ಬಾಲಿವುಡ್​ ಸಿಂಗಂ ಅಜಯ್​ ದೇವಗನ್​ ಭೇಟಿ ಮಾಡಿದ್ದಕ್ಕೆ ಕಿಚ್ಚನ ಕಾಲೆಳೆದ ಪತ್ನಿ ಪ್ರಿಯಾ ಸುದೀಪ್​!

ಬೆಂಗಳೂರು: ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಪೈಲ್ವಾನ್ ಚಿತ್ರ​ದ ಚಿತ್ರೀಕರಣ ಮುಗಿದು, ಬಿಡುಗಡೆಗೆ ಸಜ್ಜಾಗುತ್ತಿದೆ. ಪೈಲ್ವಾನ್​ ನಂತರದ ಮತ್ತೊಂದು ಬಿಗ್​ ಚಿತ್ರವಾದ ‘ಕೋಟಿಗೊಬ್ಬ 3’ ತಂಡವನ್ನು ಸೇರಿಕೊಂಡಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ಶೂಟಿಂಗ್​ ನಡುವೆಯೇ ಬಾಲಿವುಡ್​ ಸೂಪರ್​ಸ್ಟಾರ್​ ಅಜಯ್​ ದೇವಗನ್​ ಭೇಟಿ ಮಾಡಿ ಉಭಯ ಕುಶಲೋಪರಿ ವಿಚಾರಿಸಿದ್ದಾರೆ.

ಅಜಯ್​ ದೇವಗನ್​ ಅವರೊಂದಿಗಿನ ಫೋಟೋವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿರುವ ಸುದೀಪ್​, ನಿಜವಾಗಿಯೂ ಓರ್ವ ಸುಸಂಸ್ಕೃತ. ನಿಮ್ಮನ್ನು ಭೇಟಿ ಮಾಡಿದ್ದು ತುಂಬಾ ವಿಶೇಷವಾಗಿತ್ತು. ಇದೊಂದು ಅಮೂಲ್ಯ ಕ್ಷಣ ಎಂದು ಬರೆದುಕೊಂಡಿದ್ದಾರೆ. ಹೈದರಾಬಾದ್​ನ ರಾಮೋಜಿ ಫಿಲಂ ಸಿಟಿಯಲ್ಲಿ ಕೋಟಿಗೊಬ್ಬ 3 ಚಿತ್ರದ ಶೂಟಿಂಗ್​ ನಡೆಯುತ್ತಿದ್ದು, ಶೂಟಿಂಗ್​ ಮಧ್ಯೆಯೇ ಅಜಯ್​ ಅವರನ್ನು ಸುದೀಪ್​ ಭೇಟಿ ಮಾಡಿ ಬಂದಿದ್ದಾರೆ.

ಆದರೆ, ಇದೇ ವಿಚಾರವನ್ನಿಟ್ಟುಕೊಂಡು ಪತಿಯ ಕಾಲೆಳೆದಿರುವ ಪತ್ನಿ ಪ್ರಿಯಾ ಸುದೀಪ್,​ ಅಜಯ್​ ದೇವಗನ್​ ಭೇಟಿ ಮಾಡಿದ್ದು ಖುಷಿಯ ವಿಚಾರ. ಆದರೆ, ಅಜಯ್ ಅವರ ಪತ್ನಿಯನ್ನು ಭೇಟಿ ಮಾಡಿದ್ದರೆ ನಿಮಗೆ ಇನ್ನು ಖುಷಿಯಾಗುತ್ತಿತ್ತು. ಏಕೆಂದರೆ ನೀವು ಕಾಜೋಲ್​ ಅವರ ಬಹುದೊಡ್ಡ ಅಭಿಮಾನಿಯಲ್ಲವೇ ಎಂದು ರೀಟ್ವೀಟ್​ ಮಾಡುವ ಮೂಲಕ ಸುದೀಪ್​ ಅವರ ಕಾಲೆಳೆದಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *