ಅಳಿವೆ ಪ್ರದೇಶದಲ್ಲಿ ಮರಳು ದಿಬ್ಬ

>>

ಬಿ. ರಾಘವೇಂದ್ರ ಪೈ ಗಂಗೊಳ್ಳಿ
ಗಂಗೊಳ್ಳಿ-ಕೋಡಿ ಅಳಿವೆ ಪ್ರದೇಶ ಮೀನುಗಾರರಿಗೆ ಕಂಟಕವಾಗಿ ಪರಿಣಮಿಸುತ್ತಿದ್ದು, ಒಂದು ತಿಂಗಳೊಳಗೆ ಮೂರು ಮೀನುಗಾರಿಕಾ ಬೋಟ್‌ಗಳು ಅಳಿವೆ ಪ್ರದೇಶದಲ್ಲಿ ಅವಘಡಕ್ಕೀಡಾಗಿದೆ. ಇದರಿಂದ ಮೀನುಗಾರರು ತೀವ್ರ ಆತಂಕಿತರಾಗಿದ್ದು, ಮಳೆಗಾಲ ಆರಂಭವಾಗುವ ಮೊದಲು ಗಂಗೊಳ್ಳಿ-ಕೋಡಿ ಅಳಿವೆ ಪ್ರದೇಶದಲ್ಲಿ ಹೂಳೆತ್ತಲು ಸಂಬಂಧಪಟ್ಟವರು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

ಗಂಗೊಳ್ಳಿಯಲ್ಲಿ ನಡೆದ ಬ್ರೇಕ್ ವಾಟರ್ ಕಾಮಗಾರಿ ವೇಳೆ ಕೋಡಿ ಪ್ರದೇಶದಲ್ಲಿ ರಾಶಿ ಹಾಕಲಾದ ಮರಳನ್ನು ಅಲ್ಲಿಂದ ತೆಗೆಯದೆ ಹಾಗೇ ಬಿಟ್ಟಿದ್ದರಿಂದ ಈಗ ಪಂಚಗಂಗಾವಳಿ ಹೊಳೆಯಲ್ಲಿ ಮರಳು ದಿಬ್ಬ ಸಂಗ್ರಹವಾಗಿದೆ. ಕೋಡಿ-ಗಂಗೊಳ್ಳಿ ನಡುವಿನ ಪಂಚಗಂಗಾವಳಿ ಹೊಳೆಯಲ್ಲಿರುವ ಮರಳು ನೇರವಾಗಿ ಗಂಗೊಳ್ಳಿ ಅಳಿವೆ ಬಾಗಿಲನ್ನು ಸೇರಿಕೊಳ್ಳುವ ಜತೆಗೆ ನದಿಯಲ್ಲಿ ಅಲ್ಲಲ್ಲಿ ಶೇಖರಣೆಯಾಗುತ್ತ ದಿಬ್ಬಗಳಾಗಿವೆ. ನದಿಯಲ್ಲಿ ಅಲ್ಲಲ್ಲಿ ಮರಳು ದಿಬ್ಬ ಸೃಷ್ಟಿಯಾಗುತ್ತಿರುವುದರಿಂದ ನದಿ ಪಾತ್ರವನ್ನೇ ಬದಲಿಸಿ ಬಿಡುವ ಆತಂಕ ಕೂಡ ಎದುರಾಗಿದೆ. ಇದರಿಂದ ಮೀನುಗಾರಿಕೆಗೆ ತೆರಳುವ ದೋಣಿ ಹಾಗೂ ಬೋಟುಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಸಮಸ್ಯೆ ಏನು?: ಸಮುದ್ರದ ಅಲೆಗಳ ಇಳಿತದ ಸಮಯದಲ್ಲಿ ಬೋಟುಗಳು ಸಂಚರಿಸುವುದು ಕಷ್ಟವಾಗುತ್ತಿದೆ. ಭರತದ ಸಮಯ ನೋಡಿ ಬೋಟುಗಳು ಬಂದರು ಒಳಗೆ ಮತ್ತು ಹೊರಗೆ ಹೋಗಬೇಕಾಗಿದ್ದು, ಇದರಿಂದ ಮೀನುಗಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕಳೆದ ಒಂದು ತಿಂಗಳೊಳಗೆ ಮೂರು ಬೋಟುಗಳು ಮರಳು ದಿಬ್ಬಕ್ಕೆ ಡಿಕ್ಕಿ ಹೊಡೆದು ಮರಳಲ್ಲಿ ಹೂತು ನಿಂತಿವೆ.

ಮನವಿಗೆ ಸ್ಪಂದನೆ ಶೂನ್ಯ: ಗಂಗೊಳ್ಳಿ ಹಾಗೂ ಕೋಡಿ ಅಳಿವೆ ಪ್ರದೇಶದಲ್ಲಿ ಅನುಷ್ಠಾನಗೊಂಡ ಬ್ರೇಕ್ ವಾಟರ್ ಕಾಮಗಾರಿಯಲ್ಲಿ ಅಳಿವೆ ಹಾಗೂ ಜೆಟ್ಟಿ ಪ್ರದೇಶದಲ್ಲಿ ಹೂಳೆತ್ತಲು ಅನುದಾನ ಮೀಸಲಿರಿಸಲಾಗಿದೆ. ಆದರೆ ಈವರೆಗೆ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಇನ್ನೇನು 1 ತಿಂಗಳಿನಲ್ಲಿ ಮಳೆಗಾಲ ಆರಂಭವಾಗಲಿದ್ದು, ಹೂಳೆತ್ತುವ ಕಾಮಗಾರಿಯನ್ನು ಮಳೆಗಾಲ ಪ್ರಾರಂಭವಾಗುವ ಮೊದಲು ಕೈಗೆತ್ತಿಕೊಳ್ಳಬೇಕಾದ ಅವಶ್ಯಕತೆ ಇದೆ. ಅಳಿವೆ ಪ್ರದೇಶದಲ್ಲಿ ಹೂಳೆತ್ತುವಂತೆ ಹಲವು ವರ್ಷಗಳಿಂದ ಮೀನುಗಾರರು ಸರ್ಕಾರಗಳನ್ನು ಒತ್ತಾಯಿಸುತ್ತ ಬಂದಿದ್ದರೂ, ಸ್ಪಂದನೆ ಸಿಕ್ಕಿಲ್ಲ.

ಗಂಗೊಳ್ಳಿ-ಕೋಡಿ ಅಳಿವೆ ಪ್ರದೇಶದಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆಯಬೇಕು ಎಂದು ನಾವು ಅನೇಕ ಬಾರಿ ಸಂಬಂಧಪಟ್ಟ ಸಂಸದರು, ಶಾಸಕರು, ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಶಾಸಕರು ಕೂಡ ಹೂಳೆತ್ತಲು ಅಧಿಕಾರಿಗಳಿಗೆ ಸೂಚನೆ ನೀಡಿದರೂ, ಇಲಾಖೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಕೂಡಲೇ ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಲಿ.
– ಎಚ್.ಮಂಜು ಬಿಲ್ಲವ, ಅಧ್ಯಕ್ಷರು, ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘ, ಗಂಗೊಳ್ಳಿ

ಗಂಗೊಳ್ಳಿ ಹಾಗೂ ಕೋಡಿ ಅಳಿವೆ ಪ್ರದೇಶದಲ್ಲಿ ಅನುಷ್ಠಾನಗೊಂಡ ಬ್ರೇಕ್ ವಾಟರ್ ಕಾಮಗಾರಿಯಲ್ಲಿ ಅಳಿವೆ ಹಾಗೂ ಜೆಟ್ಟಿ ಪ್ರದೇಶದಲ್ಲಿ ಹೂಳೆತ್ತುವ ಬಗ್ಗೆ ಅನುದಾನ ಮೀಸಲಿರಿಸಲಾಗಿದ್ದರೂ ಈವರೆಗೆ ಹೂಳೆತ್ತುವ ಕಾಮಗಾರಿ ಆರಂಭಿಸಿಲ್ಲ. ಅಳಿವೆಯಲ್ಲಿ ಮರಳು ರಾಶಿ ಬಿದ್ದಿದ್ದು, ಮಳೆಗಾಲದೊಳಗೆ ತೆರವುಗೊಳಿಸದಿದ್ದರೆ ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆಯಿದೆ.
– ರಾಮಪ್ಪ ಖಾರ್ವಿ, ಮೀನುಗಾರ ಮುಖಂಡ, ಗಂಗೊಳ್ಳಿ

Leave a Reply

Your email address will not be published. Required fields are marked *