ಟಿಕೆಟ್ ದರ ಹೆಚ್ಚಳಕ್ಕೆ ಬೀಳಲಿದೆಯೇ ಬ್ರೇಕ್?

ಬೆಂಗಳೂರು: ಯಾವುದೇ ದೊಡ್ಡ ಸ್ಟಾರ್ ಸಿನಿಮಾ ಬಿಡುಗಡೆಯಾದರೆ ಚಿತ್ರಮಂದಿರದಲ್ಲಿ ಟಿಕೆಟ್ ದರ ದುಪ್ಪಟ್ಟಾಗುತ್ತದೆ. ಶಿವರಾಜ್​ಕುಮಾರ್, ಸುದೀಪ್ ನಟನೆಯ ‘ದಿ ವಿಲನ್’ ಚಿತ್ರ ತೆರೆಕಂಡಾಗ ಹೀಗೆಯೇ ಆಗಿತ್ತು. ಇದರಿಂದ ಪ್ರೇಕ್ಷಕರ ಜೇಬಿಗೆ ಕತ್ತರಿ ಬೀಳುತ್ತಿರುವುದು ನಿಜ. ಇದನ್ನು ತಪ್ಪಿಸಲು ಏಕಪರದೆ ಚಿತ್ರಮಂದಿರದ ಮಾಲಿಕರು ಚಿಂತನೆ ನಡೆಸುತ್ತಿದ್ದಾರೆ. ಈ ಕುರಿತು ಇತ್ತೀಚೆಗಷ್ಟೇ ಪ್ರದರ್ಶಕರ ವಲಯದಲ್ಲಿ ಸಭೆ ನಡೆದಿದ್ದು, ಹಲವು ವಿಚಾರಗಳನ್ನು ರ್ಚಚಿಸಲಾಗಿದೆ.

ಸಾಮಾನ್ಯವಾಗಿ ಏಕಪರದೆ ಚಿತ್ರಮಂದಿರಗಳಲ್ಲಿ 80ರಿಂದ 150 ರೂ.ವರೆಗೆ ಟಿಕೆಟ್ ದರ ನಿಗದಿಪಡಿಸಲಾಗಿರುತ್ತದೆ. ಆದರೆ ಸ್ಟಾರ್ ಸಿನಿಮಾಗಳು ತೆರೆಕಂಡಾಗ ನಿರ್ವಪಕರು ಮತ್ತು ವಿತರಕರು ಟಿಕೆಟ್ ದರ 200, 300 ರೂ.ವರೆಗೂ ಹೆಚ್ಚಿಸುತ್ತಾರೆ. ಇದರಿಂದ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಕ್ರಮೇಣ ಕಡಿಮೆ ಆಗುತ್ತದೆ. ರಿಪೀಟ್ ಆಡಿಯನ್ಸ್ ಕಾಣೆ ಆಗುತ್ತಿದ್ದಾರೆ ಎಂಬ ವಾದ ಕೇಳಿಬಂದಿದೆ. ‘ಕೇವಲ ಹಣ ಮಾಡುವ ಉದ್ದೇಶದಿಂದ ನಾವು ಚಿತ್ರಮಂದಿರ ನಡೆಸುತ್ತಿಲ್ಲ. ಚಿತ್ರರಂಗದಲ್ಲಿ ಎಲ್ಲರಿಗೂ ಅನುಕೂಲ ಆಗಲಿ ಎಂಬುದು ನಮ್ಮ ಆಶಯ. ಸ್ಟಾರ್ ಸಿನಿಮಾಗಳು ಮತ್ತು ಹೊಸಬರ ಸಿನಿಮಾಗಳ ನಡುವೆ ತಾರತಮ್ಯ ತೋರುವುದು ಸರಿಯಲ್ಲ’ ಎಂದು ಹಲವು ಪ್ರದರ್ಶಕರು ಅಭಿಪ್ರಾಯ ಪಟ್ಟಿದ್ದಾರೆ ಎನ್ನಲಾಗಿದೆ.

ಹಾಗಂತ ಟಿಕೆಟ್ ದರ ಹೆಚ್ಚಳಕ್ಕೆ ರಾತ್ರೋರಾತ್ರಿ ಕಡಿವಾಣ ಹಾಕಲಾಗುತ್ತಿಲ್ಲ. ಈ ಕುರಿತಂತೆ ಪ್ರದರ್ಶಕರು, ನಿರ್ವಪಕರು ಮತ್ತು ವಿತರಕರ ಜತೆಗೆ ಹೆಚ್ಚಿನ ಮಾತುಕತೆ ನಡೆಯಬೇಕಿದೆ. ಎಲ್ಲರೂ ಒಮ್ಮತದ ನಿರ್ಧಾರಕ್ಕೆ ಬಂದರೆ ಎಲ್ಲ ಸಿನಿಮಾಗಳಿಗೂ ಒಂದೇ ರೀತಿಯ ಟಿಕೆಟ್ ದರ ನಿಗದಿ ಆಗಲಿದೆ. ಇದರಿಂದ ಪ್ರೇಕ್ಷಕರಿಗೆ ಹೆಚ್ಚು ಅನುಕೂಲ ಆಗಲಿದೆ.