ಪ್ರೀಮಿಯರ್ ಪದ್ಮಿನಿಗಾಗಿ ಮಧೂ ಆಗಮನ

ಬೆಂಗಳೂರು: ನಟಿ ಮಧೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು ತುಂಬ ಕಡಿಮೆ. ‘ಕ್ರೇಜಿ ಸ್ಟಾರ್’ ರವಿಚಂದ್ರನ್ ನಾಯಕತ್ವದ ‘ಅಣ್ಣಯ್ಯ’ ಚಿತ್ರದಲ್ಲಿ ‘ಕಮಾನು ಡಾರ್ಲಿಂಗ್..’ ಎನ್ನುತ್ತ ಮಿಂಚು ಹರಿಸಿದ ಅವರು ಪಾತ್ರಗಳ ವಿಚಾರದಲ್ಲಿ ಸಿಕ್ಕಾಪಟ್ಟೆ ಚ್ಯೂಸಿ. ಹಾಗಾಗಿ ಅವರ ಖಾತೆಯಲ್ಲಿರುವ ಕನ್ನಡ ಚಿತ್ರಗಳು ಬೆರಳೆಣಿಕೆಯಷ್ಟು ಮಾತ್ರ. ಎರಡೂವರೆ ದಶಕದ ಹಿಂದೆ ಕನ್ನಡ ಸಿನಿಪ್ರಿಯರ ಮನಗೆದ್ದ ಮಧೂ ಬಗ್ಗೆ ಈಗ ಮಾತನಾಡಲು ಕಾರಣ ‘ಪ್ರೀಮಿಯರ್ ಪದ್ಮಿನಿ’ ಚಿತ್ರ. ಜಗ್ಗೇಶ್ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಮಧೂ ಒಂದು ಮುಖ್ಯ ಪಾತ್ರ ನಿಭಾಯಿಸಿದ್ದಾರೆ. ‘..ಪದ್ಮಿನಿ’ಯ ಕ್ಲೈಮ್ಯಾಕ್ಸ್ ಶೂಟಿಂಗ್ ಸಲುವಾಗಿ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಅವರು, ಚಂದನವನದ ಕುರಿತು ಅಭಿಪ್ರಾಯ ಹಂಚಿಕೊಂಡರು.

‘ಅಣ್ಣಯ್ಯ’ ಸಿನಿಮಾದ ಮೂಲಕ ಜನರು ತಮ್ಮನ್ನು ಇಂದಿಗೂ ಗುರುತಿಸುತ್ತಿರುವುದು ಮಧೂಗೆ ಹೆಮ್ಮೆಯ ವಿಚಾರವಂತೆ. ಅದೇ ರೀತಿ, 2015ರಲ್ಲಿ ಸುದೀಪ್ ನಟಿಸಿದ್ದ ‘ರನ್ನ’ ಚಿತ್ರದಲ್ಲೂ ಅವರಿಗೆ ಪ್ರಮುಖ ಪಾತ್ರವಿತ್ತು. ಅದರಲ್ಲಿ ಕಾಣಿಸಿಕೊಂಡ ಬಳಿಕ, ಸ್ಯಾಂಡಲ್​ವುಡ್​ನಿಂದ ಮಧೂಗೆ ಒಳ್ಳೊಳ್ಳೆಯ ಅವಕಾಶ ಸಿಗುತ್ತಿವೆ. ‘ನಾನು ಮತ್ತು ವರಲಕ್ಷ್ಮೀ’ ಚಿತ್ರದಲ್ಲಿ ನಾಯಕಿಯ ತಾಯಿಯಾಗಿ ಅವರು ಕಾಣಿಸಿಕೊಂಡರು. ಸದ್ಯ, ನಿಖಿಲ್ ಕುಮಾರ್ ನಟಿಸುತ್ತಿರುವ ‘ಸೀತಾರಾಮ ಕಲ್ಯಾಣ’ ಚಿತ್ರದಲ್ಲೂ ಮಧೂಗೆ ವಿಶೇಷ ಪಾತ್ರ ಇದೆಯಂತೆ. ಈಗ ‘ಪ್ರೀಮಿಯರ್ ಪದ್ಮಿನಿ’ಯಲ್ಲಿ ಜಗ್ಗೇಶ್​ಗೆ ಜೋಡಿಯಾಗಿ ಅವರು ನಟಿಸುತ್ತಿದ್ದಾರೆ. ‘ಗಂಡ-ಹೆಂಡತಿ ನಡುವೆ ಯಾವುದೋ ಕಾರಣಕ್ಕಾಗಿ ಮನಸ್ತಾಪ ಉಂಟಾಗಿ, ವಿಚ್ಚೇದನ ಪಡೆಯುವ ಹಂತಕ್ಕೆ ತಲುಪಿದಾಗ ಅವರ ಮನದಲ್ಲಿ ಉಂಟಾಗುವ ತಳಮಳದ ಕುರಿತು ಈ ಚಿತ್ರ ವಿವರಿಸುತ್ತದೆ’ ಎಂದು ಚಿತ್ರದ ಕಥೆ ಕುರಿತು ಕಿರು ಮಾಹಿತಿ ನೀಡುತ್ತಾರವರು. ಮಧೂ ಜತೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ಜಗ್ಗೇಶ್​ಗೂ ಖುಷಿ ಇದೆ. ‘ಅವರಂತಹ ನಟಿ ಜತೆಗೆ ಅಭಿನಯಿಸುವುದೇ ಸಂತಸದ ವಿಚಾರ. ಯಾಕೆಂದರೆ ಅನುಭವಿಗಳ ಜತೆಗೆ ಅಭಿನಯಿಸಿದರೆ ನಮಗೂ ಒಂದಷ್ಟು ಅನುಭವ ಬರುತ್ತೆ’ ಎಂಬುದು ಅವರ ಮಾತು.

