ಹಿತಾ ಬಣ್ಣದ ಪಯಣ

‘ಸಿಹಿ-ಕಹಿ’ ಚಂದ್ರು ಹಾಗೂ ಗೀತಾ ದಂಪತಿಯ ಪುತ್ರಿ ಹಿತಾ ಚಂದ್ರಶೇಖರ್ ಅಭಿನಯದ ‘ಒಂಥರ ಬಣ್ಣಗಳು’ ಚಿತ್ರ ಈ ವಾರ (ಆ.17) ತೆರೆಕಾಣುತ್ತಿದೆ. ಸುನಿಲ್ ಭೀಮರಾವ್ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಕಿರಣ್ ಶ್ರೀನಿವಾಸ್, ಪ್ರತಾಪ್ ನಾರಾಯಣ್, ಸೋನು ಗೌಡ ಮೊದಲಾದವರು ನಟಿಸಿದ್ದಾರೆ. ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಹಿತಾ, ಸಿನಿಮಾ ಹಾಗೂ ಮುಂದಿನ ಯೋಜನೆಗಳ ಬಗ್ಗೆ ನಮಸ್ತೆ ಬೆಂಗಳೂರು ಜತೆ ಮಾತನಾಡಿದ್ದಾರೆ.

| ರಾಜೇಶ್ ದುಗ್ಗುಮನೆ ಬೆಂಗಳೂರು

‘ಒಂಥರ ಬಣ್ಣಗಳು’ ವಿಶೇಷತೆ ಏನು?

ಇದು ರೋಡ್ ಸಿನಿಮಾ ಶೈಲಿಯಲ್ಲಿ ಮೂಡಿಬಂದಿದೆ. ಚಿತ್ರದಲ್ಲಿ ಐದು ಪಾತ್ರಗಳು ಪ್ರಮುಖವಾಗಿರುತ್ತವೆ. ಪ್ರಯಾಣದ ಸಿನಿಮಾ ಎಂದಾಗ ಎರಡು ಮೂರು ಜೋಡಿಗಳು ಪ್ರವಾಸ ಹೊರಡುವುದು, ಆ ಮೂಲಕವೇ ಪ್ರೀತಿ-ಪ್ರೇಮದ ಕಥೆ ಹೇಳುವುದು ಮಾಮೂಲು. ಆದರೆ, ನಮ್ಮ ಸಿನಿಮಾ ಇದೆಲ್ಲದಕ್ಕಿಂತ ಭಿನ್ನವಾಗಿದೆ. ಇಲ್ಲಿ ಸ್ನೇಹ, ಸಂಬಂಧಗಳ ಬಗ್ಗೆ ಹೇಳಲಾಗಿದೆ. ಶೀರ್ಷಿಕೆ ರೀತಿಯೇ ಪ್ರತಿ ದೃಶ್ಯವೂ ಕಲರ್​ಫುಲ್​ಆಗಿ ಮೂಡಿಬಂದಿದೆ. ಬಿ.ಜೆ. ಭರತ್ ಉತ್ತಮ ಸಂಗೀತ ನೀಡಿದ್ದಾರೆ.

‘ಒಂಥರ ಬಣ್ಣಗಳು’ ನಿಮ್ಮ ವೃತ್ತಿ ಬದುಕಿಗೆ ಎಷ್ಟು ಮುಖ್ಯ?

ಖಂಡಿತವಾಗಿಯೂ ಇದು ನನ್ನ ವೃತ್ತಿ ಬದುಕಿನಲ್ಲಿ ಒಂದು ಪ್ರಮುಖ ಸಿನಿಮಾ ಆಗಲಿದೆ. ಶರತ್ ಲೋಹಿತಾಶ್ವ, ದತ್ತಾತ್ರೇಯ, ಟೆನಿಸ್ ಕೃಷ್ಣ, ಅರುಣಾ ಬಾಲರಾಜ್ ಸೇರಿ ಅನೇಕ ಪೋಷಕ ಕಲಾವಿದರು ನಟಿಸಿದ್ದಾರೆ. ನನ್ನ ಕರಿಯರ್​ನಲ್ಲಿ ಹೆಚ್ಚು ಪಾತ್ರಧಾರಿಗಳಿರುವ ಚಿತ್ರ ಇದು. ನಟನೆಗೆ ಹೆಚ್ಚು ಆದ್ಯತೆ ಇತ್ತು. ಈ ಎಲ್ಲ ಕಾರಣಗಳಿಂದ ‘ಒಂಥರ ಬಣ್ಣಗಳು’ ವಿಶೇಷವಾಗಿದೆ.

ಚಿತ್ರದಲ್ಲಿ ಪ್ರೇಕ್ಷಕನಿಗಾಗಿ ಏನಿದೆ?

ನಮ್ಮ ಸಿನಿಮಾದ ಪಾತ್ರಗಳ ರೀತಿಯೇ ಕಚೇರಿ ಒತ್ತಡ, ಕೌಟುಂಬಿಕ ಸಮಸ್ಯೆ ಹೀಗೆ ನಾನಾ ಕಾರಣಗಳಿಂದ ಒತ್ತಡ ಅನುಭವಿಸುತ್ತಿರುವ ಪ್ರೇಕ್ಷಕನಿಗೆ ಈ ಸಿನಿಮಾ ನೋಡಿದಮೇಲೆ ರಿಲ್ಯಾಕ್ಸ್ ಫೀಲ್ ಆಗಲಿದೆ. ಇಷ್ಟಂತೂ ಖಾತ್ರಿ ಕೊಡಬಲ್ಲೆ. ಇದಲ್ಲದೆ, ಸಿನಿಮಾದಲ್ಲಿ ಹಾಸ್ಯ ಇದೆ. ಸಂಬಂಧಗಳ ಬಗ್ಗೆ ಹೇಳಲಾಗಿದೆ.

ನಿಮ್ಮ ಪ್ರವಾಸ ಆರಂಭವಾಗುವುದು ಹೇಗೆ?

ನಿತ್ಯ ಕಚೇರಿಗೆ ತೆರಳಬೇಕು. ರಾತ್ರಿ ಮನೆ ಸೇರಿದರೆ, ಮತ್ತೆ ಮರುದಿನ ಆಫೀಸ್​ಗೆ ತೆರಳುವ ಸಿದ್ಧತೆ. ಇಂಥ ದಿನಚರಿಯಿಂದ ಬೇಸತ್ತ ಮೂವರು ಗೆಳೆಯರು ಒಂದು ಬ್ರೇಕ್ ತೆಗೆದುಕೊಳ್ಳಲು ರೋಡ್ ಟ್ರಿಪ್ ಆರಂಭಿಸುತ್ತಾರೆ. ಅವರಿಗೆ ನಾನು ಮತ್ತು ಸೋನು ಗೌಡ ಕೂಡ ಪ್ರಯಾಣದಲ್ಲಿ ಜತೆಯಾಗುತ್ತೇವೆ. ನಾವು ಎಲ್ಲೆಲ್ಲಿಗೆ ಹೋಗುತ್ತೇವೆ, ಏನು ಮಾಡುತ್ತೇವೆ, ನಮ್ಮ ಪ್ರಯಾಣ ಮುಗಿಯುವ ವೇಳೆಗೆ ನಮ್ಮ ನಡುವೆ ಗೆಳೆತನ ಇರುತ್ತದೆಯೋ ಅಥವಾ ಪ್ರೀತಿ ಮೊಳೆತಿರುತ್ತದೆಯೋ ಎಂಬುದನ್ನು ಸಿನಿಮಾದಲ್ಲಿ ನೋಡಬೇಕು. ನಾವು ಈ ಚಿತ್ರದಲ್ಲಿ ಸಾಕಷ್ಟು ಪ್ರದೇಶಗಳನ್ನು ತೋರಿಸುತ್ತಿದ್ದೇವೆ. ಸಕಲೇಶಪುರ, ಬಿಸಿಲೆ ಘಾಟಿ, ಆಗುಂಬೆ, ಸಿಗಂದೂರು, ಉಡುಪಿ ಸೇರಿ ಅನೇಕ ಪ್ರದೇಶಗಳಲ್ಲಿ ಶೂಟ್ ಮಾಡಿದ್ದೇವೆ.

