ರಕ್ಷಿತಾರಣ್ಯದಲ್ಲಿ ಗಿಡ ನಾಟಿ

ಭರತ್ ಶೆಟ್ಟಿಗಾರ್ ಮಂಗಳೂರು
ಕಳೆದ ವರ್ಷ ಪಶ್ಚಿಮಘಟ್ಟ ಹಾಗೂ ತಪ್ಪಲಲ್ಲಿ ಸೇರಿದಂತೆ ರಕ್ಷಿತಾರಣ್ಯದಲ್ಲಿ ವಿವಿಧ ಜಾತಿಯ ಗಿಡಗಳನ್ನು ನಾಟಿ ಮಾಡಿದ್ದ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ(ಎನ್‌ಇಸಿಎಫ್) ಈ ಬಾರಿಯೂ ಗಿಡಗಳನ್ನು ನೆಡಲು ಸಜ್ಜಾಗಿದೆ.
ಹಸಿರು ಹೊದಿಕೆ ಹೆಸರಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧಡೆ ಕಳೆದ ಬಾರಿ 2,900 ಗಿಡ ನಾಟಿ ಮಾಡಲಾಗಿತ್ತು. ಈ ಯಶಸ್ಸಿನಿಂದ ಮತ್ತೆ ಗಿಡಗಳನ್ನು ನಡೆಸಲು ನಿರ್ಧರಿಲಾಗಿದೆ. ಅರಣ್ಯ ಇಲಾಖೆ, ಪಂಚಾಯಿತಿ, ಸ್ಥಳೀಯರು, ವಿವಿಧ ಕಾಲೇಜುಗಳ ಎನ್ನೆಸ್ಸೆಸ್-ಎನ್‌ಸಿಸಿ ವಿದ್ಯಾರ್ಥಿಗಳ ಸಹಕಾರದಿಂದ ಒಟ್ಟು ಆರು 6 ಕಡೆ ಅಭಿಯಾನ ನಡೆಯಲಿದೆ.

ಹಣ್ಣಿನ ಗಿಡ ನಾಟಿ:  ಅರಣ್ಯದಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಗುತ್ತದೆ. ಅತ್ತಿ ಮತ್ತು ಆಲದ ಗಿಡಗಳನ್ನು ಈ ಬಾರಿ ಹೆಚ್ಚುವರಿ ಆಯ್ಕೆ ಮಾಡಲಾಗಿದೆ. ಮಂಗಗಳು ಮತ್ತು ವಿವಿಧ ಜಾತಿಯ ಹಕ್ಕಿಗಳು ಇದರ ಹಣ್ಣು ತಿನ್ನುತ್ತವೆ. ಉಳಿದಂತೆ ಹಲಸು, ಹೆಬ್ಬಲಸು, ನೇರಳೆ, ಮಾವು, ಪುನರ್ಪುಳಿ, ಹುಳಿ, ಜಾಮೂನು ಮೊದಲಾದ ಹಣ್ಣುಗಳ ಗಿಡಗಳನ್ನು ನಾಟಿ ಮಾಡಲು ಎನ್‌ಇಸಿಎಫ್ ಉದ್ದೇಶಿಸಿದೆ. ಕಾಡುಪ್ರಾಣಿ-ಪಕ್ಷಿಗಳಿಗೆ ಆಹಾರ ಸಿಗುವ ಮೂಲಕ ಮಂಗ ಮೊದಲಾದ ಪ್ರಾಣಿಗಳು ನಾಡಿಗೆ ಬಂದು ರೈತರ ಬೆಳೆ ಹಾನಿ ಮಾಡಬಾರದು ಎಂಬ ಉದ್ದೇಶವೂ ಅಡಗಿದೆ.
ಕಳೆದ ವರ್ಷ ಕುಕ್ಕೆ ಸುಬ್ರಹ್ಮಣ್ಯ, ಉಪ್ಪಿನಂಗಡಿ, ಹೆಬ್ರಿ, ಬೆಳ್ತಂಗಡಿ, ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಗಿಡಗಳನ್ನು ನೆಡಲಾಗಿತ್ತು. ಈ ಬಾರಿ ಮೂಡುಬಿದಿರೆಯಿಂದ 15 ಕಿ.ಮೀ. ದೂರದಲ್ಲಿರುವ ಅರಣ್ಯ ಪ್ರದೇಶ, ಉಪ್ಪಿನಂಗಡಿ, ಪಲಿಮಾರು- ಕರ್ನಿರೆ, ಕುಂದಾಪುರ ಮದ್ದೋಡಿ ಮೊದಲಾದೆಡೆ ಕಾರ್ಯಕ್ರಮ ನಡೆಯಲಿದೆ. 850 ಹಲಸಿನ ಹಣ್ಣಿನ ಗಿಡಗಳನ್ನು ಪರಿಸರ ಪ್ರೇಮಿಯೊಬ್ಬರು ಒದಗಿಸಲಿದ್ದು, ಉಳಿದ ಗಿಡಗಳನ್ನು ನರ್ಸರಿ ಹಾಗೂ ಅರಣ್ಯ ಇಲಾಖೆಯಿಂದ ಪಡೆಯಲಾಗುತ್ತದೆ.

