Friday, 16th November 2018  

Vijayavani

Breaking News

ಸಂಕಲ್ಪಸಿದ್ಧಿಯ ಸಿದ್ಧಪರ್ವತ

Thursday, 05.07.2018, 3:03 AM       No Comments

| ಪ್ರಶಾಂತ ರಿಪ್ಪನ್​ಪೇಟೆ

ಸಂತರು, ಮಹಾಂತರು, ಯೋಗಿಗಳು ಆತ್ಮಸಾಧನೆಯ ಜೊತೆಗೆ ಲೋಕಕಲ್ಯಾಣವನ್ನೂ ಬಯಸುತ್ತಾರೆ. ತಮ್ಮ ಅನುಷ್ಠಾನಶಕ್ತಿಯಿಂದ ಜನರ ಸಂಕಷ್ಟಗಳನ್ನು ನೀಗಿಸಿ ದೈವತ್ವವನ್ನು ಪಡೆಯುತ್ತಾರೆ. ಅಂತಹ ಅಪರೂಪದ ಅವಧೂತ ಕ್ಷೇತ್ರ ಬಗಳಾಮುಖಿ ಸಿದ್ಧಪರ್ವತ.

ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಸಿದ್ಧಪರ್ವತದಲ್ಲಿರುವ ಈ ಕ್ಷೇತ್ರವು ಅಂಬಾಮಠ ಎಂದೇ ಪ್ರಸಿದ್ಧ. ಸಂಕಲ್ಪ ಸಿದ್ಧಿಕ್ಷೇತ್ರ ಎಂದೂ ಕರೆಯುತ್ತಾರೆ. ಚಿದಾನಂದ ಅವಧೂತರ ತಪಸ್ಸಿಗೆ ಮೆಚ್ಚಿದ ಜಗನ್ಮಾತೆ ಪ್ರತ್ಯಕ್ಷಳಾಗಿ, ‘ಏನು ವರ ಬೇಕು?’ ಎಂದು ಕೇಳಿದಳು. ಲೌಕಿಕ ಬದುಕಿನ ಸಂಬಂಧವನ್ನು ಅಂಟಿಸಿಕೊಂಡಿರದ ಅವಧೂತರು, ‘ನೀನು ಪ್ರತ್ಯಕ್ಷಳಾದ ಈ ಸ್ಥಳ ಸಿದ್ಧಿಕ್ಷೇತ್ರವಾಗಿ, ಭಕ್ತರ ಸತ್ಸಂಕಲ್ಪ ಈಡೇರುವಂತೆ ಮಾಡು’ ಎಂದು ಲೋಕಕಲ್ಯಾಣದ ಬೇಡಿಕೆಯಿಟ್ಟರು. ಅದಕ್ಕೆ ಮಹಾಮಾತೆಯು ಅಸ್ತು ಎಂದು ಅಭಯವಿತ್ತ ಕಾರಣಕ್ಕಾಗಿ ಈ ಸ್ಥಳವು ಸಿದ್ಧಪರ್ವತ ಎಂದು ಪ್ರಸಿದ್ಧವಾಗಿದೆ.

ಮೂಲದಲ್ಲಿ ಗುಡ್ಡಗಾಡಾಗಿದ್ದ ಸೋಮಲಾಪುರ ಸಮೀಪದ ಗವಿಯೊಳಗೆ ಅವಧೂತರು ಸುದೀರ್ಘ ಕಾಲ ತಪಸ್ಸು ಮಾಡಿ ದೇವಿಯ ಸಾಕ್ಷಾತ್ಕಾರ ಪಡೆದರು. ಈ ಕ್ಷೇತ್ರದಲ್ಲಿ ಪೂಜೆಗೊಳ್ಳುತ್ತಿರುವ ದೇವಿಯ ವಿಗ್ರಹವು ಉದ್ಭವಮೂರ್ತಿ ಎನ್ನಲಾಗುತ್ತದೆ. ದೇವಿಯ ಮುಂಭಾಗದಲ್ಲಿ ಸ್ವತಃ ಚಿದಾನಂದ ಅವಧೂತರು ಸ್ಥಾಪಿಸಿರುವ ಶ್ರೀ ಬಗಳಾಮುಖಿ ಚಕ್ರವಿದ್ದು, ಈ ಕಾರಣದಿಂದಲೇ ಬಗಳಾಮುಖಿದೇವಿ ಎಂಬ ಹೆಸರು ಬಂದಿದೆ. ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಗಳಂದು ಸಹಸ್ರಾರು ಭಕ್ತರು ದೇವಿಯ ದರ್ಶನ ಮಾಡುತ್ತಾರೆ. ಪ್ರತಿ ಮಂಗಳವಾರ ಮತ್ತು ಶುಕ್ತವಾರದಂದು ವಿಶೇಷ ಪೂಜೆ ಜರುಗುತ್ತದೆ. ವರ್ಷಕ್ಕೊಮ್ಮೆ ಬನದ ಹುಣ್ಣಿಮೆಯಂದು ವಾರ್ಷಿಕ ಜಾತ್ರೆ ಹಾಗೂ ಶರನ್ನವರಾತ್ರಿಯ ಅವಧಿಯಲ್ಲಿ ದೇವಿಯ ವಿಶೇಷ ಉತ್ಸವ ನಡೆಯುತ್ತದೆ.

ಅದ್ವೆ ೖತ ಶಿಖರ ಚಿದಾನಂದ ಅವಧೂತರು

ಸಂತ ಪರಂಪರೆಯಲ್ಲಿ ಅವಧೂತರಿಗೆ ವಿಶೇಷ ಸ್ಥಾನವಿದೆ. ಕರ್ನಾಟಕದ ಅವಧೂತ ಪರಂಪರೆಯಲ್ಲಿ ಪ್ರಮುಖವಾಗಿ ಗುರುತಿಸಬಹುದಾದ ಹೆಸರು ಚಿದಾನಂದ ಅವಧೂತರದು. ಸುಮಾರು 18ನೇ ಶತಮಾನದಲ್ಲಿ ಜೀವಿಸಿದ್ದ ಚಿದಾನಂದ ಅವಧೂತರು ಹುಟ್ಟಿದ್ದು ನೆರೆಯ ಆಂಧ್ರಪ್ರದೇಶದ ಆದೋನಿ ಜಿಲ್ಲೆಯ ಹಿರೇಹರಿವಾಣ ಎಂಬ ಗ್ರಾಮದಲ್ಲಿ. ಬಡಕುಟುಂಬದಲ್ಲಿ ಹುಟ್ಟಿದ್ದ ಅವಧೂತರ ಮೊದಲ ಹೆಸರು ಝುಂಕಪ್ಪ. ಬಾಲ್ಯದಲ್ಲಿಯೇ ಅಧ್ಯಾತ್ಮದ ಒಲವು ಹೊಂದಿದ್ದ ಅವಧೂತರು ಹಲವು ಕಡೆಗಳಲ್ಲಿ ಧ್ಯಾನ, ಯೋಗ, ತಪಸ್ಸು ಗೈದ ಕುರುಹುಗಳಿವೆ. ಅವುಗಳಲ್ಲಿ 12 ವರ್ಷ ತಪಸ್ಸು ಮಾಡಿದ ಸ್ಥಳ – ಈಗ ಅಂಬಾಮಠ ಎಂದೇ ಪ್ರಸಿದ್ಧವಾಗಿರುವ ಸಿದ್ಧಪರ್ವತ ಮುಖ್ಯವಾದುದು.

ಸಮಾಜದಲ್ಲಿ ಧರ್ಮಗ್ಲಾನಿಯಾಗುತ್ತಿದ್ದಾಗ ಜ್ಞಾನ, ತಪಸ್ಸು ಮತ್ತು ಕ್ರಿಯಾಶಕ್ತಿಯಿಂದ ಹೊಸ ನಿರೀಕ್ಷೆಯನ್ನು ಮೂಡಿಸಿ ಮಾರ್ಗದರ್ಶನ ಮಾಡಿದರು. 18ನೇ ಶತಮಾನದಲ್ಲಿ ಒಂದೆಡೆ ಪರಕೀಯರ ಪ್ರಾಬಲ್ಯ, ಇನ್ನೊಂದೆಡೆ ಬ್ರಿಟಿಷರ ಆಡಳಿತ – ಇಂತಹ ಪರಿಸ್ಥಿತಿಯಲ್ಲಿ ನಮ್ಮ ಧರ್ಮಕ್ಕೆ ಬೀಳುತ್ತಿದ್ದ ಪೆಟ್ಟನ್ನು ನಿವಾರಿಸಲು ಚಿದಾನಂದ ಅವಧೂತರು ಸೂಕ್ತ ಮಾರ್ಗದರ್ಶನ ಮಾಡಿದರು. ಜಗದ್ಗುರು ಶ್ರೀ ಆದಿಶಂಕರಾಚಾರ್ಯರು ಪ್ರತಿಪಾದಿಸಿದಂತಹ ಅದ್ವೆ ೖತ ತತ್ತ ್ವನ್ನು ಕನ್ನಡದಲ್ಲಿ ನೀಡಿದವರು ಅವಧೂತರು. ಆ ಮೇರು ಕೃತಿ ‘ಜ್ಞಾನಸಿಂಧು’. ಕನಕಗಿರಿಯಲ್ಲಿ ಚಿದಾನಂದ ಅವಧೂತರ ಸಮಾಧಿಯನ್ನು ನೋಡಬಹುದು.

