ರಾಹುಲ್ ದೋಣಿ ದಡ ಸೇರೀತೆ?

| ಮಹಾಬಲಮೂರ್ತಿ ಕೊಡ್ಲೆಕೆರೆ

ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ದಿನದಿಂದಲೂ ಅವರ ನಿರೀಕ್ಷೆಯಾದ 2019ರ ಲೋಕಸಭಾ ಚುನಾವಣೆಗೆ ಶನೈಶ್ಚರ ಕೆಲವು ಸುಗಮ ಹಾದಿಗಳನ್ನು ನಿರ್ವಿುಸಿಕೊಡುತ್ತಿದ್ದಾನೆಂಬುದು ಜಾತಕಕುಂಡಲಿಯಲ್ಲಿ ಸ್ಪಷ್ಟವಾಗುತ್ತಿದೆ.

ಅವರ ಜಾತಕ ಕುಂಡಲಿಯಲ್ಲಿ ಶನೈಶ್ಚರ ಬಲಿಷ್ಠನೇ ಎಂದು ತೂಗಿ ನೋಡುವುದಾದರೆ ಹುಟ್ಟಿದ ಸಂದರ್ಭದ ಶನೈಶ್ಚರ ಬಲಿಷ್ಠನೇ ಆಗಿದ್ದಾನೆ. ನೀಚ ಶನೈಶ್ಚರನೆಂದು ಗುರುತಿಸುವ ರೀತಿಯಲ್ಲಿದ್ದರೂ ಗುರುಗ್ರಹದ ದೃಷ್ಟಿಯು ಶನೈಶ್ಚರನನ್ನು ಸಂಪನ್ನತೆಯೊಂದಿಗೆ ಬೆಂಬಲಿಸಿ ಕುಸಿತದಿಂದ ಮೇಲೆಬ್ಬಿಸಿದೆ. ರಾಹುಲರಿಗೆ ಪ್ರಬುದ್ಧತೆಯನ್ನು ಕೊಡಲಾರದಂತೆ ಕುಳಿತಿರುವ ರಾಹುವನ್ನು ದೃಷ್ಟಿಸುವ ಗುರುದೃಷ್ಟಿಯು ವಿಷದ ಮೊನೆಯನ್ನು ಸಾಕಷ್ಟು ಕಡಿಮೆಗೊಳಿಸಿದೆ. ಯೋಗಕಾರಕ ಶುಕ್ರನು ಅವರ ಲಗ್ನಭಾವವನ್ನು (ವರ್ಚಸ್ಸು) ಪೂರ್ತಿಯಾಗಿ ಬೆಂಬಲಿಸಿದ್ದಾನೆ. ನೆಹರು ಹಾಗೂ ಗಾಂಧಿ ಮನೆತನವನ್ನು ಕಾಡಿಯೇ ತೀರುತ್ತೇನೆ ಎಂದು ಶಪಥ ಹೊತ್ತಂತೆ ವಿಷದ ಹೆಡೆ ಎತ್ತುವ ರಾಹುವೂ ಕೆಲವೇ ತಿಂಗಳುಗಳಲ್ಲಿ ಬಲಾಢ್ಯನಾಗಿ ನಿಲ್ಲುವ ಜಾಗೆಗೆ ತನ್ನ ಪರಿಭ್ರಮಣವನ್ನು ಪ್ರಾರಂಭಿಸಿದ್ದಾನೆ. ಪ್ರಪಾತಕ್ಕೇ ಬೀಳುವ ಸ್ಥಿತಿಯಲ್ಲಿದ್ದ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಮಿಂಚಿನ ವೇಗದಿಂದ ಕಾರ್ಯೋನ್ಮುಖವಾಗಿ ಬಿಜೆಪಿಯನ್ನು ಅಧಿಕಾರಕ್ಕೆ ಏರದಂತೆ ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿದೆ. ಧರ್ಮಸಿಂಗ್ ಹಾಗೂ ಯಡಿಯೂರಪ್ಪನವರ ಏದುಸಿರಿಗೆ ಕಾರಣವಾದ ಜಾತ್ಯತೀತ ಜನತಾದಳ ಪಕ್ಷ ಕಾಂಗ್ರೆಸ್ ಮುಟ್ಟಿ ದುರ್ಬಲವಾಗಿದೆ ಎಂದು ತಿಳಿದದ್ದು ತಪ್ಪು ಎಂಬುದನ್ನು ಮನನ ಮಾಡಿಕೊಳ್ಳುತ್ತಿದೆ.

ರಾಹುಲ್ ಹದಿನೈದು ನಿಮಿಷಗಳ ಕಾಲ ಚೀಟಿ ನೋಡದೆಯೇ ಭಾಷಣವೊಂದನ್ನು ಮಾಡಲಿ ಎಂದು ಸವಾಲು ಹಾಕಿದ್ದು ಪ್ರಧಾನಿ ಮೋದಿ. ಅವಿಶ್ವಾಸ ಗೊತ್ತುವಳಿಯ ದಿನ ರಾಹುಲ್ ಚೀಟಿ ನೋಡದೆ ಮೂವತ್ಮೂರು ನಿಮಿಷಗಳ ಕಾಲ ಮಾತನಾಡಿದರು. (ಅವಿಶ್ವಾಸ ಗೊತ್ತುವಳಿ ಸೋತು ಮೋದಿ ಗೆದ್ದರು ಎಂಬ ಮಾತು ಬೇರೆ.) ಸವಾಲು ಎಸೆದಿದ್ದ ನಿಮ್ಮ ಔದಾರ್ಯಕ್ಕೆ ಕೃತಜ್ಞತೆ ಎಂಬಂತೆ ರಾಹುಲ್ ಮೋದಿಯವರನ್ನು ಆಲಂಗಿಸಿಕೊಂಡರು. ಈ ಅಪ್ಪುಗೆಯಲ್ಲಿ ಕುತಂತ್ರವೇನೂ ಇಲ್ಲ ಎಂಬುದನ್ನು ರಾಹುಲ್ ಸಮರ್ಥಿಸಿಕೊಳ್ಳಬಹುದಿತ್ತು. ಆದರೆ ಸಾಡೇಸಾತಿ ಶನಿಕಾಟದಿಂದಾಗಿ ಅಣಕಿಸಿದ್ದಾರೆ ಎಂಬರ್ಥ ಬರುವ ಹಾಗೆ ಕಣ್ಣು ಮಿಟುಕಿಸಿಯಾಗಿತ್ತು. ‘ರಾಹುಲ್, ನೀನು ಗಂಭೀರವಾಗಿರಬೇಕು, ನಿನ್ನನ್ನು ದಡ ತಲುಪಿಸುತ್ತೇನೆ’ ಎಂದು ಶನೈಶ್ಚರ ತನ್ನ ಕಾಟದ ಸಂದರ್ಭದಲ್ಲಿ ಅಂತಿಮ ಎಚ್ಚರ ಕೊಟ್ಟಂತೆ ಸನ್ನಿವೇಶವಿತ್ತು. ರಾಹುಲ್​ಗೆ ಈ ಎಚ್ಚರಿಕೆ ಸರಿಯಾಗಿ ಮನನವಾಗಿದೆ ಎಂಬ ಸೂಚನೆ ಮರುದಿನದ ನಡವಳಿಕೆಯಲ್ಲಿತ್ತು. ಹಾಗಾದರೆ ಶನೈಶ್ಚರ ದಡ ತಲುಪಿಸುವನೆ?

ಶನಿಕಾಟದ ಕೊನೆಯ ದಿನಗಳು ವರವಾಗಬಲ್ಲವೆ?

ಪ್ರಧಾನಿ ಮೋದಿಯವರಿಗೂ ಸಾಡೇಸಾತಿ ಶನಿಕಾಟದ ಕೊನೆಯ ದಿನಗಳು ಶುರುವಾಗಿವೆ. ರಾಹುಲ್ ಪಾಲಿಗೂ ಶುರುವಾಗಿದೆ. ರಾಹುಲ್ ವರ್ಚಸ್ಸನ್ನು ಸ್ವತಃ ಅವರ ಲಗ್ನಭಾವದ ಯಜಮಾನ ಶನೈಶ್ಚರನೇ ಕಟ್ಟಿಕೊಡಬೇಕಾಗಿದೆ. ಪೂರ್ವಪುಣ್ಯ ಸ್ಥಾನದಲ್ಲಿ ಕುಳಿತ ಭಾಗ್ಯಾಧಿಪತಿ ಬುಧನು ನೀಚ ಚಂದ್ರನನ್ನು ನಿಯಂತ್ರಿಸಿದ್ದಾನೆ. ಯೋಗಕಾರಕ ಶುಕ್ರನು ಚಂದ್ರನ ಮನೆಯಲ್ಲಿ ಕುಳಿತು ರಾಹುಲ್ ವರ್ಚಸ್ಸನ್ನು ನಿಯಂತ್ರಿಸುವ, ಪರಿಣಾಮಕಾರಿ ದಿಕ್ಕಿಗೆ ಹೊರಳಿಸುವ ಶಕ್ತಿ ಪಡೆದಿದ್ದಾನೆ. ಮೋದಿಯವರ ತಪ್ಪುಗಳು ರಾಹುಲರಿಗೆ ಅನುಕೂಲಕರವಾಗಿರುತ್ತದೆಯೇ ವಿನಾ, ರಾಹುಲರ ತಪ್ಪುಗಳು ಮೋದಿಯವರಿಗೆ ಅನುಕೂಲವಾಗುವ ಸ್ಥಿತಿಯಲ್ಲಿಲ್ಲ. ರಾಹುಲ್ ಜಾತಕದಲ್ಲಿ ಗುರುವಿನ ಕಾರಣದಿಂದಾಗಿ ಶುಕ್ರ, ಬುಧ, ಕುಜ, ಸೂರ್ಯರು, ಶಕ್ತಿಸಂಚಯನ ಪಡೆದುಕೊಂಡಿರುವುದರಿಂದ ರಾಹುಲರಿಗೆ 2019ರ ಚುನಾವಣೆ ಬಹಳ ಮುಖ್ಯವಾದುದಾಗಿದೆ.

ನಿಧಾನಗತಿಯ ಶನೈಶ್ಚರ ಯಾವಾಗಲೋ ಸಿಗಬೇಕಾಗಿದ್ದ ಪ್ರಧಾನಿ ಪಟ್ಟವನ್ನು ವಂಚಿಸುತ್ತಲೇ ಬಂದಿದ್ದರೂ ನರೇಂದ್ರ ಮೋದಿಯವರ ವಿಷಯದಲ್ಲಿ ರಾಹುಲ್ ಗಾಂಧಿಯವರ ಬಗೆಗಿರುವ ಹಾರ್ದಿಕತೆಯನ್ನು ತುಸು ಹೆಚ್ಚೇ ಎನ್ನುವಂತೆ ಸಂಪಾದಿಸಿಕೊಂಡಿದ್ದಾನೆ. ಮೋದಿಯವರ ಜಾತಕದಲ್ಲಿ ಚಂದ್ರನೂ ಇದೇ ಪ್ರಮಾಣದ ಹಾರ್ದಿಕತೆಯನ್ನು ತುಂಬಿಕೊಂಡು ಕುಜನ ಮೂಲಕವಾಗಿ ಇನ್ನೂ ಒಂದು ಅವಧಿಯ ಪ್ರಧಾನಿ ಪಟ್ಟ ಒದಗಿಸಲು ಸನ್ನದ್ಧನಾಗುತ್ತಿದ್ದಾನೆ. ಹೀಗೆ ಹೇಳಿದರೆ ರಾಹುಲ್ ಪ್ರಧಾನಿಯಾಗುವರೋ ಇಲ್ಲವೋ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದಂತಾಗುವುದಿಲ್ಲ. ಹಾಗಾದರೆ ಸ್ಪಷ್ಟವಾದುದು ಏನು? ಮೋದಿಯವರನ್ನು ಮಾತಿನಲ್ಲಿ ಮೀರಿಸುವ ಶಕ್ತಿಯನ್ನು ರಾಹುಲ್ ರೂಪಿಸಿಕೊಳ್ಳಬೇಕು. ಮಾನಸಿಕವಾಗಿ ಬಲಿಷ್ಠರಾಗಬೇಕು. ಸಾಧ್ಯವೆ?

ಶನೈಶ್ಚರನ ಸಿದ್ಧಿಯಿಂದಲೇ ರಾಹುಲ್ ಮಾತುಗಾರರಾಗಲು ಸಾಧ್ಯ

ಅನುಭವದ್ರವ್ಯವನ್ನು ದಿವ್ಯವಾಗಿಸುವ ಶಕ್ತಿ ಶನೈಶ್ಚರನಿಂದಲೇ ಸಿದ್ಧಿಸಬೇಕು. ‘ಕುಶಲಾ’ ಎಂಬುದಾಗಿ ಶ್ರೀಲಲಿತಾ ಅಷ್ಟೋತ್ತರ ಅಥವಾ ಸಹಸ್ರನಾಮಗಳಲ್ಲಿ ದೇವಿಯನ್ನು ವರ್ಣಿಸುವ ವಿಶೇಷ ಶಬ್ದ ಬರುತ್ತದೆ. ‘ಕುಶಲಾ’ ಆಗಿರುವ ದೇವಿಯು ರಾಹುಲ್ ಪಾಲಿಗೆ ಈ ಕೌಶಲವನ್ನು ಅನುಗ್ರಹಿಸಲು ಈಗ ಕಾಲ ಸೂಕ್ತವಾಗಿದೆ. ಶುಕ್ರನಿಂದಲೂ (ಶುಕ್ರನು ದೇವಿಯನ್ನು ಸಂಕೇತಿಸುತ್ತಾನೆ.), ಶನೈಶ್ಚರನಿಂದಲೂ ವರ್ಚಸ್ಸು ವರ್ಧಿಸಲು ಈಗ ಕಾಲ ಕೂಡಿಬಂದಿದೆ. ಶ್ರೀಲಲಿತಾ ದೇವಿಯ ಆರಾಧನೆಯಿಂದಲೇ ಹಿಂದಿನ ಶತಮಾನದ 50ರ ದಶಕದ ಕೊನೆಯ ಭಾಗದಲ್ಲಿ ರಾಹುಲರ ಅಜ್ಜಿ ಇಂದಿರಾ ಜ್ಞಾನಸಂವರ್ಧನೆಗೆ ತೆರೆದುಕೊಂಡರು. ಈಗ ಶನೈಶ್ಚರ ರಾಹುಲರ ಪ್ರಾರಬ್ಧಗಳನ್ನು ಕಳೆದಿದ್ದಾನೆ. ವಾಕ್​ಸ್ಥಾನದ ಅಧಿಪತಿಯಾಗಿ ಮಾತನ್ನು ಬಂಗಾರವಾಗಿಸಿಕೊಳ್ಳಲು ಮುಂದಾಗಬೇಕು.