ಕಾರ್ಯಕ್ರಮದ ಉದ್ದೇಶ: ಮಳೆ ಆರಂಭವಾಗುತ್ತಿದ್ದಂತೆ ಎಲ್ಲೆಡೆ ಕೇವಲ ತೋರಿಕೆಗಷ್ಟೇ ವನಮಹೋತ್ಸವದಂಥ ಕಾರ್ಯಕ್ರಮ ಆಯೋಜಿಸಲ್ಪಡುತ್ತಿವೆ. ನೆಟ್ಟ ಬಳಿಕ ಗಿಡಗಳ ನಿರ್ವಹಣೆ ಮಾಡುವವರಿಲ್ಲ. ಅದೇ ರೀತಿ ಘಟ್ಟದಲ್ಲಿ ಮರಗಳನ್ನು ಕಡಿಯುವವರೇ ಹೆಚ್ಚಾಗಿದ್ದಾರೆಯೇ ಹೊರತು, ಗಿಡ ನೆಟ್ಟು ಬೆಳೆಸುವವರಿಲ್ಲ. ವಿವಿಧ ಯೋಜನೆಗಳ ನೆಪದಲ್ಲಿ ಅರಣ್ಯ ನಾಶ ನಿರಂತರವಾಗಿದೆ. ಕಾಡಿನಲ್ಲಾದರೂ ಮರಗಳು ಬೆಳೆಯಲಿ ಎಂಬ ಉದ್ದೇಶದಿಂದ ರಕ್ಷಿತಾರಣ್ಯಕ್ಕೆ ತೆರಳಿ ಖಾಲಿ ಜಾಗಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಎನ್‌ಇಸಿಎಫ್ ರೂಪಿಸಿದೆ.

ಮಳೆ ಇಲ್ಲದೆ ಸಮಸ್ಯೆ
ಕಳೆದ ವರ್ಷ ಮಳೆ ಆಗಸ್ಟ್ ತಿಂಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪರಿಣಾಮ ಹೆಚ್ಚು ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಈ ಬಾರಿ ಬೇಗ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಮಳೆಯೇ ಆರಂಭವಾಗಿಲ್ಲ, ಪರಿಣಾಮ ಮೇ 26ರಿಂದ ಆರಂಭವಾಗಬೇಕಿದ್ದ ಅಭಿಯಾನ ಮಳೆಯ ನಿರೀಕ್ಷೆಯಲ್ಲಿ ಪ್ರಸ್ತುತ 15 ದಿನಗಳ ಮಟ್ಟಿಗೆ ಮುಂದೂಡಲ್ಪಟ್ಟಿದೆ.

ಮೇ 26ರಿಂದ ಗಿಡಗಳ ನಾಟಿ ಅಭಿಯಾನ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಮಳೆ ಆರಂಭವಾಗದಿರುವ ಹಿನ್ನೆಲೆಯಲ್ಲಿ ತಡವಾಗಿ ಆರಂಭವಾಗಲಿದೆ. ಕಳೆದ ಬಾರಿ ಕಾರ್ಯಕ್ರಮ ಯಶಸ್ವಿಯಾಗಿದ್ದು, ಸ್ಥಳೀಯರು ಬೇಸಿಗೆಯಲ್ಲಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. ಈ ಬಾರಿ ಮತ್ತಷ್ಟು ಹಣ್ಣಿನ ಗಿಡಗಳನ್ನು ನಾಟಿ ಮಾಡಲು ಸಿದ್ಧತೆ ಮಾಡಲಾಗಿದೆ.
ಶಶಿಧರ್ ಶೆಟ್ಟಿ,  ಎನ್‌ಇಸಿಎಫ್ ಸಂಚಾಲಕ

Leave a Reply

Your email address will not be published. Required fields are marked *