ತೆಳ್ಳಗಾಗಲು ಅನುಷ್ಕಾ ಕಸರತ್ತು!

ಟಿ ಅನುಷ್ಕಾ ಶೆಟ್ಟಿ ಸದ್ಯ ಆಸ್ಟ್ರೇಲಿಯಾಕ್ಕೆ ಹಾರಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಹಾಗಂತ ಅವರು ಯಾವುದೋ ಚಿತ್ರೀಕರಣಕ್ಕೋ ಅಥವಾ ಪ್ರವಾಸಕ್ಕೋ ಆಸ್ಟ್ರೇಲಿಯಾಕ್ಕೆ ತೆರಳುತ್ತಿಲ್ಲ. ಅವರು ಹೋಗುತ್ತಿರುವುದು ಸ್ಲಿಮ್ ಆಗುವುದಕ್ಕೆ!

ಅನುಷ್ಕಾ ಹೆಚ್ಚು ಕಾಳಜಿವಹಿಸಿ ಡಯಟ್ ಫಾಲೋ ಮಾಡುತ್ತಿದ್ದರೂ ದೇಹದ ತೂಕ ಹೆಚ್ಚಿದೆಯಂತೆ. ಇದು ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಾಗಾಗಿ ಝೀರೋ ಸೈಜ್ ಮಾಡಿಕೊಳ್ಳುವ ಉದ್ದೇಶದಿಂದ ಆಸ್ಟ್ರೇಲಿಯಾದಲ್ಲಿರುವ ಖ್ಯಾತ ಸ್ಪಾ ಒಂದಕ್ಕೆ ಅನುಷ್ಕಾ ಭೇಟಿ ನೀಡುತ್ತಿದ್ದಾರೆ. ಎರಡು ವಾರ ಅಲ್ಲಿಯೇ ತಂಗಲಿದ್ದು, ದಿನಕ್ಕೆ 1 ಲಕ್ಷ ರೂ. ವ್ಯಯಿಸಲಿದ್ದಾರೆ!

ಈ ಸ್ಪಾಕ್ಕೆ ಆಗಮಿಸುವವರಿಗೆ ವಿಶೇಷ ಆಹಾರವನ್ನು ನೀಡಲಾಗುತ್ತದೆ. ಅದರ ಜತೆಗೆ ಸಾಕಷ್ಟು ಬಗೆಯ ವ್ಯಾಯಾಮ ಮಾಡಿಸಲಾಗುತ್ತದೆ. ಇದರಿಂದ ದೇಹದ ತೂಕ ಬಹುಬೇಗ ಇಳಿಯುತ್ತದೆಯಂತೆ. ಈಗಾಗಲೇ ಟಾಲಿವುಡ್​ನ ಅನೇಕ ಸ್ಟಾರ್ ನಟ-ನಟಿಯರು ಇಲ್ಲಿಗೆ ಭೇಟಿ ನೀಡಿ ಚಿಕಿತ್ಸೆ ಪಡೆದು ಬಂದಿದ್ದಾರೆ. ಇನ್ನು, ಆಸ್ಟ್ರೇಲಿಯಾಗೆ ತೆರಳುತ್ತಿರುವ ವಿಚಾರ ಬಹಿರಂಗಗೊಂಡಿರುವುದಕ್ಕೆ ಅನುಷ್ಕಾ ಬೇಸರಗೊಂಡಿದ್ದಾರಂತೆ. ಫಿಟ್​ನೆಸ್ ಹಾಳಾಗಿದೆ ಎನ್ನುವ ವಿಚಾರಕ್ಕೆ ರೆಕ್ಕೆ-ಪುಕ್ಕ ಸೇರಿ ನಾನಾ ರೀತಿಯ ಸುದ್ದಿಗಳು ಹರಿದಾಡಬಹುದು ಎನ್ನುವ ಭಯ ಅವರದ್ದು. ‘ಭಾಗಮತಿ’ ಚಿತ್ರ ತೆರೆಕಂಡ ನಂತರ ಅನುಷ್ಕಾ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಸದ್ಯ ಅವರು ಸದ್ದಿಲ್ಲದೆ ಹೊಸ ಚಿತ್ರಕ್ಕೆ ಸಹಿ ಹಾಕಿದ್ದು, ಆ ಚಿತ್ರದ ಪಾತ್ರಕ್ಕಾಗಿ ಸ್ಲಿಮ್ ಆಗುತ್ತಿದ್ದಾರೆ ಎನ್ನುವುದು ಮೂಲಗಳ ಮಾಹಿತಿ. -ಏಜೆನ್ಸೀಸ್