ಬೆಂಗಳೂರು: ನಾನು ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿ ಯಾವುದೇ ಭಯ ಇಲ್ಲ. ಐಟಿ ದಾಳಿಯಿಂದ ನನಗೆ ಬಾಕಿ ಇರುವ ಹಣ ಬಂದರೆ ಸಾಕು ಎಂದು ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಬಗ್ಗೆ ಪ್ರತಿಕ್ರಿಯಸಿದ್ದಾರೆ.
ಐಟಿ ದಾಳಿ ವಿಷಯ ತಿಳಿಯುತ್ತಿದ್ದಂತೆ ಮೈಸೂರಿನಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದ ಸುದೀಪ್ ಗುರುವಾರ ಮಧ್ಯಾಹ್ನ ಜೆ.ಪಿ.ನಗರ ನಿವಾಸಕ್ಕೆ ಬಂದಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, “ಆದಾಯ ತೆರಿಗೆ ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ನನ್ನ ತಾಯಿ ಒಬ್ಬರೇ ಇದ್ದರು. ಹಾಗಾಗಿ ಮೈಸೂರಿನಿಂದ ಇಲ್ಲಿಗೆ ಬರಬೇಕಾಯಿತು” ಎಂದು ತಿಳಿಸಿದರು.
ಬಿಗ್ ಬಜೆಟ್ ಚಿತ್ರಗಳಾದ ವಿಲನ್, ಕೆ.ಜಿ.ಎಫ್ ಮತ್ತು ನಟ ಸಾರ್ವಭೌಮಕ್ಕೆ ಸಂಬಂಧಿಸಿದವರ ಮನೆಗಳ ಮೇಲೆ ಐಟಿ ದಾಳಿಯಾಗಿದೆ. ದಾಳಿಯಲ್ಲಿ ಯಾವುದೇ ವೈಯಕ್ತಿಕ ಮತ್ತು ರಾಜಕೀಯ ಉದ್ದೇಶ ಇಲ್ಲ ಎಂದರು.
ಕಾಂಪೌಂಡ್ ಹಾರಿ ಬಂದಿಲ್ಲ
“ಯಾವುದೋ ಸುದ್ದಿ ವಾಹಿನಿ ಐಟಿ ಅಧಿಕಾರಿಗಳು ನಮ್ಮ ಮನೆಗೆ ಕಾಂಪೌಂಡ್ ಹಾರಿ ದಾಳಿ ನಡೆಸಿದರು ಎಂದು ಬಿತ್ತರಿಸುತ್ತಿತ್ತು. ಆದರೆ ಅಧಿಕಾರಿಗಳು ಯಾವ ಕಾಂಪೌಂಡ್ ಹಾರಿಯೂ ಮನೆಗೆ ಬಂದಿಲ್ಲ. ಮುಖ್ಯ ಗೇಟ್ ಮೂಲಕವೇ ಬಂದಿದ್ದಾರೆ” ಎಂದರು.
ಗುರುವಾರ ಬೆಳಗ್ಗೆ ಏಳು ಗಂಟೆ ಸುಮಾರಿಗೆ ಐಟಿ ಅಧಿಕಾರಿಗಳು ಜೆ.ಪಿ.ನಗರದಲ್ಲಿರುವ ಸುದೀಪ್ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದರು. (ದಿಗ್ವಿಜಯ ನ್ಯೂಸ್)