ಈಗ ಚಂದ್ರದಶಾದಲ್ಲಿ ಶನಿಭುಕ್ತಿಯು ನಡೆಯುತ್ತಿದ್ದು ಫೆಬ್ರವರಿ 2019ರ ಕೊನೆಯ ದಿನವೇ ಬುಧಭುಕ್ತಿಗೆ ಅವಕಾಶ ಒದಗಿಬರುತ್ತದೆ. ನಿಧಾನವಾದರೂ ಶನೈಶ್ಚರ ರಾಹುಲರನ್ನು ಪಕ್ವಗೊಳಿಸುತ್ತಿದ್ದಾನೆ. ಬುದ್ಧಿಬಲ ಹಾಗೂ ಲಾಭ ಒದಗಿಸಬೇಕಾದ ಬುಧಗ್ರಹದ ಉಪದಶಾಕಾಲ, ಚಂದ್ರದಶಾದ ಗರ್ಭದಿಂದ ಮಹತ್ತರ ಲಾಭವನ್ನು ಪಡೆಯಲು ನೆರವಾಗುವ ವಿಧಿಯ ಸಂಯೋಜನೆಯನ್ನು ರಾಹುಲ್ ಉಪಯೊಗಿಸಿಕೊಳ್ಳಬೇಕಾಗಿದೆ. ಕುಟುಂಬದಲ್ಲಿ ಸಂಭವಿಸಿದ ಮೂರು ದುರಂತಗಳನ್ನು ಕಂಡ ರಾಹುಲ್ ರಾಹು-ಕೇತುಗಳಿಂದಾಗಿ ನಾನಾ ರೀತಿಯ ಅಗ್ನಿದಿವ್ಯಗಳನ್ನು ಎದುರಿಸಿದ್ದಾರೆ. ನಿಂದನೆ, ಅಪವಾದ, ಅನುಮಾನ, ಜ್ಞಾನಾರ್ಜನೆಗೆ ಅವಕಾಶಗಳ ಕೊರತೆ ಇತ್ಯಾದಿಗಳಿಂದಾಗಿ ರಣಾಂಗಣಕ್ಕೆ ಬೆನ್ನು ತೋರಿಸಿ ಹೋಗುವಂತೆ ಕಂಡಿದ್ದ ರಾಹುಲರನ್ನು ಈಗ ಶನೈಶ್ಚರ ಮತ್ತೆ ನೇರ ನಿಲ್ಲಿಸಿದ್ದಾನೆ. ಬುಧನ ಸುಪರ್ದಿಗೂ ಕೊಡಲು ಮುಂದಾಗುತ್ತಿರುವ ಶನೈಶ್ಚರನು ಬುಧನ ಮೂಲಕ ಚಂದ್ರನ ನಿಯಂತ್ರಣವನ್ನು ಗ್ರಹಿಸಿದ್ದಾನೆ.

ಮೋದಿ ಹಾದಿ ದುರ್ಗಮವಾಗಿದೆಯೇ?

