ದಿಗಂತ್-ಆಂಡಿ ಕಲ್ಯಾಣ ಇಂದು

ಬೆಂಗಳೂರು: ‘ಮನಸಾರೆ’ ಮೂಲಕ ಬೆಳ್ಳಿತೆರೆಯಲ್ಲಿ ಒಂದಾಗಿದ್ದ ನಟ ದಿಗಂತ್ ಮತ್ತು ನಟಿ ಐಂದ್ರಿತಾ ರೇ ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರೂ ಇಂದು (ಡಿ.12) ಸಂಜೆ 6.30ಕ್ಕೆ ಸಪ್ತಪದಿ ತುಳಿಯಲಿದ್ದಾರೆ. ಚಿಕ್ಕಬಳ್ಳಾಪುರದ ನಂದಿ ಬೆಟ್ಟದ ಸಮೀಪವಿರುವ ಖಾಸಗಿ ರೆಸಾರ್ಟ್​ನಲ್ಲಿ ಈ ಸೆಲೆಬ್ರಿಟಿ ಜೋಡಿ ವಿವಾಹ ನೆರವೇರಲಿದೆ. ಪ್ರಕೃತಿಯ ಹಚ್ಚ ಹಸಿರಿನ ನಡುವೆ ಸರಳವಾಗಿ ಮದುವೆ ಮಾಡಲು ಎರಡೂ ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ. ಮಂಗಳವಾರ (ಡಿ.11) ಸಂಜೆಯೇ ಅರಿಶಿಣ ಶಾಸ್ತ್ರ ಮತ್ತು ಸಂಗೀತ ಕಾರ್ಯಕ್ರಮ ನಡೆದಿವೆ. ಖಾಸಗಿಯಾಗಿ ನಡೆದ ಈ ಸಮಾರಂಭದಲ್ಲಿ ತಮ್ಮದೇ ಸಿನಿಮಾಗಳ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಐಂದ್ರಿತಾ-ದಿಗಂತ್ ವಾತಾವರಣದ ರಂಗು ಹೆಚ್ಚಿಸಿದರು ಎನ್ನಲಾಗಿದೆ. ಅರಿಶಿಣ ಶಾಸ್ತ್ರದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರಕ್ಷಿತ್ ಶೆಟ್ಟಿ, ಶರ್ವಿುಳಾ ಮಾಂಡ್ರೆ, ಪ್ರೇಮಾ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮದುವೆ ಬಳಿಕ ಅಭಿಮಾನಿಗಳು ಮತ್ತು ಚಿತ್ರರಂಗದ ಸ್ನೇಹಿತರಿಗಾಗಿ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಡಿ.15ರಂದು ಆರತಕ್ಷತೆ ಏರ್ಪಡಿಸಲು ಪ್ಲಾ್ಯನ್ ರೂಪಿಸಲಾಗಿದೆ.

ಸಾಕ್ಷಿಯಾಗಲಿದೆ ಸ್ಯಾಂಡಲ್​ವುಡ್

ತೆರೆಮೇಲೆ ಇಬ್ಬರನ್ನೂ ಒಂದಾಗಿಸಿದ್ದು ನಿರ್ದೇಶಕ ಯೋಗರಾಜ್ ಭಟ್. ಅಲ್ಲದೆ, ಭಟ್ಟರ ಬಳಗದಲ್ಲೇ ದಿಗಂತ್ ಹೆಚ್ಚಾಗಿ ಗುರುತಿಸಿಕೊಂಡರು. ಅದೇ ರೀತಿ ಐಂದ್ರಿತಾರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಮಹೇಶ್ ಬಾಬು ಸೇರಿ ಹಲವಾರು ನಿರ್ದೇಶಕರು ಈ ವಿವಾಹಕ್ಕೆ ಸಾಕ್ಷಿ ಆಗಲಿದ್ದಾರೆ. ಸ್ಯಾಂಡಲ್​ವುಡ್​ನ ತಾರೆಯರಾದ ಪ್ರಜ್ವಲ್ ದೇವರಾಜ್, ಪುನೀತ್ ರಾಜ್​ಕುಮಾರ್, ದರ್ಶನ್, ಸುದೀಪ್, ಶಿವರಾಜ್​ಕುಮಾರ್, ಚಿರಂಜೀವಿ ಸರ್ಜಾ ಸೇರಿ ಹಲವರು ಆಗಮಿಸುವ ನಿರೀಕ್ಷೆ ಇದೆ. ಅಚ್ಚರಿ ಎಂದರೆ, ಪಕ್ಕಾ ಭಾರತೀಯ ಶೈಲಿಯ ವಸ್ತ್ರ ಧರಿಸಿಯೇ ಮದುವೆಗೆ ಬರಬೇಕು ಎಂದು ಆಮಂತ್ರಣ ಪತ್ರಿಕೆಯಲ್ಲಿ ಸೂಚಿಸಲಾಗಿದೆ.

