ಮರಳಿಗೂ ಬಂತು ಆ್ಯಪ್

>

ಹರೀಶ್ ಮೋಟುಕಾನ, ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಗಟ್ಟುವ ಉದ್ದೇಶದಿಂದ ದಿಟ್ಟ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ ಇದೀಗ ಮರಳು ಸಾಗಾಟದಲ್ಲೂ ಪಾರದರ್ಶಕತೆ ತರುವ ನಿಟ್ಟಿನಲ್ಲಿ ‘ಸ್ಯಾಂಡ್ ಬಜಾರ್’ ಆ್ಯಪ್ ತಯಾರಿಸಿದ್ದು, ವಾರದೊಳಗೆ ಇದು ಲೋಕಾರ್ಪಣೆಗೊಳ್ಳಲಿದೆ.
ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮೊದಲು ಈ ಆ್ಯಪ್‌ನ್ನು ಅಳವಡಿಸಿ, ಬಳಿಕ ಅದನ್ನು ಇಡೀ ಜಿಲ್ಲೆಗೆ ವಿಸ್ತರಿಸಲು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ನಿರ್ಧರಿಸಿದ್ದಾರೆ. ಈ ಮೂಲಕ ಮರಳು ಸಾಗಾಟದಲ್ಲಿ ನಡೆಯುವ ಮಧ್ಯವರ್ತಿಗಳ ಹಾವಳಿ, ದರಗಳ ಏರಿಳಿತವನ್ನು ತಡೆಗಟ್ಟಿ ಮರಳು ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಜಿಲ್ಲಾಡಳಿತ ದಿಟ್ಟ ಕ್ರಮಕೈಗೊಂಡಿದೆ.

ಏನಿದು ಆ್ಯಪ್?: ಸ್ಯಾಂಡ್ ಬಜಾರ್ ಆ್ಯಪ್ ‘ಫ್ರಮ್ ಶೋರ್ ಟು ಎವ್ರಿ ಡೋರ್(ನದಿ ದಡದಿಂದ ಮನೆಬಾಗಿಲಿಗೆ) ಎನ್ನುವ ಘೋಷಣೆಯೊಂದಿಗೆ ತಯಾರಿಸಲಾಗಿದೆ. ಮರಳು ಸಾಗಾಟ ಸುಲಭವಾಗಿ ನಡೆದು ಗ್ರಾಹಕರಿಗೆ ತಲುಪಲು ಅನುಕೂಲವಾಗಲಿದೆ. ಜಿಲ್ಲಾಡಳಿತ ಮರಳಿಗೆ ನಿಗದಿತ ದರ ನಿಗದಿ ಮಾಡಿ ಅದರ ಆಧಾರದಲ್ಲಿ ಪೂರೈಕೆ ಮಾಡಲಿದೆ. ಇದರಿಂದ ಜನಸಾಮಾನ್ಯರಿಂದ ದುಬಾರಿ ದರ ವಸೂಲಿ ತಪ್ಪಲಿದೆ.

ಕಾರ್ಯವಿಧಾನ ಹೇಗೆ?: ಮರಳು ಬೇಕಾದ ಗ್ರಾಹಕರು ಸ್ಯಾಂಡ್ ಬಜಾರ್ ಆ್ಯಪ್ ಡೌನ್ಲೋಡ್ ಮಾಡಬೇಕು. ಬಳಿಕ ಗ್ರಾಹಕರ ಸಂಪೂರ್ಣ ವಿಳಾಸ, ಮರಳು ಎಲ್ಲಿಗೆ ಪೂರೈಕೆ ಮಾಡಬೇಕು. ಗ್ರಾಹಕನ ಆಧಾರ್ ನಂಬರ್ ನಮೂದಿಸಿ ಹತ್ತಿರವಿರುವ ಮರಳು ದಕ್ಕೆ ಸ್ಥಳವನ್ನು ಟೈಪ್ ಮಾಡಿ ಕಳುಹಿಸಬೇಕು. ಈ ಸಂದರ್ಭ ಓಟಿಪಿ ಸಂಖ್ಯೆ ಬರಲಿದ್ದು, ಆ್ಯಪ್ ಮೂಲಕ ಮರಳು ಸಾಗಾಟದ ದರ ಸಂದೇಶ ಬರಲಿದೆ. ಈ ಮೊತ್ತವನ್ನು ಪೇಟಿಎಂ, ನೆಟ್‌ಬ್ಯಾಕಿಂಗ್ ಮೂಲಕ ಪಾವತಿಸಬೇಕು. ಹಣ ಪಾವತಿಸಿದ ಕೂಡಲೇ ಮೊಬೈಲ್ ಸಂದೇಶ ಬರಲಿದ್ದು ಅದನ್ನು ಹಿಡಿದುಕೊಂಡು ಸಂಬಂಧಪಟ್ಟ ಮರಳು ಧಕ್ಕೆಗೆ ಹೋಗಿ ತೋರಿಸಬೇಕು. ದಕ್ಕೆಗೂ ಕಂಟ್ರೋಲ್ ರೂಂನಿಂದ ಸಂದೇಶ ಹೋಗಲಿದೆ. ಇದರ ಆಧಾರದ ಮೇಲೆ ಮರಳು ಸಾಗಾಟ ನಡೆಯಲಿದೆ.

