ಐಟಿ ಬೇಟೆ 109 ಕೋಟಿ ರೂ.!

ಬೆಂಗಳೂರು: ಸ್ಯಾಂಡಲ್​ವುಡ್ ನಟ, ನಿರ್ವಪಕರ ಸಂಪತ್ತಿನ ಕೋಟೆ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳ ತಂಡ ಬರೋಬ್ಬರಿ 109 ಕೋಟಿ ರೂ. ಮೊತ್ತದ ಅಘೋಷಿತ ಆಸ್ತಿ ಪತ್ತೆ ಹಚ್ಚಿದೆ! ದಾಳಿ ವೇಳೆ ಮನೆ ಹಾಗೂ ಕಚೇರಿಗಳಲ್ಲಿ ಕೋಟಿಗಟ್ಟಲೆ ಹಣ, ಕೆ.ಜಿ.ಗಟ್ಟಲೆ ಚಿನ್ನಾಭರಣ ಪತ್ತೆಯಾಗಿರುವುದರಿಂದ ದಾಳಿಗೆ ಗುರಿಯಾದವರಿಗಿನ್ನು ಇ.ಡಿ (ಜಾರಿ ನಿರ್ದೇಶನಾಲಯ) ಸಂಕಷ್ಟ ಬೆನ್ನೇರಲಿದೆ.

ಜ.3ರಂದು ಸ್ಯಾಂಡಲ್​ವುಡ್​ನ ನಾಲ್ವರು ನಿರ್ವಪಕರು ಮತ್ತು ನಾಲ್ವರು ಸ್ಟಾರ್ ನಟರ ನಿವಾಸ, ಕಚೇರಿ ಸೇರಿ 21 ಕಡೆ ಕರ್ನಾಟಕ ಮತ್ತು ಗೋವಾ ವಿಭಾಗದ 180 ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ದಾಳಿ ವೇಳೆ 2.85 ಕೋಟಿ ರೂ. ನಗದು ಪತ್ತೆಯಾದರೆ 25.3 ಕೆ.ಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಹೂಡಿಕೆ ಕಣ್ಕಟ್ಟು!: ಸಿನಿಮಾ ನಿರ್ಮಾಣ ಹಾಗೂ ಚಿತ್ರಮಂದಿರ ಪ್ರದರ್ಶನದಿಂದ ಸಂಗ್ರಹವಾದ ದಾಖಲೆಗಳಿಲ್ಲದ ಕೋಟ್ಯಂತರ ರೂ.ಗಳನ್ನು ಬೇರೆ ವ್ಯವಹಾರಗಳಲ್ಲಿ ಹೂಡಿಕೆ ಮಾಡಿ ತೆರಿಗೆ ಕಟ್ಟದಿರುವುದು ಬೆಳಕಿಗೆ ಬಂದಿದೆ. ಈಗ ಪತ್ತೆಯಾಗಿರುವ ಆಸ್ತಿ ಮೌಲ್ಯ ತನಿಖೆ ಮುಂದುವರಿದಂತೆ ಮತ್ತಷ್ಟು ಏರಿಕೆಯಾಗಬಹುದು ಎಂದು ಐಟಿ ಇಲಾಖೆ ಭಾನುವಾರ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಎಲ್ಲೆಲ್ಲಿಂದ ಆದಾಯ?: ದಾಖಲೆ ಇಲ್ಲದ ಕೋಟ್ಯಂತರ ಹಣವನ್ನು ಆಸ್ತಿ ಮತ್ತು ಚಿನ್ನಾಭರಣದ ಮೇಲೆ ಹೂಡಿಕೆ ಮಾಡಿರುವುದು ಐಟಿ ಪರಿಶೀಲನೆಯಲ್ಲಿ ಗೊತ್ತಾಗಿದೆ. ಸಿನಿಮಾ ಹಕ್ಕುಗಳ ಮಾರಾಟ, ಡಿಜಿಟಲ್ ಹಕ್ಕು, ಚಿತ್ರಮಂದಿರ ಆದಾಯ, ಟಿವಿ ಹಕ್ಕುಗಳು, ಆಡಿಯೋ ಮತ್ತು ಸ್ಯಾಟಲೈಟ್ ಹಕ್ಕುಗಳು ಸೇರಿ ಇತರ ಮೂಲಗಳಿಂದ ಗಳಿಸಿದ ಆದಾಯಕ್ಕೆ ಲೆಕ್ಕ ತೋರಿಸಿಲ್ಲ. ವಿತರಕರಿಂದ ಪಡೆದ ದಾಖಲಾತಿ ಇಲ್ಲದ ರಸೀದಿ ಮತ್ತು ತಮ್ಮ ಕೆಲ ಖರ್ಚುಗಳ ಬಗ್ಗೆಯೂ ಮಾಹಿತಿ ಇಲ್ಲ.

ಅಘೋಷಿತ ಆಸ್ತಿ ಅಪಾರ

ಅಘೋಷಿತ ಆಸ್ತಿ ಹೊಂದಿರುವುದನ್ನು ದಾಳಿ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ. ಇನ್ನು ಕೆಲ ದಾಖಲಾತಿ ಜಪ್ತಿ ಮಾಡಿದ್ದು, ಪರಿಶೀಲಿಸಿದ ಬಳಿಕ ಅಕ್ರಮ ಆಸ್ತಿ ಮೌಲ್ಯ ಇನ್ನಷ್ಟು ಏರುವ ಸಾಧ್ಯತೆ ಇದೆ. ನಟ, ನಿರ್ವಪಕರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆಗೆ ಸಹಕರಿಸಿ, ಕೇಳಿದ ದಾಖಲೆಗಳನ್ನು ನೀಡಬೇಕಾಗುತ್ತದೆ. ಒಂದೆರಡು ದಿನದಲ್ಲಿ ವಿಚಾರಣೆ ಮುಗಿಯುವುದಿಲ್ಲ. ವರ್ಷಗಳೇ ಬೇಕಾಗುತ್ತದೆ. ಕರೆದಾಗೆಲ್ಲ ವಿಚಾರಣೆಗೆ ಬರಬೇಕಾಗಬಹುದೆನ್ನಲಾಗಿದೆ.

  • ಮುಂದೇನು?
  • ಆಸ್ತಿ, ಚಿನ್ನಾಭರಣ, ಕೋಟ್ಯಂತರ ರೂ. ಹಣಕ್ಕೆ ದಾಖಲೆ ಒದಗಿಸಲು ಕಾಲಾವಕಾಶ.
  • ತೆರಿಗೆ ಪಾವತಿಸಿರುವ ಬಗ್ಗೆ ಲೆಕ್ಕಪರಿಶೋಧಕರಿಂದ ಐಟಿಗೆ ದಾಖಲೆ ಸಲ್ಲಿಸಬೇಕು.
  • ದಾಖಲಾತಿ ಸರಿಯಾಗಿದ್ದಲ್ಲಿ ಜಪ್ತಿ ಮಾಡಿರುವ ಹಣ, ಚಿನ್ನ, ಪತ್ರಗಳು ವಾಪಸ್.
  • ತೆರಿಗೆ ಕಟ್ಟುವಲ್ಲಿ ವಿಫಲವಾಗಿದ್ದರೆ ಎಲ್ಲ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತೆ.

ಐಟಿ ಬಳಿ ಅಕ್ರಮ ಆದಾಯಕ್ಕಿದೆ ಸಾಕ್ಷ್ಯ

ಚಿತ್ರಮಂದಿರಗಳ ಪ್ರದರ್ಶನದಿಂದ ಸಂಗ್ರಹವಾದ ಹಣ ಹಾಗೂ ಬೇರೆ ಮೂಲಗಳಿಂದ ಬಂದ ಹಣವನ್ನು ಬೇರೆಡೆ ವರ್ಗಾವಣೆ ಮಾಡಿರುವುದಕ್ಕೆ ಕೆಲ ಸಾಕ್ಷ್ಯಗಳು ಲಭ್ಯವಾಗಿವೆ. ದಾಳಿ ವೇಳೆ ಪತ್ತೆಯಾಗಿರುವ ಹಣ, ಚಿನ್ನಾಭರಣ ಹಾಗೂ ಆಸ್ತಿ ಮೌಲ್ಯದ ದಾಖಲಾತಿಗಳಿಗೂ ತೆರಿಗೆ ಪಾವತಿಸಿರುವ ದಾಖಲಾತಿಗಳಿಗೂ ಸಾಕಷ್ಟು ವ್ಯತ್ಯಾಸವಿರುವುದು ವಿಚಾರಣೆಯಲ್ಲಿ ದೃಢಪಟ್ಟಿದೆ.

ಯಾರಿಗೂ ಸದ್ಯಕ್ಕಿಲ್ಲ ಬಂಧನ ಭೀತಿ

ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ತಯಾರಿಸಿದ ವರದಿಯನ್ನು ಐಟಿ ಕೇಂದ್ರ ಕಚೇರಿಗೆ ಸಲ್ಲಿಸಲಾಗುತ್ತದೆ. ಅಲ್ಲಿನ ಅಧಿಕಾರಿಗಳು ಅಂತಿಮ ವರದಿ ಸಿದ್ಧಪಡಿಸುತ್ತಾರೆ. ನಟ, ನಿರ್ವಪಕರನ್ನು ಹಲವು ಬಾರಿ ಕಚೇರಿಗೆ ಕರೆದು ದಾಳಿ ವೇಳೆ ಜಪ್ತಿ ಮಾಡಿದ ವಸ್ತುಗಳ ಬಗ್ಗೆ ಹೇಳಿಕೆ ಪಡೆಯಲಾಗುತ್ತದೆ. ತನಿಖೆಯಲ್ಲಿ ಅಕ್ರಮ ಆಸ್ತಿ ಪತ್ತೆಯಾದರೆ ಮತ್ತೆ ವಿಚಾರಣೆಗೆ ಕರೆಯಲಾಗುತ್ತದೆ. ದಾಳಿ ನಡೆದ ಸಂದರ್ಭದಲ್ಲಿ ಆತಂಕಗೊಂಡು ಅಕ್ರಮ ಆಸ್ತಿ ಎಂದು ತಪ್ಪಾಗಿ ಹೇಳಿದ್ದೆ. ಇದು ಅಕ್ರಮ ಆಸ್ತಿಯಲ್ಲ ಎಂದೇಳಿ ಪುನಃ ದಾಖಲೆ ಸಲ್ಲಿಸಲು ಅವಕಾಶಗಳಿವೆ. ಬೇನಾಮಿ ಆಸ್ತಿ ಹೊಂದಿರುವುದು, ತೆರಿಗೆ ವಂಚನೆ ಮತ್ತು ಆದಾಯಕ್ಕಿಂತ ಅಧಿಕ ಆಸ್ತಿ-ಪಾಸ್ತಿ ಹೊಂದಿರುವ ಪ್ರಕರಣ ಆದಾಯ ತೆರಿಗೆ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಬಂಧನ ಸಾಧ್ಯತೆ ಕಡಿಮೆ.

| ಶ್ರೀಧರ್ ಐಟಿ ಇಲಾಖೆ ನಿವೃತ್ತ ಅಧಿಕಾರಿ

ಹೇಗೆಲ್ಲ ವಂಚನೆ ಆಗುತ್ತೆ? ಸಿಂಗಲ್ ಸ್ಕ್ರೀನ್ ಧೋಖಾ!

‘ಪ್ರಸ್ತುತ ಚಿತ್ರರಂಗದ ಎಲ್ಲ ವಲಯಗಳು ಡಿಜಿಟಲ್ ಆಗಿವೆ. ಆದರೆ, ಕೆಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಮಾತ್ರ ಡಿಜಿಟಲ್ ವ್ಯವಸ್ಥೆ ಜಾರಿಯಾಗಿಲ್ಲ. ಅಲ್ಲಿ ನಗದು ರೂಪದಲ್ಲೇ ವ್ಯವಹಾರ ನಡೆಯುತ್ತದೆ. ಅಲ್ಲಿ ಸುಲಭವಾಗಿ ತೆರಿಗೆ ವಂಚನೆ ಮಾಡಲಾಗುತ್ತದೆ. ಮಲ್ಟಿಪ್ಲೆಕ್ಸ್​ನ ವ್ಯವಹಾರಗಳೆಲ್ಲ ಬ್ಯಾಂಕ್ ಖಾತೆ ಮೂಲಕ ನಡೆಯುವುದರಿಂದ ಅಲ್ಲಿ ಯಾವುದೇ ತೆರಿಗೆ ವಂಚನೆ ಆಗಲ್ಲ. ಇನ್ನು, ಟಿವಿ ಪ್ರಸಾರದ ಹಕ್ಕು ಮಾರಾಟ, ಡಿಜಿಟಲ್ ಹಕ್ಕುಗಳ ಮಾರಾಟದಲ್ಲೂ ನಗದು ರೂಪದಲ್ಲಿ ವ್ಯವಹಾರ ನಡೆಯುವುದು ಕಡಿಮೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಡಿಜಿಟಲ್ ರೂಪಕ್ಕೆ ಒಳಪಡಿಸಿದರೆ ಅಕ್ರಮ ತಡೆಯಲು ಸಾಧ್ಯವೆಂದು ಸಿನಿಮಾ ಕ್ಷೇತ್ರದ ಕೆಲವರು ಸಲಹೆ ನೀಡುತ್ತಾರೆ.

ದುಬಾರಿ ತೆರಿಗೆ!

ಇಂತಿಷ್ಟು ಆದಾಯಕ್ಕೆ ಇಷ್ಟಿಷ್ಟು ತೆರಿಗೆ ಎಂದು ನಿಗದಿಯಾಗಿರುತ್ತದೆ. ಅದೇ ರೀತಿಯಲ್ಲಿ ಸಿನಿಮಾ ಕ್ಷೇತ್ರದ ಮೇಲೂ ತೆರಿಗೆ ಇರುತ್ತದೆ. ಶೇ. 30ರವರೆಗೂ ತೆರಿಗೆ ಫಿಕ್ಸ್ ಮಾಡಿರುವುದು ಕೂಡ ಕೆಲವೊಮ್ಮೆ ಅಕ್ರಮಕ್ಕೆ ಪ್ರೇರೇಪಣೆ ನೀಡಿದಂತಾಗಿದೆ. ಕೋಟಿ ಕೋಟಿ ಸುರಿದು ಸಿನಿಮಾ ಮಾಡುವ ನಿರ್ವಪಕ, ಎಲ್ಲರಿಗೂ ಸಂಭಾವನೆ ನೀಡಿ, ಕೊನೆಗೆ ದುಬಾರಿ ತೆರಿಗೆ ಕಟ್ಟುವುದರೊಳಗೆ ಹೈರಾಣಾಗಿರುತ್ತಾನೆ. ಅದರ ಬದಲು ತೆರಿಗೆ ವಂಚಿಸುವ ಸುಲಭ ದಾರಿ ಕಂಡುಕೊಳ್ಳುತ್ತಾನೆ. ಹಾಗಾಗಿ, ನಿರ್ವಪಕರಿಗೆ ಕೊಂಚ ರಿಯಾಯಿತಿ ನೀಡುವುದು ಉತ್ತಮ ಎಂಬ ಸಲಹೆಗಳು ಕೇಳಿಬರುತ್ತವೆ.

ಬ್ಲ್ಯಾಕ್ ಮನಿ ವೈಟ್ ಆಗುತ್ತೆ!

