ರಿಷಿಗೆ ದಾರಿ ತಪ್ಪಿಸ್ತಾನೆ ದೇವರು!

ಬೆಂಗಳೂರು: ‘ನಾನು ಅವನಲ್ಲ ಅವಳು’ ಚಿತ್ರದ ಮೂಲಕ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ನಿರ್ದೇಶಕ ಬಿ.ಎಸ್. ಲಿಂಗದೇವರು ಹಾಗೂ ‘ಆಪರೇಷನ್ ಅಲಮೇಲಮ್ಮ’ ಸಿನಿಮಾದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ನಟ ರಿಷಿ ಜತೆಯಾಗಿ ಒಂದು ಸಿನಿಮಾ ಮಾಡುತ್ತಿದ್ದಾರೆ. ‘ದಾರಿ ತಪ್ಪಿಸು ದೇವರೇ’ ಎಂಬ ಭಿನ್ನ ಶೀರ್ಷಿಕೆ ಇಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ ನಿರ್ದೇಶಕರು.

ಮಂಜುನಾಥ್ ಕಾಮತ್ ಬರೆದಿರುವ ‘ದಾರಿ ತಪ್ಪಿಸು ದೇವರೇ’ ಎಂಬ ಪುಸ್ತಕವೇ ಲಿಂಗದೇವರು ಅವರಿಗೆ ಸ್ಪೂರ್ತಿ. ಆ ಕೃತಿಯಲ್ಲಿ ಇರುವ ಲೇಖನಗಳನ್ನೇ ಆಧಾರವಾಗಿ ಇಟ್ಟುಕೊಂಡು ಅವರು ಚಿತ್ರಕಥೆ ಹೆಣೆಯುತ್ತಿದ್ದಾರೆ. ‘ಇದೊಂದು ರೋಡ್ ಸಿನಿಮಾ. ಬೇಸರವಾದರೂ, ಸಂತೋಷವಾದರೂ ಬೈಕ್ ರೈಡ್ ಹೋಗುವುದು ಇಂದಿನ ಅನೇಕ ಹುಡುಗರ ಹವ್ಯಾಸ. ನಮ್ಮ ಕಥಾನಾಯಕ ಕೂಡ ಕಾರ್ಕಳದಿಂದ ಚಿಕ್ಕಮಗಳೂರಿಗೆ ಸವಾರಿ ಹೊರಡುತ್ತಾನೆ. ಆಗ ಅವನಿಗೆ ಎದುರಾಗುವ ಸಂಗತಿಗಳೇ ಚಿತ್ರದ ಜೀವಾಳ’ ಎಂದು ಮಾಹಿತಿ ನೀಡುತ್ತಾರೆ ಲಿಂಗದೇವರು. ಅಂದಹಾಗೆ, ಇದು ರಿಷಿಯನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಿದ ಕಥೆ ಅಲ್ಲವಂತೆ. ಕಳೆದ ಎರಡು ವರ್ಷಗಳಿಂದ ಚಿತ್ರಕಥೆಯ ತಯಾರಿಯಲ್ಲಿದ್ದ ನಿರ್ದೇಶಕರಿಗೆ ರಿಷಿ ಈ ಸಿನಿಮಾದ ನಾಯಕನಾಗಲು ಸೂಕ್ತ ಎಂಬ ಆಲೋಚನೆ ಮೂಡಿದೆ. ಮೊದಲ ಭೇಟಿಯಲ್ಲಿಯೇ ರಿಷಿ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ. ‘..ಅಲಮೇಲಮ್ಮ’ ಚಿತ್ರದಲ್ಲಿ ಜವಾಬ್ದಾರಿ ಇಲ್ಲದ ಹುಡುಗನಾಗಿ ಕಾಣಿಸಿಕೊಂಡದ್ದ ರಿಷಿ, ಈಗ ಬರುತ್ತಿರುವ ‘ಕವಲುದಾರಿ’ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಗೆಟಪ್​ನಲ್ಲಿ ಎದುರಾಗುತ್ತಿದ್ದಾರೆ.

ಆ ಎರಡೂ ಚಿತ್ರಗಳಿಗಿಂತ ಭಿನ್ನವಾದ ಲುಕ್ ‘ದಾರಿ ತಪ್ಪಿಸು ದೇವರೇ’ಯಲ್ಲಿ ಇರಲಿದೆಯಂತೆ. ಹಾಗಾದರೆ ಅವರಿಗೆ ನಾಯಕಿ ಯಾರು? ಎಲ್ಲವೂ ಅಂದು ಕೊಂಡಂತೆ ನಡೆದರೆ ಇಲ್ಲಿ ರಿಷಿಗೆ ಜೋಡಿಯಾಗಿ ಶ್ರುತಿ ಹರಿಹರನ್ ನಟಿಸಲಿದ್ದಾರೆ. ಶ್ರುತಿ ಜತೆ ನಿರ್ದೇಶಕರು ಒಂದು ಸುತ್ತಿನ ಮಾತುಕಥೆ ನಡೆಸಿದ್ದಾರೆ. ಕಥೆ ಕೇಳಿ ಶ್ರುತಿ ಕೂಡ ಮೆಚ್ಚಿಕೊಂಡಿದ್ದಾರಂತೆ. ಆದರೆ ಅವರು ಅಂತಿಮ ನಿರ್ಧಾರ ತಿಳಿಸುವುದು ಬಾಕಿ ಇದೆ. ಉಳಿದ ಕಲಾವಿದರು ಯಾರೆಲ್ಲ ಇರಲಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ನವೆಂಬರ್ ಎರಡನೇ ವಾರದಲ್ಲಿ ಶೂಟಿಂಗ್ ಶುರುಮಾಡಬೇಕು ಎಂದು ಪ್ಲಾ್ಯನ್ ಹಾಕಿಕೊಂಡಿದ್ದಾರೆ ಲಿಂಗದೇವರು. ಮಹೇಶ್ ಮತ್ತು ಕಿಶೋರ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.