ಇನ್ನು, ಈ ಚಿತ್ರದ ಕಥೆ ಜಗ್ಗೇಶ್​ಗೆ ತುಂಬ ಆಪ್ತ ಎನಿಸಿದೆ. ಎಷ್ಟರಮಟ್ಟಿಗೆಂದರೆ, ಅವರು ಶೂಟಿಂಗ್ ಸಂದರ್ಭದಲ್ಲಿ ಯಾರಿಗೂ ಗೊತ್ತಾಗದಂತೆ ಕಣ್ಣೀರು ಹಾಕಿದ್ದು ಕೂಡ ಇದೆಯಂತೆ! ‘ಮೊದಲಿಗೆ ಈ ಪಾತ್ರ ಮತ್ತು ಕಥೆ ಅಷ್ಟೇನೂ ಪ್ರಭಾವ ಬೀರಿರಲಿಲ್ಲ. ಆದರೆ ಕ್ಯಾಮರಾ ಮುಂದೆ ನಿಂತಾಗ ಆ ಪಾತ್ರದ ಮಹತ್ವ ಗೊತ್ತಾಯಿತು. ಎಲ್ಲ ವಿವಾಹಿತ ವ್ಯಕ್ತಿಗಳನ್ನು ಪ್ರತಿನಿಧಿಸುವ ಇಂಥ ಪಾತ್ರ ಸಿಕ್ಕಿದ್ದು ಇದೇ ಮೊದಲು. ಆ ಪಾತ್ರದಲ್ಲಿ ನಾನಾಗಿ ನಿಂತಾಗೆಲ್ಲ ಕಣ್ಣೀರು ಹಾಕಿದ್ದೇನೆ. ಅಷ್ಟರಮಟ್ಟಿಗೆ ಅದು ನಮ್ಮ ಮೇಲೆ ಪ್ರಭಾವ ಬೀರಿದೆ’ ಎನ್ನುತ್ತಾರೆ ಜಗ್ಗೇಶ್. ಈ ಚಿತ್ರಕ್ಕೆ ಶ್ರುತಿ ನಾಯ್ಡು ಬಂಡವಾಳ ಹೂಡಿದ್ದು, ರಮೇಶ್ ಇಂದಿರಾ ನಿರ್ದೇಶನ ಮಾಡಿದ್ದಾರೆ. ಹಿತಾ ಚಂದ್ರಶೇಖರ್ ಕೂಡ ಬಣ್ಣ ಹಚ್ಚಿದ್ದಾರೆ.

ಈ ಪಾತ್ರ ನನ್ನನ್ನು ತುಂಬ ಭಾವುಕನನ್ನಾಗಿ ಮಾಡಿದೆ. ಸೆಟ್​ನಲ್ಲಿದ್ದಾಗ ನಾನೆಲ್ಲೂ ಬಹಿರಂಗವಾಗಿ ತೋರಿಸಿಕೊಂಡಿಲ್ಲ. ತೋರಿಸಿಕೊಂಡರೆ, ಚಿತ್ರೀಕರಣಕ್ಕೆ ತೊಂದರೆ ಆಗುತ್ತೆ ಎನ್ನುವ ಭಯ. ಆದರೆ ಕ್ಯಾಮರಾ ಮುಂದೆ ನಿಂತಾಗ ನನ್ನೊಳಗೆ ನಾನೇ ಕಣ್ಣೀರು ಹಾಕಿದ್ದೇನೆ. ಯಾರಿಗೂ ಕಾಣದ ಹಾಗೆ ಅಳುತ್ತಲೇ ಅಭಿನಯಿಸಿದ್ದೇನೆ.

| ಜಗ್ಗೇಶ್ ನಟ