ಚಿಂತಕರ ಹತ್ಯೆಗಳಲ್ಲಿ ಸನಾತನ ಸಂಘ ಭಾಗಿಯಾಗಿದ್ದರೆ ನಿಷೇಧಕ್ಕೆ ಚಿಂತನೆ: ಡಾ.ಜಿ. ಪರಮೇಶ್ವರ್

ಬೆಂಗಳೂರು: ರಾಜ್ಯದಲ್ಲಿ ನಡೆದಿರುವ ಚಿಂತಕರ ಹತ್ಯೆಯಲ್ಲಿ ಸನಾತನ ಸಂಘದ ಪಾತ್ರವಿರುವುದು ಸಾಬೀತಾದರೆ ಸಂಘದ ನಿಷೇಧಕ್ಕೆ ಚಿಂತನೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.

ಸನಾತನ ಸಂಘಟನೆಯನ್ನು ನಿಷೇಧಿಸಬೇಕು ಹಾಗೂ ಜಿಗ್ನೇಶ್ ಮೇವಾನಿ, ಪ್ರಕಾಶ್ ರೈ ವಿರುದ್ಧ ದಾಖಲಾಗಿರುವ ಚುನಾವಣಾ ನೀತಿ ಸಂಹಿತೆ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್. ದೊರೆಸ್ವಾಮಿ ನೇತೃತ್ವದ, ಗೌರಿ ಲಂಕೇಶ್ ಟ್ರಸ್ಟ್ ಸದಸ್ಯರುಳ್ಳ ನಿಯೋಗ ಶುಕ್ರವಾರ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರನ್ನು ವಿಧಾನಸೌಧದಲ್ಲಿ ಭೇಟಿಯಾಯಿತು.

ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, “ಗೌರಿ ಲಂಕೇಶ್ ಟ್ರಸ್ಟ್ ಸದಸ್ಯರ ನಿಯೋಗ ಇಂದು ನನ್ನನ್ನು ಭೇಟಿ ಮಾಡಿ ಸನಾತನ ಸಂಸ್ಥೆ ನಿಷೇಧಿಸುವಂತೆ ಮನವಿ ಮಾಡಿದೆ. ಚಿಂತರಕ ಹತ್ಯೆ ಪ್ರಕರಣಗಳಲ್ಲಿ ಸನಾತನ ಸಂಘದ ಪಾತ್ರವಿರುವುದು ಖಚಿತವಾದರೆ ಅದರ ನಿಷೇಧಕ್ಕೆ ಚಿಂತನೆ ಮಾಡಲಾಗುವುದು” ಎಂದು ತಿಳಿಸಿದರು.

“ಗೌರಿ ಲಂಕೇಶ್​ ಹತ್ಯೆಯಾಗಿ ಸೆ.5 ಕ್ಕೆ ಒಂದು ವರ್ಷ ತುಂಬಲಿದೆ. ಅಂದು ಚಿಂತಕರ ಸಭೆ ನಡೆಸಲು ನಿಯೋಗ ತೀರ್ಮಾನಿಸಿದೆ. ಸಭೆಗೆ ದೇಶದ ಹಲವು ಚಿಂತಕರು ಆಗಮಿಸಲಿದ್ದಾರೆ. ಹೀಗಾಗಿ ಅಂದಿನ ಸಭೆಗೆ ರಕ್ಷಣೆ ಬೇಕೆಂದು ನಿಯೋಗ ಕೋರಿದೆ. ಭದ್ರತೆ ಕೊಡಲು ನಾನು ಒಪ್ಪಿಗೆ ನೀಡಿದ್ದೇನೆ. ಗೌರಿ ಲಂಕೇಶ್ ಹತ್ಯೆಯ ತನಿಖೆ ಇನ್ನೂ ತೀವ್ರಗತಿಯಲ್ಲಿ ಮಾಡಿ ತಾರ್ಕಿಕ ಅಂತ್ಯ ಹಾಡಲಾಗುವುದು” ಎಂದು ಹೇಳಿದರು.
ಇದೇ ವೇಳೆ, ಗೌರಿ ಲಂಕೇಶ್ ಹತ್ಯೆ ಪ್ರಕರಣ ಭೇದಿಸಿರುವ ಬಗ್ಗೆ ದೊರೆಸ್ವಾಮಿ ಅವರು ಪ್ರಶಂಸೆ ವ್ಯಕ್ತಪಡಿಸಿದರು.

‘ಮತೀಯ ಸಂಘಗಳು ಗೆಲ್ಲಬಾರದು’‌ ಎಂಬ ಶೀರ್ಷಿಯಡಿಯಲ್ಲಿ ರಾಜ್ಯಾದ್ಯಂತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಗ್ನೇಶ್ ಮೇವಾನಿ ಹಾಗೂ ಪ್ರಕಾಶ್ ರೈ ಮೇಲೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ದೂರು ದಾಖಲಾಗಿತ್ತು. ಈ ಪ್ರಕರಣಗಳನ್ನು ರದ್ದು ಮಾಡುವಂತೆ ದೊರೆಸ್ವಾಮಿ ನೇತೃತ್ವದ ನಿಯೋಗ ಮನವಿ ಮಾಡಿತ್ತು. ನಿಯೋಗದ ಮನವಿಯನ್ನು ಪರಿಶೀಲಿಸುವುದಾಗಿ ಪರಮೇಶ್ವರ್​ ತಿಳಿಸಿದರು.

ನಿಯೋಗದಲ್ಲಿ ಮಾಜಿ ಸಚಿವೆ ಲಲಿತ ನಾಯಕ್, ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್‌ ಅಮಿನ್ ಮಟ್ಟು ಇತರರು ಇದ್ದರು.