ಬೆಂಗಳೂರು: ನಿನ್ನೆಯಷ್ಟೇ ತೆರೆ ಕಂಡಿರುವ ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಜೋಗಿ ಪ್ರೇಮ್ ನಿರ್ದೇಶನದ ಚಿತ್ರ ‘ದಿ ವಿಲನ್’ ಅಬ್ಬರಿಸುತ್ತಿದ್ದು, ಶಿವಣ್ಣ ಫ್ಯಾನ್ಸ್ ನಿರ್ದೇಶಕ ಪ್ರೇಮ್ ಮೇಲೆ ಗರಂ ಆಗಿದ್ದರು. ಆದರೆ, ಇದೀಗ ವಿಲನ್ ಸಿನಿಮಾದ ನಟಿ ಆ್ಯಮಿ ಜಾಕ್ಸನ್ ಸ್ಯಾಂಡಲ್ವುಡ್ ಬದಲಿಗೆ ಕಾಲಿವುಡ್ ಎಂದು ಬಳಸಿ ಪೇಚಿಗೆ ಸಿಲುಕಿದ್ದಾರೆ.
ಚಿತ್ರವು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಆ್ಯಮಿ ಜಾಕ್ಸನ್ ಟ್ವೀಟ್ ಮಾಡಿದ್ದರು. ಅದರಲ್ಲಿ ‘ದಿ ವಿಲನ್’ ಚಿತ್ರ ಭರ್ಜರಿ ಆರಂಭ ಪಡೆದಿದ್ದು, ಕಾಲಿವುಡ್ನಲ್ಲಿ ನಟಿಸಲು ನನಗೆ ಅವಕಾಶ ನೀಡಿದ ಪ್ರೇಮ್ ಜೀ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದರು.
ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಸ್ಯಾಂಡಲ್ವುಡ್ ಬದಲಿಗೆ ಕಾಲಿವುಡ್ ಎಂದು ಬಳಸಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡ ಸಿನಿಮಾದಲ್ಲಿ ನಟಿಸಿದ್ದರೂ ಸ್ಯಾಂಡಲ್ವುಡ್ ಎನ್ನುವುದು ತಿಳಿದಿರಲಿಲ್ಲವೇ ಎಂದು ಟ್ವೀಟಿಗರು ಪ್ರಶ್ನಿಸಿದ್ದಾರೆ. ತಾನು ಯಾವ ಭಾಷೆಯಲ್ಲಿ ನಟಿಸಿದ್ದೇನೆ. ಆ ಚಿತ್ರರಂಗವನ್ನು ಏನೆಂದು ಕರೆಯುತ್ತಾರೆ ಎಂಬ ಜ್ಞಾನವಿಲ್ಲದೆ ತಮಿಳು ಚಿತ್ರರಂಗ ಎಂದು ಕರೆದಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಆ್ಯಮಿ ಅವರನ್ನು ಸ್ಯಾಂಡಲ್ವುಡ್ಗೆ ಕರೆ ತಂದಿರುವುದಕ್ಕೆ ಪ್ರೇಮ್ ವಿರುದ್ಧವೂ ಕಿಡಿಕಾರಿರುವ ಕೆಲವರು, ನಿಮಗೆ ಕನ್ನಡದಲ್ಲಿ ನಾಯಕಿಯರೇ ಸಿಗಲಿಲ್ಲವಾ? ಎಂತೆಂಥ ನಾಯಕಿಯರು ಕನ್ನಡದಲ್ಲಿಯೇ ಇರುವಾಗ ಇವರನ್ನು ಕರೆತಂದದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
Ahh so many ‘woods’ Bollywood, Tollywood, Kollywood and now Sandalwood. Honoured to be a part of #TheVillain 🎬
— Amy Jackson (@iamAmyJackson) October 18, 2018
ಇಷ್ಟೆಲ್ಲ ಅವಾಂತರಗಳು ಸೃಷ್ಟಿಯಾಗುತ್ತಲೇ ಎಚ್ಚೆತ್ತ ಆ್ಯಮಿ ಕಾಲಿವುಡ್ ಎಂದು ಮಾಡಿದ್ದ ಟ್ವೀಟ್ನ್ನು ಡಿಲೀಟ್ ಮಾಡಿ ಮತ್ತೊಮ್ಮೆ ಸ್ಯಾಂಡಲ್ವುಡ್ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಮತ್ತೊಂದು ಟ್ವೀಟ್ನಲ್ಲಿ ಹಲವಾರು ವುಡ್ಗಳು ಇವೆ. ಅದರಲ್ಲಿ ಬಾಲಿವುಡ್, ಟಾಲಿವುಡ್, ಕಾಲಿವುಡ್ ಮತ್ತು ಈಗ ಸ್ಯಾಂಡಲ್ವುಡ್. ವಿಲನ್ ಸಿನಿಮಾದ ಭಾಗವಾಗಿರುವುದು ನನಗೆ ಗೌರವ ತಂದಿದೆ ಎಂದಿದ್ದಾರೆ. (ಏಜೆನ್ಸೀಸ್)