ಆತ್ಮಹತ್ಯೆಗೆ ಯತ್ನಿಸಿದ ಶಾಸಕನ ಆರೋಗ್ಯ ವಿಚಾರಿಸಿದ ಬಿಎಸ್​ವೈ

ಶಿವಮೊಗ್ಗ: ಮರಳಿಗಾಗಿ ಮೈಮೇಲೆ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಶಾಸಕ ಗೂಳಿಹಟ್ಟಿ ಶೇಖರ್​ ಅವರನ್ನು ಭೇಟಿ ಮಾಡಿದ ಬಿ.ಎಸ್​.ಯಡಿಯೂರಪ್ಪ ಅವರ ಆರೋಗ್ಯ ವಿಚಾರಿಸಿದರು.

ಮರಳು ಸಿಗುತ್ತಿಲ್ಲ ಎಂದು ಆರೋಪಿಸಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್​ ನಿನ್ನೆ ಮೈಮೇಲೆ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಅವರ ಕಣ್ಣಿಗೆ ಪೆಟ್ರೋಲ್​ ಹೋಗಿ ಶಂಕರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆಯ ಸಂಪೂರ್ಣ ಮಾಹಿತಿ ಪಡೆದ ಬಿ.ಎಸ್.ವೈ ಇಂದು ಆಸ್ಪತ್ರೆಗೆ ಭೇಟಿ ನೀಡಿದರು. ನಂತರ ಮಾತನಾಡಿ, ಒಬ್ಬ ಶಾಸಕರ ಸ್ಥಿತಿಯೇ ಹೀಗಾದರೆ ಸಾಮಾನ್ಯ ಜನರ ಪರಿಸ್ಥಿತಿ ಏನು? ಕಾಂಗ್ರೆಸ್​ ಏಜೆಂಟರೇ ಮರಳು ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

ನಿನ್ನೆ ಮರಳಿಗಾಗಿ ನಡೆದ ಪ್ರತಿಭಟನೆಯಲ್ಲಿ ಬಂಧಿಸಲಾಗಿರುವ 200 ಜನ ಅಮಾಯಕರನ್ನು ಕೂಡಲೇ ಪೊಲೀಸರು ಬಿಡುಗಡೆ ಮಾಡಬೇಕು. ಹೊಸದುರ್ಗ ಪಿಎಸ್​ಐ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.