ಟ್ರಾೃಕಿಂಗ್ ಸ್ಟೇಟಸ್: ಮರಳು ಬುಕ್ಕಿಂಗ್ ನೋಂದಾವಣೆಯಿಂದ ಹಿಡಿದು ಹಣಪಾವತಿ, ಮರಳು ಬುಕ್ಕಿಂಗ್, ವಾಹನ ಬುಕ್ಕಿಂಗ್, ಮರಳು ಲಾರಿ ಸಾಗಾಟವಾಗುವ ಟ್ರಾೃಕಿಂಗ್ ಸ್ಟೇಟಸ್ ಹಂತಹಂತವಾಗಿ ಸ್ಯಾಂಡ್ ಬಜಾರ್ ಆ್ಯಪ್‌ನಲ್ಲಿ ದೊರೆಯಲಿದ್ದು, ಇದು ಗ್ರಾಹಕರ ಮಾಹಿತಿಗೆ ಅನುಕೂಲವಾಗಲಿದೆ. ಅಲ್ಲದೆ ಬುಕ್ಕಿಂಗ್ ಮಾಹಿತಿ, ಗ್ರಾಹಕರ ಮಾಹಿತಿ, ಗೂಗಲ್ ಮ್ಯಾಪ್ ಮೂಲಕ ಮರಳು ಧಕ್ಕೆಯ ವಿವರವೂ ಆ್ಯಪ್‌ನಲ್ಲಿ ಸಿಗಲಿದೆ.

ರಾಜ್ಯದಲ್ಲೇ ಮೊದಲ ಪ್ರಯೋಗ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಜಿಲ್ಲೆಯ ಮರಳುಗಾರಿಕೆ ಅಕ್ರಮ ದಂಧೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಬಹುತೇಕ ಯಶಸ್ವಿಯಾಗಿದ್ದು, ಇದೀಗ ಮರಳುಗಾರಿಕೆ ನಿರ್ವಹಣೆಯನ್ನು ಯಶಸ್ವಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಸ್ಯಾಂಡ್ ಬಜಾರ್ ಆ್ಯಪ್ ತಯಾರಿಸಿದ್ದಾರೆ. ಇದು ಮರಳುಗಾರಿಕೆಯಲ್ಲಿ ರಾಜ್ಯದಲ್ಲೇ ಮೊದಲ ಪ್ರಯೋಗವಾಗಿದ್ದು, ಇದರ ನಿರ್ವಹಣೆಯನ್ನು ಭೂ ವಿಜ್ಞಾನ ಮತ್ತು ಗಣಿ ಇಲಾಖೆಗೆ ವಹಿಸಲಾಗಿದೆ.

ಕಪ್ಪು ಪಟ್ಟಿಗೆ ಸೇರ್ಪಡೆ
ಆ್ಯಪ್‌ನಲ್ಲಿ ಆರ್ಡರ್ ಮಾಡಿದ ಮರಳನ್ನು ನಿಗದಿತ ಸಮಯದೊಳಗೆ ಸಂಬಂಧಪಟ್ಟ ಮರಳು ಲಾರಿಯವರು ಸಾಗಾಟ ಮಾಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡುವಂತಿಲ್ಲ. ಒಂದು ವೇಳೆ ವಿಳಂಬ ಮಾಡಿದರೆ ಆ ಲಾರಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿರಂತರ ಮೂರು ಬಾರಿ ಲೋಪ ಮರುಕಳಿಸಿದರೆ ಆ ಲಾರಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮರಳುಗಾರಿಕೆಯಲ್ಲಿ ಪಾರದರ್ಶಕತೆ ತರಲು ಹಾಗೂ ಸುಲಭ ನಿರ್ವಹಣೆಗೆ ಸ್ಯಾಂಡ್ ಬಜಾರ್ ಆ್ಯಪ್ ತಯಾರಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಲೋಕಾರ್ಪಣೆ ವಿಳಂಬವಾಗಿದೆ. ಆ್ಯಪ್ ಮೂಲಕ ಗ್ರಾಹಕರಿಗೆ ಸುಲಭವಾಗಿ ಮರಳು ಸಿಗಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಶಶಿಕಾಂತ್ ಸೆಂಥಿಲ್, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ 

Leave a Reply

Your email address will not be published. Required fields are marked *