ನೋಟು ಅಮಾನ್ಯೀಕರಣದ ನಂತರ ಕಪ್ಪು-ಬಿಳುಪು ನೋಟಿನ ದಂಧೆ ನಿಂತಿದೆ ಎಂದೇ ಹೇಳಲಾಗುತ್ತಿದೆ. ಆದರೆ, ಈಗಲೂ ಈ ದಂಧೆ ಎಗ್ಗಿಲ್ಲದೆ ಸಾಗಿದೆ. 2 ಕೋಟಿ ರೂ. ಬಂಡವಾಳ ಹೂಡಿ ಸಿನಿಮಾ ಮಾಡುವ ನಿರ್ವಪಕ, ಲೆಕ್ಕದಲ್ಲಿ ಮಾತ್ರ ನಾಲ್ಕು ಕೋಟಿ ತೋರಿಸುತ್ತಾನೆ. ಅದಕ್ಕೆ ಬೇಕಾದ ದಾಖಲೆಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಾನೆ. ಒಂದು ವೇಳೆ ಸಿನಿಮಾದಿಂದ ಹಾಕಿದ ಬಂಡವಾಳವೇ ವಾಪಾಸು ಬರದಿದ್ದರೂ ಇಷ್ಟು ಕೋಟಿ ರೂ. ಆದಾಯ ಬಂದಿದೆ ಎಂದು ತೋರಿಸುತ್ತಾನೆ. ಆಗ ಬ್ಲಾ್ಯಕ್ ಮನಿ ವೈಟ್ ಆಗುತ್ತದೆ. ಅದರ ಜತೆಗೆ ಬಾಕ್ಸ್​ಆಫೀಸ್​ನಲ್ಲಿ ಕಲೆಕ್ಷನ್ ಇರದಿದ್ದರೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಬಾಡಿಗೆ ಕಟ್ಟಿ ಸಿನಿಮಾ ಪ್ರದರ್ಶನ ಮಾಡುವುದು. ನಂತರ ಸಿನಿಮಾದಿಂದ ಸಾಕಷ್ಟು ಲಾಭವಾಗಿದೆ ಎಂದು ಲೆಕ್ಕ ತೋರಿಸಿ, ಕಪು್ಪ ಹಣವನ್ನು ಬಿಳಿ ಹಣ ಮಾಡಲಾಗುತ್ತಿದೆ.

ಸಂಭಾವನೆಗೂ ಬ್ಲ್ಯಾಕ್​ ಮನಿ?

ಕಲಾವಿದರು ಸಂಭಾವನೆ ರೂಪದಲ್ಲಿ ಪೂರ್ತಿಯಾಗಿ ಹಣ ಪಡೆಯುವುದಿಲ್ಲವಂತೆ. ಸಂಭಾವನೆಯ ಶೇ.30ರಿಂದ 40 ಹಣವನ್ನು ಚೆಕ್ ಮೂಲಕ ಪಡೆದು, ಅದಕ್ಕೆ ಕಟ್ಟಬೇಕಾದ ತೆರಿಗೆ ಕಟ್ಟಲಾಗುತ್ತದೆ. ಆದರೆ, ಉಳಿದ ಹಣವನ್ನು ಉಡುಗೊರೆ ರೂಪದಲ್ಲಿ ಪಡೆಯಲಾಗುತ್ತದೆ ಎಂಬ ಮಾಹಿತಿಯೂ ಇದೆ.

7 ವರ್ಷ ಜೈಲು ?

ಬೇನಾಮಿ ಆಸ್ತಿ ಹೊಂದಿರುವುದು ಸಾಬೀತಾದರೆ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆಯಡಿ ಭಾರಿ ಪ್ರಮಾಣದ ದಂಡ ಹಾಗೂ ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಕಾಯ್ದೆ ಪ್ರಕಾರ 1 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವುದು ಪತ್ತೆಯಾದರೆ 7 ವರ್ಷ ಜೈಲು ಶಿಕ್ಷೆ ಮತ್ತು 25 ಲಕ್ಷ ರೂ. ದಂಡ ವಿಧಿಸಲು ಅವಕಾಶವಿದೆ.

ಅಕ್ರಮ ಆದಾಯಕ್ಕಿದೆ ಸಾಕ್ಷ್ಯ

ಚಿತ್ರಮಂದಿರಗಳ ಪ್ರದರ್ಶನದಿಂದ ಸಂಗ್ರಹವಾದ ಹಣ ಹಾಗೂ ಬೇರೆ ಮೂಲಗಳಿಂದ ಬಂದ ಹಣವನ್ನು ಬೇರೆಡೆ ವರ್ಗಾವಣೆ ಮಾಡಿರುವುದಕ್ಕೆ ಕೆಲ ಸಾಕ್ಷ್ಯಗಳು ಲಭ್ಯವಾಗಿವೆ. ದಾಳಿ ವೇಳೆ ಪತ್ತೆಯಾಗಿರುವ ಹಣ, ಚಿನ್ನಾಭರಣ ಹಾಗೂ ಆಸ್ತಿ ಮೌಲ್ಯದ ದಾಖಲಾತಿಗಳಿಗೂ ತೆರಿಗೆ ಪಾವತಿಸಿರುವ ದಾಖಲಾತಿಗಳಿಗೂ ಸಾಕಷ್ಟು ವ್ಯತ್ಯಾಸವಿರುವುದು ವಿಚಾರಣೆಯಲ್ಲಿ ದೃಢಪಟ್ಟಿದೆ.

ವಿಚಾರಣೆಗೆ ಶೀಘ್ರ ನೋಟಿಸ್

ಅಘೋಷಿತ ಆಸ್ತಿ ಹೊಂದಿರುವುದು ದೃಢಪಟ್ಟಿರುವುದರಿಂದ ಈ ಬಗ್ಗೆ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ಎಲ್ಲ ನಟರು ಹಾಗೂ ನಿರ್ವಪಕರಿಗೆ ಐಟಿ ಅಧಿಕಾರಿಗಳು ಶೀಘ್ರದಲ್ಲೇ ನೋಟಿಸ್ ಜಾರಿ ಮಾಡಲಿದ್ದಾರೆ. ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನೂ ಪಾವತಿಸುವಂತೆ ಸೂಚನೆ ಕೊಡಲಿದ್ದಾರೆ. ಇ.ಡಿ ಸೇರಿ ಇತರ ತನಿಖಾ ಸಂಸ್ಥೆಗಳ ಜತೆಗೂ ಮಾಹಿತಿ ಹಂಚಿಕೊಳ್ಳಲಿದ್ದಾರೆ.

ಇಡಿಗೆ ಐಟಿ ಪತ್ರ

ಐಟಿ ದಾಳಿ ವೇಳೆ ಸಂಗ್ರಹಿಸಿರುವ ಮಾಹಿತಿಯನ್ನು ಇಡಿ ಇಲಾಖೆಗೆ ಪತ್ರ ಮುಖೇನ ತಿಳಿಸಿದ್ದು, ಲೇವಾದೇವಿ ಕಾಯ್ದೆ (ಫೇಮಾ) ವಂಚಿಸಿದ್ದಲ್ಲಿ ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ. ಈ ಪ್ರಕರಣದಲ್ಲಿ ಇಡಿ ಪ್ರವೇಶವಾದರೆ ನಟರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಆದಾಯ ತೆರಿಗೆ ಕಾಯ್ದೆ 276ಸಿ(1), 278(ಡಿ)ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆಗಳಿವೆ. ನಾಲ್ವರು ನಿರ್ವಪಕರ ಬಳಿ ಹೆಚ್ಚಿನ ಆಸ್ತಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾರ್ಯಾರ ಮೇಲೆ ದಾಳಿ?

ನಟರಾದ ಶಿವರಾಜ್ ಕುಮಾರ್, ಸುದೀಪ್, ಯಶ್, ಪುನೀತ್ ರಾಜ್​ಕುಮಾರ್, ನಿರ್ವಪಕರಾದ ರಾಕ್​ಲೈನ್ ವೆಂಕಟೇಶ್, ವಿಜಯ್ ಕಿರಗಂದೂರ್, ಸಿ.ಆರ್. ಮನೋಹರ್, ಜಯಣ್ಣ ಅವರುಗಳ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿತ್ತು.

3 ತಿಂಗಳು ಮಾಹಿತಿ ಸಂಗ್ರಹ

ಸ್ಯಾಂಡಲ್​ವುಡ್ ಆರ್ಥಿಕ ವ್ಯವಹಾರಗಳ ಬಗ್ಗೆ ಐಟಿ ಇಲಾಖೆ ಕಳೆದ 3 ತಿಂಗಳಿಂದಲೇ ಗೌಪ್ಯವಾಗಿ ಮಾಹಿತಿ ಸಂಗ್ರಹಿಸಿತ್ತು. ಆ ವೇಳೆ ಗುರುತಿಸಲಾದ ನಟರು, ನಿರ್ವಪಕರು, ಸಿನಿಮಾ ನಿರ್ಮಾಣ ಸಂಸ್ಥೆಗಳು ಹಾಗೂ ಇವರ ಜತೆ ವ್ಯವಹಾರ ಹೊಂದಿರುವವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಅಘೋಷಿತ ಆಸ್ತಿ ಹಾಗೂ ವಿವಿಧ ಮೂಲಗಳಿಂದ ಬರುವ ಆದಾಯದ ದಾಖಲಾತಿಗಳು ಪತ್ತೆಯಾಗಿವೆ.