ರಾಹುಲರನ್ನು ಗೆಲ್ಲಿಸಬೇಕಾದ ಶನೈಶ್ಚರನಿಗೆ ಚಂದ್ರನ ಕರುಣೆಯಿಂದ, ಮಿಕ್ಕಿ ಕುಜನ ಬಲದಿಂದ ದೊಡ್ಡ ಶಕ್ತಿಯಾಗಿರುವ ಮೋದಿಯವರನ್ನು ಬಗ್ಗು ಬಡಿಯುವುದು ಸುಲಭದ ಸಂಗತಿಯಲ್ಲ. ಆದರೂ ಮೋದಿಯವರ ದೌರ್ಬಲ್ಯಗಳನ್ನು ಅವರ ವಿರುದ್ಧದ ಕಂದಕವನ್ನಾಗಿಸುವ ಶಕ್ತಿ ಇದ್ದೇ ಇದೆ. ಚಂದ್ರನಿಗೆ ಒದಗಿಬರುತ್ತಿರುವ ಕೇತುಗ್ರಸ್ತ ಗ್ರಹಣವು ಮೋದಿಯವರಿಗೆ ನೇರವಾಗಿ ಸಂಬಂಧಿಸಿಲ್ಲ. ಆರದಿದ್ದರೂ ಸದ್ಯ ಗೋಚಾರದಲ್ಲಿ ತನ್ನ ಯಜಮಾನತ್ವದಲ್ಲಿರುವ ಕೇತುವನ್ನು ಮೋದಿಯವರ ವಿರುದ್ಧ ತಿರುಗಿಸಲು ಶನೈಶ್ಚರನು ದಾಳಗಳನ್ನು ಸಿದ್ಧಪಡಿಸಿಕೊಂಡಿದ್ದಾನೆ. ಮೋದಿಯವರ ವಾಕ್​ಸ್ಥಾನವನ್ನು ಕೆಲವೇ ದಿನಗಳಲ್ಲಿ ಪ್ರವೇಶಿಸಲಿರುವ ಕೇತುವು ಅವರ ಮಾತಿನ ಮೊನಚನ್ನು ದುರ್ಬಲಗೊಳಿಸಲು ಸಜ್ಜುಗೊಳ್ಳುತ್ತಾನೆ. ಕರ್ನಾಟಕದಲ್ಲಿ ಮೋದಿ ಯಶಸ್ವಿಯಾಗದೆ ಹೋದದ್ದು ಶನೈಶ್ಚರ ಹಾಗೂ ಕೇತುಗ್ರಹಗಳ ಕಿತಾಪತಿಯಿಂದಲೇ. ಮೋದಿ, ಅಮಿತ್ ಶಾಗೆ ಕರ್ನಾಟಕದಲ್ಲಿ ರಣತಂತ್ರ ರೂಪಿಸುವಲ್ಲಿ ಅಡ್ಡಗಾಲಿರಿಸಿದವನೇ ಶನೈಶ್ಚರ. ಶನೈಶ್ಚರನ ಸಿದ್ಧಿಯಿಂದಲೇ ಅಹಿಂದ ಮತಗಳ ಸುಪರ್ದಿ ದೊರಕಬೇಕು. ಮೋದಿ ಶನೈಶ್ಚರನ ಕೃಪೆಗಾಗಿ ಬೇರೆ ರೀತಿಯ ದಾಳಗಳನ್ನು ಪ್ರಯೋಗಿಸಬೇಕಾಗಿದೆ. ಈ ನಾಲ್ಕೂಕಾಲು ವರ್ಷಗಳಲ್ಲಿ ತನ್ನ ಸಾಧನೆಗಳೇನು ಎಂಬುದನ್ನು ವಿವರಿಸಲು ಕೇತು (ಗಣಪತಿಯ, ಶಿವನ ಆರಾಧನೆ ಮುಖ್ಯ) ಮತ್ತು ಶನೈಶ್ಚರಗ್ರಹ ಅವರನ್ನು ವಿಫಲಗೊಳಿಸುತ್ತಿವೆ.

ಆಯಾ ರಾಜ್ಯಗಳಲ್ಲಿ ಮೋದಿ ಅನೇಕ ಪರಿಣಾಮಕಾರಿ (ಉದಾ: ಕರ್ನಾಟಕದಲ್ಲಿ ಯಡಿಯೂರಪ್ಪ) ಶಕ್ತಿಗಳನ್ನು ಗುರುತಿಸಲು ಸಾಧ್ಯವಾದರೆ ಅವರ ಮೇಲಿನ ಹೊರೆ ನೀಗುತ್ತದೆ. ರಾಹುಲ್ ಹೊರೆ ಹೊರಲು ಸಜ್ಜಾಗಬೇಕು. ಸಜ್ಜಾಗುವುದಕ್ಕೂ ಸಾಧ್ಯವಿದೆ.

ಶಶಿ ತರೂರನ್ನು ತರಾಟೆಗೆ ತೆಗೆದುಕೊಂಡ ಕ್ರಮ, ಕರ್ನಾಟಕದಲ್ಲಿ ಕಾಂಗ್ರೆಸ್ ಹಿಡಿತದಲ್ಲಿ ಜೆಡಿಎಸ್ ಸಿಕ್ಕಿರುವ ಬಗೆಯಿಂದ ಕಾಂಗ್ರೆಸ್ ಶಕ್ತಿ ಇನ್ನೂ ಕುಂದಿಲ್ಲ ಎಂಬುದನ್ನು ತೋರಿಸುತ್ತದೆ. ಹೀಗಾಗಿ ಮೋದಿಯವರಿಗೆ 2019ರಲ್ಲಿ ರಾಹುಲ್ ಪ್ರಬಲ ಪ್ರತಿಸ್ಪರ್ಧಿ ಆಗಲಿದ್ದಾರೆ.