ದೇವಿಮಹಾತ್ಮೆಯ ರಚನೆ

ಉತ್ತರ ಕರ್ನಾಟಕದಲ್ಲಿ ಜಾತಿ, ಮತವೆನ್ನದೆ ಸರ್ವ ಜನಾಂಗದವರ ಮನೆಯಲ್ಲಿ ಪೂಜಿಸಲ್ಪಡುವ ಧಾರ್ವಿುಕ ಕೃತಿ ದೇವಿಮಹಾತ್ಮೆ. ಈ ಮೌಲಿಕ ಕೃತಿಯ ರಚನೆಯಾಗಿದ್ದು ಇದೇ ಸಿದ್ಧಪರ್ವತದಲ್ಲಿ. ದೇವಿಯ ಸಾಕ್ಷಾತ್ಕಾರ ಪಡೆದ ಚಿದಾನಂದ ಅವಧೂತರಿಗೆ ಬಗಳಾಮುಖಿ ಬೀಜಮಂತ್ರದ ಉಪದೇಶವಾಯಿತು. ಆ ನಂತರ ಪ್ರೇರಣೆಗೊಂಡ ಅವಧೂತರು ದೇವಿಮಹಾತ್ಮೆಯನ್ನು ರಚಿಸಿದರು. ಬಾಲ್ಯದಲ್ಲಿ ಹೊನ್ನಪ್ಪ ಎಂಬ ಗುರುವಿನಿಂದ ವಿದ್ಯೆ ಕಲಿತ ಅವಧೂತರು ಗುರುಗಳ ಮಾರ್ಗದರ್ಶನದಲ್ಲೇ ಅಧ್ಯಾತ್ಮದ ಹಾದಿಯಲ್ಲಿ ಮುಂದುವರಿದರು. ದುರ್ಗಾಸಪ್ತಶತಿಯನ್ನು ದೇವಿ ಮಹಾತ್ಮೆ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ರಚಿಸಿದ್ದಾರೆ.

ಹುಕ್ಕೇರಿ ಹಿರೇಮಠದ ಲಿಂ. ಶ್ರೀ ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳು ದೇವಿಯ ಆರಾಧಕರಾಗಿದ್ದರು. ಅವರ ಕರಕಮಲ ಸಂಜಾತರಾದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ದೇವಿಮಹಾತ್ಮೆ ಪುಸ್ತಕದ ಜತೆಗೆ ಪಾರಾಯಣದ ಕ್ರಮ ತಿಳಿಯುವಂತೆ ಧ್ವನಿಮುದ್ರಿಕೆ ಮೂಲಕ ಪ್ರಕಟಿಸಿದ್ದಾರೆ. ಕೆಲವು ಅನುಭಾವಿಗಳ ಪ್ರಕಾರ; 41 ದಿನಗಳ ಕಾಲ ನಿಯಮಬದ್ಧವಾಗಿ ವ್ರತವನ್ನಾಚರಿಸಿ ದೇವಿಮಹಾತ್ಮೆಯನ್ನು ಪಾರಾಯಣ ಮಾಡಿದರೆ ದೇವಿಯ ಸಾಕ್ಷಾತ್ಕಾರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಕಡ್ಡಾಯವಾಗಿ ದೇವಿ ಮಹಾತ್ಮೆ ಪಾರಾಯಣ ಮಾಡುತ್ತಾರೆ.

(ಪ್ರತಿಕ್ರಿಯಿಸಿ: [email protected], [email protected])

Leave a Reply

Your email address will not be published. Required fields are marked *

Back To Top