ತಂದೆ ಈಗಾಗಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಹಾಗಾಗಿ ನಿಮ್ಮ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದು ಅನಿಸಿದೆಯೇ?

ಹೌದು, ಅಂಥದ್ದೊಂದು ಜವಾಬ್ದಾರಿ ನನ್ನ ಮೇಲಿದೆ. ಉತ್ತಮ ಕಥೆ ಆಯ್ದುಕೊಳ್ಳಬೇಕು, ಒಳ್ಳೆಯ ಸಿನಿಮಾ ಮಾಡಬೇಕು ಎಂದು ನನಗೆ ಯಾವಾಗಲೂ ಅನಿಸುತ್ತಿರುತ್ತದೆ. ಒಂದೊಮ್ಮೆ ನಾನು ಇಂಡಸ್ಟ್ರಿಯಲ್ಲಿ ಸೋತರೆ ಅದರಿಂದ ಅಪ್ಪ-ಅಮ್ಮನಿಗೆ ಕೆಟ್ಟ ಹೆಸರು ಬರುತ್ತದೆ ಎಂಬ ಭಯ ನನ್ನನ್ನು ಕಾಡುತ್ತದೆ. ಇದೇ ಕಾರಣಕ್ಕೋ ಏನೋ, ನಾನು ಕಥೆ ಆಯ್ಕೆಯಲ್ಲಿ ತುಂಬ ಚ್ಯೂಸಿ. ಚೆನ್ನಾಗಿ ನಟಿಸಿದರೆ ತಂದೆ-ತಾಯಿಗೆ ಖುಷಿ ಆಗುತ್ತದೆ. ಕಥೆ ಆಯ್ಕೆ ವೇಳೆ ನಾನು ತಂದೆ ಬಳಿ ಸಲಹೆ ಕೇಳುತ್ತೇನೆ ಅಷ್ಟೇ. ಪಾತ್ರ ಹಾಗೂ ಕಥೆ ಆಯ್ಕೆಯಲ್ಲಿ ಅವರು ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ.

ತಂದೆಯಂತೆ ನಿಮಗೆ ನಿರ್ದೇಶನದಲ್ಲಿ ಗುರುತಿಸಿಕೊಳ್ಳುವ ಯೋಚನೆ ಇದೆಯೇ?

ಹಹ್ಹಹ್ಹ.. ಆ ರೀತಿ ಏನೂ ಇಲ್ಲ. ಸದ್ಯ ನನ್ನ ಸಂಪೂರ್ಣ ಗಮನ ನಟನೆ ಮೇಲಿದೆ. ನನ್ನ ವೃತ್ತಿ ಬದುಕಿನಲ್ಲಿ ಭಿನ್ನ ಪಾತ್ರಗಳನ್ನು ಮಾಡಬೇಕು. ನಿರ್ದೇಶನಕ್ಕೆ ಇಳಿಯುವ ಆಲೋಚನೆ ಸದ್ಯಕ್ಕಂತೂ ಇಲ್ಲ. ಆದರೆ ಚಿತ್ರಕ್ಕೆ ಕಥೆ ಬರೆಯಬೇಕು ಎಂಬ ಯೋಚನೆ ಇದೆ. ಭವಿಷ್ಯದಲ್ಲಿ ಆ ಬಗ್ಗೆ ಆಲೋಚಿಸಬೇಕು.