ಮರಳು ಲಾರಿಗಳಿಗೆ ಸುಧಾರಿತ ಜಿಪಿಎಸ್

>

– ಹರೀಶ್ ಮೋಟುಕಾನ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯೊಳಗೆ, ಹೊರ ಜಿಲ್ಲೆ ಹಾಗೂ ರಾಜ್ಯಕ್ಕೆ ಅಕ್ರಮ ಮರಳು ಸಾಗಾಟ ತಡೆಗಟ್ಟುವ ಉದ್ದೇಶದಿಂದ ಎಲ್ಲ ಮರಳು ಸಾಗಾಟ ಲಾರಿಗಳಿಗೆ ಸುಧಾರಿತ ಜಿಪಿಎಸ್ ಅಳವಡಿಕೆ ಕಡ್ಡಾಯಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
2010ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ಜಿಪಿಎಸ್ ಅಳವಡಿಕೆ ಮಾಡಲಾಗಿತ್ತು. ಇದರಿಂದ ಲಾರಿಗಳು ಎಲ್ಲಿ ಮರಳು ಲೋಡ್ ಮಾಡುತ್ತಿವೆ, ಅದನ್ನು ಎಲ್ಲಿ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಸ್ಪಷ್ಟವಾಗಿ ತಿಳಿಯುತ್ತಿತ್ತು. ಆದರೆ ಅದರಲ್ಲಿ ಕೆಲವೊಂದು ಲೋಪದೋಷವಿದ್ದ ಕಾರಣ ಅದನ್ನು ಬದಲಾಯಿಸಿ ಉತ್ತಮ ಗುಣಮಟ್ಟದ ಜಿಪಿಎಸ್ ಯಂತ್ರ ಅಳವಡಿಕೆಗೆ ನಿರ್ಧರಿಸಲಾಗಿದೆ.
ಸರ್ಕಾರ ಗೆಜೆಟ್ ನೋಟಿಫಿಕೆಷನ್‌ನಲ್ಲೂ ಎಲ್ಲ ಜಿಲ್ಲೆಗಳ ಮರಳು ಲಾರಿಗಳಿಗೆ ಜಿಪಿಎಸ್ ಅಳವಡಿಕೆ ಸೂಚನೆ ನೀಡಿತ್ತು. ಹಿಂದಿನ ಜಿಲ್ಲಾಧಿಕಾರಿ ಜಗದೀಶ್ ಜಿಲ್ಲೆಯ ಎಲ್ಲ ಮರಳು ಲಾರಿಗಳಿಗೆ ಜಿಪಿಎಸ್ ಕಡ್ಡಾಯಗೊಳಿಸಿ ಆದೇಶ ನೀಡಿದ್ದರು. ಪ್ರಸ್ತುತ ಶಶಿಕಾಂತ್ ಸೆಂಥಿಲ್ ಅಕ್ರಮ ಮರಳುಗಾರಿಕೆ ತಡೆಯುವ ನಿಟ್ಟಿನಲ್ಲಿ ಸುಧಾರಿತ ಮಾದರಿಯ ಜಿಪಿಎಸ್ ಅಳವಡಿಕೆಗೆ ನಿರ್ಧರಿಸಿದ್ದಾರೆ. ಈ ಹಿಂದೆ ಜಿಪಿಎಸ್ ಅಳವಡಿಕೆ ಮಾಡಿದ್ದು, ಅದು ಕೆಟ್ಟು ಹೋಗಿದ್ದರೆ ಹೊಸ ತಂತ್ರಜ್ಞಾನಕ್ಕೆ ಬದಲಾಯಿಸಿಕೊಳ್ಳುವುದು ಕಡ್ಡಾಯ.

ಸ್ಪಂದಿಸದ ಇಲಾಖೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಪಿಎಸ್ ಅಳವಡಿಕೆಯಾದ ಲಾರಿಗಳಲ್ಲಿ ನಡೆಯುವ ಅಕ್ರಮ ಮತ್ತು ಲಾರಿಯಲ್ಲಿ ಅಳವಡಿಕೆಯಾದ ಜಿಪಿಎಸ್ ತೆಗೆದು ಮರಳು ಸಾಗಾಟ ಮಾಡುವ ಬಗ್ಗೆ ನಿರ್ವಹಣೆ ಮಾಡಿದ ಕಂಪನಿಯವರು ದೂರು ನೀಡಿದ್ದರೂ ಇಲಾಖೆಯಿಂದ ಸೂಕ್ತ ಕ್ರಮ ಜರುಗಿಸುತ್ತಿಲ್ಲ ಎನ್ನುವ ಆರೋಪ ವ್ಯಕ್ತವಾಗಿದೆ.

ದುರುಪಯೋಗ ಅಸಾಧ್ಯ: ಮರಳು ಲಾರಿಗಳಲ್ಲಿರುವ ಹಳೆಯ ಜಿಪಿಎಸ್ ದುರುಪಯೋಗವಾಗುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಹೊಸ ರೀತಿ ಅಪ್‌ಡೇಟ್ ಮಾಡಲಾಗಿದೆ. ಲಾರಿಗಳಲ್ಲಿ ಅಳವಡಿಸಿದ ಜಿಪಿಎಸ್ ತೆಗೆದಲ್ಲಿ ಅಥವಾ ಸ್ತಬ್ಧಗೊಳಿಸಿದಲ್ಲಿ ಈ ಬಗ್ಗೆ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನೆಯಾಗಲಿದೆ. ಮಾತ್ರವಲ್ಲದೆ ಮತ್ತೆ ಕಾರ್ಯನಿರ್ವಹಿಸದಂತೆ ಜಿಪಿಎಸ್ ಸಿದ್ಧಪಡಿಸಲಾಗಿದೆ. ಇದನ್ನು ಇನ್ನಷ್ಟೇ ಇಲಾಖೆ ಕಾರ್ಯರೂಪಕ್ಕೆ ತರಬೇಕಾಗಿದೆ.

ಹೊಸ ಮಾದರಿಯ ಜಿಪಿಎಸ್ ಅಳವಡಿಕೆಗೆ ಜಿಲ್ಲಾಡಳಿತ ಚಿಂತನೆ ನಡೆಸುತ್ತಿರುವುದು ಸ್ವಾಗತಾರ್ಹ. ನ್ಯಾಯಯುತವಾಗಿ ಮರಳುಗಾರಿಕೆ ನಡೆಸುವವರಿಗೆ ಇದರಿಂದ ಯಾವುದೇ ತೊಂದರೆಯಿಲ್ಲ. ಇದರ ನಿರ್ವಹಣೆ ಜವಾಬ್ದಾರಿಯನ್ನು ಎರಡು ಕಂಪನಿಗೆ ನೀಡಿದರೆ ಉತ್ತಮ ಸೇವೆ ಲಭಿಸಲು ಸಾಧ್ಯವಿದೆ.
– ಮಯೂರ್ ಉಳ್ಳಾಲ್, ನಿಕಟಪೂರ್ವ ಅಧ್ಯಕ್ಷರು, ಮರಳು ಕ್ರಿಯಾ ಸಮಿತಿ

Leave a Reply

Your email address will not be published. Required fields are marked *