ಮೈಸೂರಿನಲ್ಲಿ ರಾಕಿ ಭಾಯ್​​-ಯುವರತ್ನನ ಜುಗಲ್​ಬಂಧಿ: ಒಟ್ಟಿಗೆ ಊಟ ಮಾಡಿ ಕುಶಲೋಪರಿ ವಿಚಾರಿಸಿದ ಯಶ್​-ಪುನೀತ್​!

ಮೈಸೂರು: ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆ.ಜಿ.ಎಫ್​. ಚಿತ್ರ ಭಾರಿ ಸಕ್ಸಸ್​ ಕಂಡ ನಂತರ ಕೆ.ಜಿ.ಎಫ್​-2 ಚಿತ್ರದ ಮೇಲೆ ನಿರೀಕ್ಷೆ ಗರಿಗೆದರಿದೆ. ಅತ್ತ ನಟಸಾರ್ವಭೌಮ ಚಿತ್ರದ ಸೋಲಿನ ನಂತರ ಗೆಲುವಿನ ಲಯಕ್ಕೆ ಮರಳಲು ‘ಯುವರತ್ನ’ ಚಿತ್ರದಲ್ಲಿ ನಟ ಪುನೀತ್​ ರಾಜ್​ಕುಮಾರ್​ ತೊಡಗಿಕೊಂಡಿದ್ದು, ಎರಡು ಚಿತ್ರಗಳ ಶೂಟಿಂಗ್​ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿದೆ. ಈ ವಿಶೇಷ ಸಂದರ್ಭದಲ್ಲೇ ಸ್ಯಾಂಡಲ್​ವುಡ್​ ಉಭಯ ಸ್ಟಾರ್​ ನಟರು ಪರಸ್ಪರ ಭೇಟಿಯಾಗುವ ಮೂಲಕ ಅಭಿಮಾನಿಗಳ ಖುಷಿಗೆ ಕಾರಣರಾಗಿದ್ದಾರೆ.

ಕೆ.ಜಿ.ಎಫ್​-2 ಹಾಗೂ ಯುವರತ್ನ ಎರಡೂ ಚಿತ್ರಗಳು ಹೊಂಬಾಳೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಎರಡು ಚಿತ್ರಗಳಿಗೂ ಮೈಸೂರಿನಲ್ಲಿ ಶೂಟಿಂಗ್​ ನಡೆಯುತ್ತಿರುವ ಕಾರಣ ಚಿತ್ರತಂಡವು ಸಾಂಸ್ಕೃತಿಕ ನಗರಿಯಲ್ಲಿ ಬೀಡುಬಿಟ್ಟಿವೆ. ಈ ಮಧ್ಯೆ ನಟರಾದ ಪುನೀತ್​ ಮತ್ತು ಯಶ್​ ಒಂದೇ ಹೋಟೆಲ್​ನಲ್ಲಿ ಊಟ ಮಾಡಿ, ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಉಭಯ ನಾಯಕರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಕೆ.ಜಿ.ಎಫ್​-2 ಚಿತ್ರವನ್ನು ಪ್ರಶಾಂತ್​ ನೀಲ್​ ನಿರ್ದೇಶಿಸುತ್ತಿದ್ದು, ಯುವರತ್ನ ಚಿತ್ರವನ್ನು ಸಂತೋಷ್​ ಆನಂದ್​​ರಾಮ್​ ನಿರ್ದೇಶನ ಮಾಡುತ್ತಿದ್ದಾರೆ. ಯಶ್​ ಹಾಗೂ ಪುನೀತ್​ ಇಬ್ಬರಿಗೂ ಯಶಸ್ವಿ ಚಿತ್ರಗಳನ್ನು ಕೊಟ್ಟ ಕೀರ್ತಿ ಸಂತೋಷ್ ಆನಂದ್​ರಾಮ್​ ಅವರಿಗೆ ಸಲ್ಲುತ್ತದೆ. ಯಶ್​ಗೆ ನಿರ್ದೇಶನ ಮಾಡಿದ ತಮ್ಮ ಮೊದಲ ಚಿತ್ರ ಮಿಸ್ಟರ್​ ಅಂಡ್​ ಮಿಸೆಸ್​ ರಾಮಾಚಾರಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದೇ ರೀತಿಯಾಗಿ ಪುನೀತ್​ಗೆ ನಿರ್ದೇಶನ ಮಾಡಿದ ತಮ್ಮ ಎರಡನೇ ಚಿತ್ರ ರಾಜಕುಮಾರ ಕೂಡ ಗಲ್ಲಾಪಟ್ಟಿಗೆಯಲ್ಲಿ ಧೂಳೆಬ್ಬಿಸಿತ್ತು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *