ಕುಂದಾಪುರ ಬೀಜಾಡಿ ಬಳಿ ಇನ್ಸುಲೇಟರ್ ವಾಹನದಲ್ಲಿ ಮರಳು ಸಾಗಣೆ, 7 ಮಂದಿ ಬಂಧನ

 

ಕುಂದಾಪುರ: ಕುಂದಾಪುರ ಬೀಜಾಡಿ ಬಳಿ ಮೀನು ಸಾಗಿಸುವ ಇನ್ಸುಲೇಟರ್ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಪ್ರಕರಣವನ್ನು ಸೋಮವಾರ ಬೆಳಗ್ಗೆ ಪತ್ತೆ ಹಚ್ಚಿದ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.
ವಾಹನ ಚಾಲಕ ಕಾಸರಗೋಡು ಪಾವೂರು ಮಂಜೇಶ್ವರದ ಅಬ್ದುಲ್ ಸತ್ತಾರ್(23), ಬ್ರಹ್ಮಾವರ ವಾರಂಬಳ್ಳಿ ನಿವಾಸಿಗಳಾದ ಮಂಜುನಾಥ್ ದಮ್ಮೂರ್(19), ಶ್ರೀಕಾಂತ್(28), ಶರಣಪ್ಪ(19), ಮಂಗಳೂರು ಬಿಜೈ ನಿವಾಸಿ ರಾಜೇಶ್ ಶೆಟ್ಟಿ(40), ಕುಳಾಯಿ ನಿವಾಸಿ ಸುಕೇಶ್ ಕೋಟ್ಯಾನ್(34), ಕಾಸರಗೋಡು ಪಾವೂರಿನ ನೌಶಾದ್ ಅಲಿ(21) ಬಂಧಿತರು.
ಕುಂದಾಪುರ ಪಿಎಸ್‌ಐ ಹರೀಶ್ ಆರ್ ಹಾಗೂ ಸಿಬ್ಬಂದಿ ಬೀಜಾಡಿ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಇನ್ನೋವಾ ಕಾರು ಹಾಗೂ ಇನ್ಸುಲೇಟರ್ ವಾಹನವನ್ನು ನಿಲ್ಲಿಸಲು ಸೂಚಿಸಿದ್ದರು. ಪೊಲೀಸರನ್ನು ಕಂಡು ಬೆದರಿದ ವಾಹನದಲ್ಲಿದ್ದವರು ಕೊಂಚ ದೂರ ಕ್ರಮಿಸಿ ವಾಹನ ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ್ದರು. ಕೂಡಲೇ ಅವರನ್ನು ಸುತ್ತುವರಿದ ಪೊಲೀಸರು ವಾಹನ ಪರಿಶೀಲಿಸಿದಾಗ ಮರಳು ಪತ್ತೆಯಾಗಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ಕುಂದಾಪುರ ಪಿಎಸ್‌ಐ ಹರೀಶ್ ಆರ್, ಎಎಸ್‌ಐ ಸುಧಾಕರ್, ಹೆಡ್ ಕಾನ್ಸ್‌ಟೆಬಲ್‌ಗಳಾದ ವಿಜಯ, ಹರೀಶ್, ಸಿಬ್ಬಂದಿ ಆನಂದ ಗಾಣಿಗ, ಪ್ರವೀಣ್, ಮಂಜುನಾಥ್, ಇಲಾಖಾ ಜೀಪು ಚಾಲಕ ಲೋಕೇಶ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದುಪ್ಪಟ್ಟು ಹಣಕ್ಕೆ ಸಾಗಾಟ:  ಬಿ.ಸಿ.ರೋಡ್‌ನಿಂದ ಬೀಜಾಡಿಗೆ ಬೆಂಗಾವಲು ವಾಹನ(ಎಸ್ಕಾರ್ಟ್)ದೊಂದಿಗೆ ಇನ್ಸುಲೇಟರ್ ವಾಹನದಲ್ಲಿ ಮರಳು ಸಾಗಿಸುತ್ತಿದ್ದ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇನ್ಸುಲೇಟರ್ ವಾಹನ, ಎಸ್ಕಾರ್ಟ್ ಮಾಡುತ್ತಿದ್ದ ಇನ್ನೋವಾ ಕಾರು ವಶಕ್ಕೆ ಪಡೆಯಲಾಗಿದೆ. ದುಪ್ಪಟ್ಟು ಹಣ ಪಡೆದು ಮರಳು ಸಾಗಿಸಲಾಗುತ್ತಿದ್ದು, ಹಲವು ತಿಂಗಳುಗಳಿಂದ ಈ ಜಾಲ ಸಕ್ರಿಯವಾಗಿ ಕಾರ್ಯಾಚರಿಸುತ್ತಿದೆ ಎನ್ನಲಾಗಿದೆ.