ಮರಳು ದಿಬ್ಬ ತೆರವು ಆರಂಭ

ಉಡುಪಿ: ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ(ಸಿಆರ್‌ಝಡ್) ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವು ಆರಂಭಗೊಂಡಿದೆ. ಮೂಡುತೋನ್ಸೆ, ಉಪ್ಪೂರು, ಹಾರಾಡಿ ವ್ಯಾಪ್ತಿಯಲ್ಲಿ ಪರವಾನಗಿ ಪಡೆದ 12 ಮಂದಿ ಮರಳು ದಿಬ್ಬ ತೆರವು ಕಾರ್ಯ ಆರಂಭಿಸಿದ್ದಾರೆ. ಮರಳು ದಿಬ್ಬ ತೆರವಿಗೆ 2011ಕ್ಕಿಂತ ಹಿಂದೆ ಸಾಂಪ್ರದಾಯಿಕ ಮರಳುಗಾರಿಕೆ ಮಾಡುತ್ತಿದ್ದ 61 ಮಂದಿಯಲ್ಲಿ 45 ಮಂದಿ ಅರ್ಹತೆ ಪಡೆದಿದ್ದಾರೆ. ಇವರಲ್ಲಿ 32 ಮಂದಿ ಅಗತ್ಯ ದಾಖಲೆ ಮತ್ತು ಡಿ.ಡಿ.ನೀಡಿ ಪರವಾನಗಿ ಪಡೆದುಕೊಂಡಿದ್ದಾರೆ.

ಮರಳುಗಾರಿಕೆ ಪ್ರಾರಂಭಿಸಲು ಇವರಿಗೆ ನೀಡಲಾದ ಅಂತಿಮ ಗಡುವು ಸೋಮವಾರಕ್ಕೆ ಮುಗಿದಿತ್ತು. ಅದರಲ್ಲಿ 12 ಮಂದಿ ಪರವಾನಗಿದಾರರು ದಿಬ್ಬ ತೆರವು ಆರಂಭಿಸಿದ್ದಾರೆ. ಪರವಾನಿಗೆ ಪಡೆದುಕೊಂಡಿದ್ದರೂ, ಮರಳುಗಾರಿಕೆ ಪ್ರಾರಂಭಿಸದವರಿಗೆ ನೋಟಿಸ್ ಜಾರಿ ಮಾಡುವುದಾಗಿ ಡಿಸಿ ಎಚ್ಚರಿಕೆ ನೀಡಿದ್ದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಡಿಸಿ ವಿದ್ಯಾಕುಮಾರಿ, ಪರವಾನಗಿ ಪಡೆದು ಮರಳು ದಿಬ್ಬ ತೆರವುಗೊಳಿಸಲು ಮುಂದಾಗದ ಉಳಿದ ಪರವಾನಿಗೆದಾರರಿಗೆ, ಜಿಲ್ಲಾಡಳಿತ 7 ಸದಸ್ಯರ ಸಮಿತಿ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ. ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ಗುರುತಿಸುವ ಬಗ್ಗೆ ಬೆಥಮೆಟ್ರಿಕ್ ಸರ್ವೇ ನಡೆಯುತ್ತಿದೆ. ಕೆಲ ದಿಬ್ಬಗಳನ್ನು ಗುರುತಿಸಲಾಗಿದೆ ಎಂದರು.

ಸರ್ಕಾರಿ ಯೋಜನೆಗಳಿಗೆ ಶೇ.10 ಮರಳು ನೀಡುವಂತೆ ಪರವಾನಗಿದಾರರಿಗೆ ಸೂಚನೆ ನೀಡಲಾಗಿದೆ. ಕಾರ್ಕಳದಲ್ಲಿ ನಾನ್ ಸಿಆರ್‌ಝಡ್ ವ್ಯಾಪ್ತಿ 2 ದಿಬ್ಬಗಳನ್ನು ಗುರುತಿಸಲಾಗಿದೆ. ಕುಂದಾಪುರ ಕೋಡಿಯಲ್ಲಿ ಡ್ರಜ್ಜಿಂಗ್ ಮಾಡಿ ತೆಗೆದ 40 ಸಾವಿರ ಮೆಟ್ರಿಕ್ ಟನ್ ಮರಳು ದಾಸ್ತಾನಿದ್ದು, 1 ಕ್ಯೂಬಿಕ್ ಮೀಟರ್‌ಗೆ (1.72 ಮೆಟ್ರಿಕ್ ಟನ್) 518 ರೂ. ದರ ಎಂದು ಎಡಿಸಿ ತಿಳಿಸಿದರು.

ಒಂದು ವಾರಕ್ಕಷ್ಟೇ ಸಾಕು!: ಐದಾರು ಮಂದಿ ಮರಳು ದಿಬ್ಬ ತೆರವು ಆರಂಭಿಸಿದ್ದು, ಒಂದು ವಾರಕ್ಕೆ ಸಾಕಾಗುವಷ್ಟು ಮರಳು ಸಿಗಬಹುದು ಅಷ್ಟೆ ಎಂದು ಸರ್ವ ಸಂಘಟನೆ ಮರಳಿಗಾಗಿ ಹೋರಾಟ ಸಮಿತಿ ಸಂಚಾಲಕ ಎಂ.ಜಿ ನಾಗೇಂದ್ರ ವಿಜಯವಾಣಿಗೆ ತಿಳಿಸಿದರು. ಅದರಲ್ಲಿ ಸರ್ಕಾರಿ ಯೋಜನೆಗಳಿಗೆ ಶೇ.10 ಮರಳು ಮೀಸಲಿಡಲು ಸೂಚಿಸಿದ್ದಾರೆ. ಎಲ್ಲ ಮರಳು ಅಲ್ಲಿಗೆ ಸರಿಯಾಗುತ್ತದೆ. ವ್ಯವಸ್ಥಿತ ರೀತಿಯಲ್ಲಿ ಮರಳು ದಿಬ್ಬ ತೆರವು ಆರಂಭಿಸಿಲ್ಲ. ಜಿಲ್ಲಾಡಳಿತ ಆರೋಪದಿಂದ ಜಾರಿಕೊಳ್ಳಲು ಹೀಗೆ ಮಾಡುತ್ತಿದೆ. ಸದ್ಯ ಪರವಾನಿಗೆ ತೆಗೆದುಕೊಂಡವರು ಮರಳು ದಿಬ್ಬ ತೆರವುಗೊಳಿಸಲಿ, ನಮ್ಮ ಅಭ್ಯಂತರವಿಲ್ಲ, ಎಲ್ಲ 171 ಮಂದಿಗೂ ಪರವಾನಿಗೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಸಿಆರ್‌ಝಡ್ ವ್ಯಾಪ್ತಿಯ ಉಪ್ಪೂರು, ಹಾರಾಡಿ, ಮೂಡುತೋನ್ಸೆ ಭಾಗದಲ್ಲಿ ಪರವಾನಗಿ ಪಡೆದ 12 ಮಂದಿ ಮರಳು ದಿಬ್ಬ ತೆರವು ಕಾರ್ಯ ಆರಂಭಿಸಿದ್ದಾರೆ.
|ಪದ್ಮಜಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ.