ಗ್ರಾಮೀಣ ರೈತರ ಬಡತನ ನಿವಾರಣೆಗೆ ಸಹಕಾರಿಯಾಗಲು ‘ಶ್ರೀಗಂಧ ಬೆಳೆಸಿ ಸಿರಿವಂತರಾಗಿ’ ಎಂಬ ಯೋಜನೆ ಅಡಿ ರಾಜ್ಯದ ಸುಮಾರು 600ಕ್ಕೂ ಹೆಚ್ಚು ರೈತರು ಈಗಾಗಲೇ ಕಂಪನಿಗಳ ಜತೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ರೈತರು ಬೆಳೆದಿರುವ ಶ್ರೀಗಂಧದ ಮರಗಳನ್ನು ಖರೀದಿಸಿ ಎಣ್ಣೆಯನ್ನು ಭಟ್ಟಿ ಇಳಿಸುವ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಖಾಸಗಿ ಕಂಪನಿಗಳು ಒಡಂಬಡಿಕೆಗೆ ಮುಂದಾಗಿವೆ.

ಬ್ಯಾಂಕ್​ಗಳಲ್ಲೂ ಸಬ್ಸಿಡಿ ಸಾಲ ಸೌಲಭ್ಯ: ಶ್ರೀಗಂಧ ಮರದಿಂದ ವಾಣಿಜ್ಯ ಉದ್ಯಮವನ್ನು ಸಹಕಾರಿಸಲು ಕರ್ನಾಟಕದ ಹಲವಾರು ರಾಷ್ಟ್ರೀಕೃತ ಬ್ಯಾಂಕ್​ಗಳು ಸಬ್ಸಿಡಿ ಜತೆ ಸಾಲ ಸೌಲಭ್ಯ ಒದಗಿಸಲು ಮುಂದಾಗಿದೆ. ನಬಾರ್ಡ್ ಸಂಸ್ಥೆ ಕೂಡ ಇದಕ್ಕೆ ಕೈಜೋಡಿಸಲಿದೆ. ರಾಷ್ಟ್ರೀಯ ಔಷಧ ಸಸ್ಯಗಳ ಮಂಡಳಿ ಕೂಡ ಶ್ರೀಗಂಧ ಮರಗಳ ಯೋಜನೆ ಪ್ರೋತ್ಸಾಹ ನೀಡಲಿದ್ದು, ನೇರ ಸಾಲ ಸೌಲಭ್ಯ ಹಾಗೂ ಸಬ್ಸಿಡಿಗೆ ಚಿಂತನೆ ನಡೆಸಿದೆ.

ಬಹು ಬೇಡಿಕೆಯ ಬೆಳೆ

ಶ್ರೀಗಂಧಕ್ಕೆ ಬಹು ಬೇಡಿಕೆಯಿದೆ. ಕೈ ತುಂಬ ಹಣ ಗಳಿಸಬಹುದಾಗಿದೆ. ವಿವಿಧ ಕೆತ್ತನೆಗಳು, ಸೋಪು, ಗಂಧದಕಡ್ಡಿ, ಸುಗಂಧದ್ರವ್ಯ ತಯಾರಿಕೆ ಸೇರಿದಂತೆ ಹಲವಾರು ರೀತಿಯಲ್ಲಿ ಶ್ರೀಗಂಧದ ಬಳಕೆ ಮಾಡುವುದರಿಂದ ಬೇಡಿಕೆ ಹೆಚ್ಚಾಗಿದೆ. ಸುಮಾರು 30 ವರ್ಷವಾಗಿರುವ ಶ್ರೀಗಂಧದ ಮರ ಕಡಿದರೆ ಲಾಭ ಜಾಸ್ತಿ. ಸಾಮಾನ್ಯವಾಗಿ 15 ವರ್ಷಕ್ಕೆ ಮರಗಳ ಕಳ್ಳತನವಾಗುವುದು ಸಾಮಾನ್ಯವಾಗಿದೆ. ತಜ್ಞರ ಅಭಿಪ್ರಾಯದಂತೆ 25ರಿಂದ 30 ವರ್ಷಗಳ ನಂತರ ಶ್ರೀಗಂಧದ ಮರ ಕಡಿದರೆ ಅದರಿಂದ ಹೆಚ್ಚು ಲಾಭ ದೊರೆಯುತ್ತದೆ.

ಮಾರಾಟಕ್ಕೆ ಇ-ಟೆಂಡರ್

ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸರ್ಕಾರಿ ಶ್ರೀಗಂಧದ ಕೋಟಿ,ಶಿವಮೊಗ್ಗ ಮತ್ತು ಸರ್ಕಾರಿ ಶ್ರೀಗಂಧ ಕೋಟಿ ಮೈಸೂರು ಇಲ್ಲಿ 2018 ಸೆ. ರಲ್ಲಿ ಶ್ರೀಗಂಧವನ್ನು ಇ-ಟೆಂಡರ್ ಕಮ್ ಹರಾಜು ಮೂಲಕ ಎಂ. ಎಸ್. ಟಿ. ಸಿ. ಇ-ಪೋರ್ಟಲ್​ನಲ್ಲಿ ಮಾರಾಟ ಮಾಡಲಾಯಿತು. ಒಟ್ಟು 22,207 ಟನ್ ಶ್ರೀಗಂಧ ಮಾರಾಟವಾಗಿ, ಬಿಡ್ಡು ಮೊತ್ತ ರೂ. 19.48 ಕೋಟಿ ಲಭ್ಯವಾಗಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.

 

2002 ರಲ್ಲಿ ಗಂಧದ ಮರ ಬೆಳೆಯುವವರೇ ಮಾಲೀಕರೆಂಬ ನಿಯಮ ತಿದ್ದುಪಡಿ ಕರಡು ಸಿದ್ಧವಾಗಿದೆ. ಆದರೆ, ಈವರೆಗೆ ಅದು ಜಾರಿಯಾಗಿಲ್ಲ. ಈ ಬಗ್ಗೆ ಇಲಾಖೆ ಹಾಗೂ ಸರ್ಕಾರದೊಂದಿಗೆ ರ್ಚಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು.

| ಬಿ.ಕೆ. ದೀಕ್ಷಿತ್, ಎಪಿಸಿಸಿಎಫ್ ಅರಣ್ಯ ಇಲಾಖೆ

Leave a Reply

Your email address will not be published. Required fields are marked *