ಬಹುಕಾಲದ ಪ್ರೇಮಪುರಾಣ

ಬಂಗಾಳ ಮೂಲದ ಐಂದ್ರಿತಾ ಹಾಗೂ ಮಲೆನಾಡಿನ ಹುಡುಗ ದಿಗಂತ್ ‘ಮನಸಾರೆ’ ಚಿತ್ರದ ಬಳಿಕವೇ ಪ್ರೀತಿಯಲ್ಲಿ ಮುಳುಗಿದ್ದರು ಎಂದು ಸುದ್ದಿ ಹಬ್ಬಿತ್ತು. ‘ಪಾರಿಜಾತ’ ಮುಂತಾದ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಲ್ಲದೆ, ಪಾರ್ಟಿ, ಸಮಾರಂಭಗಳಲ್ಲೂ ಜತೆಯಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆದರೆ ಈ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ‘ಕಥೆಯೊಂದು ಶುರುವಾಗಿದೆ’ ಚಿತ್ರದ ಪ್ರಚಾರದ ವೇಳೆ ತಮ್ಮ ಪ್ರೇಮಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಮೊದಲ ಬಾರಿಗೆ ಜಗಜ್ಜಾಹೀರು ಮಾಡಿದರು. ಅಂದಿನಿಂದಲೇ ಈ ಕ್ಯೂಟ್ ಜೋಡಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗೆಳೆಯರು ಶುಭ ಕೋರಲು ಆರಂಭಿಸಿದರು. ಇತ್ತೀಚೆಗಷ್ಟೇ ಸಮುದ್ರ ತೀರದ ನಡುವೆ ಆಂಡಿ-ದಿಗ್ಗಿ ನಿಶ್ಚಿತಾರ್ಥ ಮಾಡಲಾಗಿತ್ತು. ಅದೇ ರೀತಿ ಇಂದು ಪ್ರಕೃತಿಯ ಮಡಿಲಿನಲ್ಲಿ ಮದುವೆ ನೆರವೇರಲಿದೆ. ಪರಿಸರ ಸ್ನೇಹಿಯಾಗಿಯೇ ಎಲ್ಲ ಶಾಸ್ತ್ರಗಳನ್ನು ನಡೆಸಲು ತೀರ್ವನಿಸಲಾಗಿದೆಯಂತೆ.

ಸುಮಂತ್-ಅನಿತಾ ಸಪ್ತಪದಿ

ಖ್ಯಾತ ನಿರ್ವಪಕ ಶೈಲೇಂದ್ರ ಬಾಬು ಪುತ್ರ ಸುಮಂತ್ ಕೂಡ ಇಂದು (ಡಿ.12) ಹಣೆಮಣೆ ಏರಲಿದ್ದಾರೆ. ‘ದಿಲ್​ವಾಲಾ’, ‘ತಿರುಪತಿ ಎಕ್ಸ್​ಪ್ರೆಸ್’, ‘ಬೆತ್ತನಗೆರೆ’ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಸುಮಂತ್ ‘ಬ್ರಾ್ಯಂಡ್ ಬಾಬು’ ಸಿನಿಮಾ ಮೂಲಕ ಟಾಲಿವುಡ್​ಗೂ ಪರಿಚಯಗೊಂಡಿದ್ದಾರೆ. ಈಗ ಅನಿತಾ ಜತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಳಗ್ಗೆ 10 ಗಂಟೆಗೆ ಸಪ್ತಪದಿ ತುಳಿಯಲಿದ್ದಾರೆ. ಮಂಗಳವಾರ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ಕೂಡ ನಡೆದಿದೆ.