‘ಸೂಜಿದಾರ’ ಚಿತ್ರದ ವಿರುದ್ಧ ನಟಿ ಹರಿಪ್ರಿಯಾ ಗರಂ: ಮುಂದೆ ಈ ರೀತಿಯ ತಪ್ಪು ಮಾಡುವುದಿಲ್ಲವೆಂದ ನೀರ್​ದೋಸೆ ಬೆಡಗಿ

ಬೆಂಗಳೂರು: ಇತ್ತೀಚೆಗಷ್ಟೇ ಬಿಡುಗಡೆಯಾದ ‘ಸೂಜಿದಾರ’ ಚಿತ್ರದ ವಿರುದ್ಧ ನಟಿ ಹರಿಪ್ರಿಯಾ ಅವರು ಅಸಮಾಧಾನ ಹೊರಹಾಕಿದ್ದಾರೆ.

ತಮ್ಮ ನಟನೆಯ ‘ಡಾಟರ್​ ಆಫ್​ ಪಾರ್ವತಮ್ಮ’ ಚಿತ್ರದ ಟ್ರೇಲರ್​ ಹಾಗೂ ಸಾಂಗ್ಸ್​ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಸೂಜಿ ದಾರ’ ಚಿತ್ರವನ್ನು ಇನ್ನೂ ದೊಡ್ಡ ಮಟ್ಟಕ್ಕೆ ತಲುಪಿಸಬಹುದಾಗಿತ್ತು. ಆದರೆ, ನಿರ್ದೇಶಕರು ನನ್ನ ಜತೆ ಚರ್ಚೆ ಮಾಡುವಾಗ ಹೇಳಿದ ಕತೆಯೇ ಬೇರೆ ಸಿನಿಮಾದಲ್ಲಿ ಮೂಡಿ ಬಂದಿರುವ ಕತೆಯೇ ಬೇರೆ ಎಂದು ಚಿತ್ರತಂಡದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ನಾನು ಸಿನಿಮಾ ನೋಡಿದಾಗ ನನ್ನ ಜತೆ ಚರ್ಚೆ ಮಾಡಿದ ಅಂಶಗಳು ಅಷ್ಟಾಗಿ ಕಾಣಿಸಲಿಲ್ಲ. ಬೇಕಿಲ್ಲದ ದೃಶ್ಯಗಳನ್ನು ಹೆಚ್ಚು ಸಿನಿಮಾದಲ್ಲಿ ತೋರಿಸಲಾಗಿದೆ. ಅದನ್ನು ಮುಂಚೆಯೇ ನನ್ನ ಬಳಿ ಚರ್ಚೆ ಮಾಡಬಹುದಿತ್ತು. ಈ ಬಗ್ಗೆ ನಿರ್ಮಾಪಕರಿಗೂ ಬೇಸರವಿದೆ ಎಂದು ತಿಳಿಸಿದರು.

ಪ್ರತಿ ಭಾನುವಾರ ನನ್ನನ್ನು ಅಭಿಮಾನಿಗಳು ಭೇಟಿ ಮಾಡುತ್ತಾರೆ. ಎಂದಿನಂತೆ ಕಳೆದ ವಾರವು ಭೇಟಿ ಮಾಡಿದ ಅವರು ಸೂಜಿದಾರ ಚಿತ್ರದ ಬಗ್ಗೆ ಬೇಸರ ಹೊರಹಾಕಿದ್ದರು. ಚಿತ್ರದಲ್ಲಿ ನನ್ನನ್ನು ಹೆಚ್ಚು ತೋರಿಸದಿದ್ದಕ್ಕೆ ಚಿತ್ರಮಂದಿರದಿಂದ ಹೊರ ನಡೆದಿದ್ದರ ಬಗ್ಗೆ ತಿಳಿಸಿದ್ದರು ಎಂದು ಹರಿಪ್ರಿಯಾ ಹೇಳಿದ್ದಾರೆ.

ಫೇಸ್​ಬುಕ್​ನಲ್ಲಿಯೂ ಹರಿಪ್ರಿಯಾ ಅವರು ಸೂಜಿದಾರ ಚಿತ್ರದ ಬಗ್ಗೆ ಅಸಮಾಧಾನ ಹೊರಹಾಕಿದ್ದು, ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಮುಂದೆ ಈ ರೀತಿಯ ತಪ್ಪನ್ನು ಮಾಡುವುದಿಲ್ಲ. ಮುಂದಿನ ಸಿನಿಮಾಗಳಲ್ಲಿ ನಿಮ್ಮನ್ನು ಇನ್ನಷ್ಟು ರಂಜಿಸುತ್ತೇನೆಂಬ ಭರವಸೆ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *