More

    ಕದ್ದು ಮುಚ್ಚಿ ಮರಳುಗಾರಿಕೆ, ಮನೆ, ಕಟ್ಟಡ ನಿರ್ಮಾಣಕ್ಕಿಲ್ಲ ಮರಳು

    ಉಡುಪಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮರಳುಗಾರಿಕೆಗೆ ಅನುಮತಿ ಇಲ್ಲ, ಆದರೂ ಗ್ರಾಮೀಣ ಭಾಗದಲ್ಲಿ ಕದ್ದುಮುಚ್ಚಿ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಕುಂದಾಪುರ, ಕೋಟ, ಬೈಂದೂರು ಭಾಗದಲ್ಲಿ ಆಡಳಿತ ವ್ಯವಸ್ಥೆ ಕಣ್ತಪ್ಪಿಸಿ ಮರಳು ಲೂಟಿ ಮಾಡಲಾಗುತ್ತಿದೆ.

    ಇಷ್ಟು ದಿನ ಮನೆ ಮತ್ತು ಕಟ್ಟಡ ಮೊದಲಾದ ಕಾಮಗಾರಿಗಳು ಲಾಕ್‌ಡೌನ್‌ನಿಂದಾಗಿ ನಿಂತಿತ್ತು. ಇದೀಗ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಯೊಂದಿಗೆ ಕಟ್ಟಡ, ಮನೆ ನಿರ್ಮಾಣ ಕೆಲಸ ಕಾರ್ಯಗಳಿಗೆ ಸೀಮಿತ ಸಂಖ್ಯೆಯ ಕಾರ್ಮಿಕರನ್ನು ಬಳಸಿ ಕಾರ್ಯ ನಿರ್ವಹಿಸಲು ಅವಕಾಶ ನೀಡಿದೆ. ಆದರೆ ಮರಳು ಮತ್ತು ಸಿಮೆಂಟ್, ಕಾರ್ಮಿಕರ ಕೊರತೆಯಿಂದ ನಿರ್ಮಾಣ ಕಾಮಗಾರಿಗಳು ನಡೆಯುತ್ತಿಲ್ಲ. ಸದ್ಯ ಬಹುತೇಕ ಹೊಸ ಮನೆ ನಿರ್ಮಾಣ, ಸಣ್ಣಪುಟ್ಟ ಕಟ್ಟಡ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ. ಮುಖ್ಯವಾಗಿ ಮರಳು ಸಿಕ್ಕರೆ ಕಾಮಗಾರಿ ವೇಗ ಪಡೆದುಕೊಳ್ಳುತ್ತದೆ. ಆದರೆ ಮರಳು ಸಿಗುವುದು ಸದ್ಯಕ್ಕೆ ಅನುಮಾನ.

    ಕುಂದಾಪುರ, ಬ್ರಹ್ಮಾವರ, ಬೈಂದೂರು ಗ್ರಾಮೀಣ ಭಾಗದಲ್ಲಿ ಕದ್ದುಮುಚ್ಚಿ ನಡೆಯುವ ಮರಳುಗಾರಿಕೆ ವ್ಯವಸ್ಥಿತವಾಗಿ ನಡೆಯುತ್ತ್ತಿದೆ. ಸಣ್ಣ ತೋಡು ಮತ್ತು ಮಳೆನೀರು ಹರಿಯುವ ಕಾಲುವೆಗಳಲ್ಲಿ ಮರಳನ್ನು ಸಂಗ್ರಹಿಸಲಾಗುತ್ತದೆ. ಬಳಿಕ ಸೀಮೆಂಟ್ ಚೀಲಗಳಲ್ಲಿ ಸಾಗಿಸಿ ಚೀಲಕ್ಕೊಂದು ರೇಟು ಫಿಕ್ಸ್ ಮಾಡಿ ಮಾರಾಟ ಮಾಡಲಾಗುತ್ತದೆ.

    ಮೂರು ಟೆಂಪೊ ಮರಳು ಚೀಲ ವಶಕ್ಕೆ: ಕೋಟ ಸಮೀಪ ಬೆಳೂರು ಗ್ರಾಮ, ದೇಲಟ್ಟು ಎಂಬಲ್ಲಿ ತೋಡು, ಕಾಲುವೆಗಳಲ್ಲಿ ಸಂಗ್ರಹಿಸಿದ್ದ ಮರಳು ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಮೂರು ಟೆಂಪೋಗಳ ಮರಳು ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಕೋಟ ಪೊಲೀಸರು, ಕಂದಾಯ ಇಲಾಖೆ, ಗಣಿ ಇಲಾಖೆ ಗಂಟಿ ಕಾರ್ಯಾಚರಣೆ ನಡೆಸಿ ಮರಳು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಮರಳುಗಾರಿಕೆಗೆ ಅವಕಾಶ ಇಲ್ಲ. ಮರಳನ್ನು ವಶಪಡಿಸಿಕೊಂಡಿದ್ದೇವೆ. ಗಣಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತಿದ್ದಾರೆ ಎಂದು ಕೋಟ ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಮರಳುಗಾರಿಕೆ ಸಾಧ್ಯವಿಲ್ಲ: ಕರೊನಾ ಇಲ್ಲದಿದ್ದಲ್ಲಿ ಏಪ್ರಿಲ್, ಮೇ ತಿಂಗಳು ಎರಡು ತಿಂಗಳು ಮರಳುಗಾರಿಕೆ ವ್ಯವಸ್ಥಿತವಾಗಿ ನಡೆಯುವುದರಲ್ಲಿತ್ತು. ಲಾಕ್‌ಡೌನ್ ಮುಗಿದರೂ ಕೆಲವೇ ದಿನಗಳಲ್ಲಿ ಕಾರ್ಮಿಕರ ಕೊರತೆ, ದಕ್ಕೆಗಳಲ್ಲಿ ತಯಾರಿ ಕೆಲಸ ಇತರೆ ಕಾರಣಗಳಿಂದ ಮರಳುಗಾರಿಕೆ ನಡೆಸಲು ಸಾಧ್ಯವಿಲ್ಲ. ಮರಳುಗಾರಿಕೆಗೆ ಇನ್ನೂ ಮೂರು ತಿಂಗಳು ಬಾಗಿಲು ಮುಚ್ಚಿದಂತೆ. ಜಿಲ್ಲೆಯ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಒಟ್ಟು 7.13 ಲಕ್ಷ ಮೆಟ್ರಿಕ್ ಮರಳು ತೆರವಿಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕಟ್ಟಡ ನಿರ್ಮಾಣ ಕಾಮಗಾರಿ ವಲಯಕ್ಕೆ ಮುಂದಿನ ಮೂರು ತಿಂಗಳು ದೊಡ್ಡ ಸಮಸ್ಯೆಯಾಗಲಿದೆ.

    ಸಿಮೆಂಟ್‌ಗೂ ಕೊರತೆ ಎದುರಾಗಲಿದೆಯೇ?: ಜಿಲ್ಲೆಯಲ್ಲಿ ಕೆಲ ದಿನಗಳಿಂದ ಸಿಮೆಂಟ್‌ಗೂ ಕೊರತೆ ಇದೆ ಎನ್ನಲಾಗುತ್ತಿದೆ. ಇದರಿಂದಾಗಿ ಮನೆ, ರಸ್ತೆ, ಕಟ್ಟಡ ಮೊದಲಾದ ಕಾಮಗಾರಿಗೆ ಅಡ್ಡಿಯಾಗುತ್ತಿದೆ ಎಂಬ ಅಭಿಪ್ರಾಯವಿತ್ತು. ಲಾಕ್‌ಡೌನ್‌ನಿಂದಾಗಿ ಪೂರೈಕೆ ಮತ್ತು ಉತ್ಪಾದನೆ ಇಲ್ಲದೆ ಸಿಮೆಂಟ್ ಸ್ಟಾಕ್ ಇರಲಿಲ್ಲ. ಬಾಕಿ ಇದ್ದ ಸ್ಟಾಕನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು, ಗುತ್ತಿಗೆದಾರರು ಮುಂಚಿತವಾಗಿಯೇ ಸ್ಟಾಕ್ ಖರೀದಿಸಿ ಬಿಟ್ಟಿದ್ದರಿಂದ ಸ್ಟಾಕ್ ಕೊರತೆಗೆ ಕಾರಣವಾಗಿದೆ. ಕೆಲವು ಕಂಪನಿಗಳ ಸಿಮೆಂಟ್ ಸ್ಟಾಕ್ ಕೊರತೆ ಇದ್ದದ್ದು ಹೌದು. ಆದರೆ ಇದೀಗ ಕಳೆದ ಎರಡು ದಿನಗಳಿಂದ ಜಿಲ್ಲೆಗೆ ಸಿಮೆಂಟ್ ಮತ್ತೆ ಪೂರೈಕೆಯಾಗಿದೆ ಎನ್ನುತ್ತಾರೆ ಸಿಮೆಂಟ್ ಡೀಲರ್‌ಗಳು. ಸದ್ಯಕ್ಕೆ ಗೋಡಾನ್‌ಗಳಲ್ಲಿ ಸಿಮೆಂಟ್‌ಗಳು ಸ್ಟಾಕ್ ಇದ್ದು, ಕಾರ್ಮಿಕರ ಕೊರತೆ, ಸಾಮಾಜಿಕ ಅಂತರ, ವಾಹನ ಓಡಾಟದ ಸಮಸ್ಯೆ ಇದರುವುದರಿಂದ ಗ್ರಾಹಕರಿಗೆ ತಲುಪಿಸುವುದು ಸಮಸ್ಯೆ ಎನ್ನುತ್ತಾರೆ ಡೀಲರ್‌ಗಳು. ಬಹುತೇಕ ಕಂಪೆನಿಗಳ ಸಿಮೆಂಟ್ ದರ ಚೀಲಕ್ಕೆ (50 ಕೆಜಿ)40ರಿಂದ 50 ರೂ.ಹೆಚ್ಚಳವಾಗಿದೆ. ಹೊರರಾಜ್ಯ ಮತ್ತು ಜಿಲ್ಲೆಗಳಿಂದ ಉಡುಪಿಗೆ ಭಾನುವಾರದ ಗೂಡ್ಸ್ ರೈಲಿನಲ್ಲಿ ಸಿಮೆಂಟ್ ಪೂರೈಕೆಯಾಗಿದೆ.

    ಸಿಮೆಂಟ್ ಸ್ಟಾಕ್ ಸಮಸ್ಯೆ ಇರಲಿಲ್ಲ. ಗೋಡೌನ್‌ನಿಂದ ಕೊಂಡುಕೊಳ್ಳುವವರ ಕೈಗೆ ಸಿಮೆಂಟ್ ಪೂರೈಕೆ ಸಮಸ್ಯೆಯಾಗಿತ್ತು. ಕಳೆದ ಎರಡು ದಿನಗಳಿಂದ ಜಿಲ್ಲೆಗೆ ಸಿಮೆಂಟ್ ಸ್ಟಾಕ್ ಮತ್ತೆ ಬಂದಿದೆ. ಸಿಮೆಂಟ್ ಬೇಡಿಕೆ ಜಾಸ್ತಿ ಇದೆ. ಆದರೆ ಕಡಿಮೆ ಸಂಖ್ಯೆಯಲ್ಲಿ ಕಾರ್ಮಿಕರ ಬಳಕೆ, ಸಾಗಾಟಕ್ಕೆ ವಾಹನಗಳ ಸಮಸ್ಯೆ ಇರುವುದರಿಂದ ಬೇಡಿಕೆಯಷ್ಟು ಪೂರೈಸಲು ಸಾಧ್ಯವಾಗುತ್ತಿಲ್ಲ.
    -ವಿವೇಕ್ ನಾಯಕ್ ಭಟ್ಕಳ, ಎಸ್‌ಕೆಎಸ್ ಟ್ರೇಡರ್ಸ್ ಉಪ್ಪುಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts