More

    ನಿರ್ಗತಿಕರ ಕೆಲಸಕ್ಕೆ ಹಣ ಪಡೆಯುವುದು ಗೊತ್ತಾದರೆ ಅಂತಹ ಭ್ರಷ್ಟರನ್ನು ಸುಮ್ಮನೆ ಬಿಡಲ್ಲ

    ಕೋಲಾರ: ಕಾನೂನು ಬಿಟ್ಟು ಕೆಲಸ ಮಾಡಿ ಅಂತ ನಾನು ಯಾವುದೇ ಅಧಿಕಾರಿಗೆ ತಾಕೀತು ಮಾಡಲ್ಲ. ಆದರೆ ಬಡವರು, ನಿರ್ಗತಿಕರ ಕೆಲಸಕ್ಕೆ ಹಣ ಪಡೆಯುವುದು ಗೊತ್ತಾದರೆ ಅಂತಹ ಭ್ರಷ್ಟರನ್ನು ಸುಮ್ಮನೆ ಬಿಡಲ್ಲ ಎಂದು ಸಂಸದ ಎಸ್.ಮುನಿಸ್ವಾಮಿ ಎಚ್ಚರಿಕೆ ನೀಡಿದರು.

    ಜಿಪಂ ಸಭಾಂಗಣದಲ್ಲಿ ಶನಿವಾರ ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾ ಜಾಗೃತ ಸಮಿತಿ ಸಭೆಯಲ್ಲಿ ಮಾತನಾಡಿ, ಹಿಂದೆ ಆಗಿರುವ ತಪ್ಪು ಮರೆತು ಜಿಲ್ಲೆಯ ಅಭಿವೃದ್ಧಿಗೆ ನನ್ಮೊಂದಿಗೆ ಕೈಜೋಡಿಸಿ, ನಾನು ನಿಮ್ಮಿಂದ ಕಮಿಷನ್ ಅಪೇಕ್ಷೆ ಮಾಡಲ್ಲ, ಕೇಂದ್ರ ಸರ್ಕಾರದಿಂದ ಬರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.

    ತಮ್ಮ ಕೆಲಸಕ್ಕಾಗಿ ಕಚೇರಿಗಳಿಗೆ ಬರುವವರನ್ನು ಸತಾಯಿಸುವ ಪ್ರವೃತ್ತಿ ಬಿಡಿ, ಇ-ಸ್ವತ್ತುಗಾಗಿ ಅರ್ಜಿ ಹಾಕುವ ಜನರಿಗೆ ಕಾಲಮಿತಿಯಲ್ಲಿ ದಾಖಲೆ ನೀಡಿ, ಬಡವರಿಗೊಂದು, ಶ್ರೀಮಂತರಿಗೊಂದು ನ್ಯಾಯ ಬೇಡ, ಅದೇ ರೀತಿ ಜಮೀನುಗಳ ಸರ್ವೇ ವಿಚಾರವಾಗಿ ಸರ್ವೇಯರ್‌ಗಳು ಮತ್ತು ಪಿಡಿಒಗಳ ವಿರುದ್ಧ ಶೋಷಣೆಗೊಳಗಾದ ಬಡವರು ದೂರು ನೀಡಿದಲ್ಲಿ ಅಂತಹವರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕೆಂದು ಡಿಸಿಗೆ ಸೂಚಿಸಿದರು.

     

    ಅಮಾನತು ಎಚ್ಚರಿಕೆ:
    ಹಿರಿಯ ನಾಗರಿಕರಿಗೆ ನೀಡುವ ಪಿಂಚಣಿ ಹಣವನ್ನು ಕೆಲ ಬ್ಯಾಂಕ್‌ಗಳು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿರುವ ಬಗ್ಗೆ ದೂರು ಕೇಳಿ ಬಂದಿದ್ದು, ಒಂದು ವೇಳೆ ಇದು ನಿಜವೇ ಆಗಿದ್ದರೆ ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳನ್ನು ಅಮಾನತು ಮಾಡಿಸುವೆ ಎಂದು ಲೀಡ್ ಬ್ಯಾಂಕಿನ ಅಧಿಕಾರಿಗೆ ಸಂಸದರು ಎಚ್ಚರಿಕೆ ನೀಡಿದರು.

    ಅಂಚೆ ಮೂಲಕ ಪಿಂಚಣಿ ಪಡೆಯುವ ಬಡವರಿಂದ ಕೆಲವು ಪೋಸ್ಟ್ ಮ್ಯಾನ್‌ಗಳು 40ರಿಂದ50 ರೂ. ವಸೂಲಿ ಮಾಡುತ್ತಿದ್ದಾರೆನ್ನಲಾಗಿದ್ದು, ಈ ಪದ್ಧತಿ ತಪ್ಪಿಸಲು ಮುಂದಿನ ತಿಂಗಳಲ್ಲಿ ಎಲ್ಲ ಪೋಸ್ಟ್ ಮ್ಯಾನ್‌ಗಳ ಸಭೆ ಕರೆಯುವಂತೆ ಅಂಚೆ ಇಲಾಖೆಯ ಅಧಿಕಾರಿಗೆ ಸೂಚಿಸಿದರು.
    ಇನ್ನು ಮುಂದೆ ಆಯುಷ್ಮಾನ್ ಭಾರತ್ ಯೋಜನೆ ಅನ್ವಯ ಯಾರು ನಿಜವಾದ ಫಲಾನುಭವಿಗಳಿದ್ದಾರೋ ಅಂತಹವರನ್ನು ಮಾತ್ರ ಸರ್ಕಾರ ಪ್ರಾಯೋಜಿತ ಕಾರ್ಯಕ್ರಮಗಳಿಗೆ ಕರೆತರಬೇಕು. ಸರ್ಕಾರಕ್ಕೆ ಲೆಕ್ಕ ನೀಡಲು ಹಳ್ಳಿಯಿಂದ ಮುಗ್ಧ ಹೆಣ್ಣು ಮಕ್ಕಳನ್ನು ಕರೆತಂದರೆ ಸುಮ್ಮನಿರಲ್ಲ ಎಂದು ಪ್ರಭಾರ ಡಿಎಚ್‌ಒ ಡಾ.ನಾರಾಯಣಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.

    ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಮಾತನಾಡಿ, ಗ್ರಾಮ ಠಾಣೆ ವ್ಯಾಪ್ತಿಯ ಆಸ್ತಿಯನ್ನು ಇ-ಸ್ವತ್ತು ಮಾಡಲು ಆಂದೋಲನ ಹಮ್ಮಿಕೊಳ್ಳುವಂತೆ ಸಂಸದರನ್ನು ಕೋರಿದರು.

    ಕೇಂದ್ರ ಸರ್ಕಾರ ಪುರಸ್ಕೃತ ವಸತಿ, ರಸ್ತೆ, ಗ್ರಾಮೀಣ ಕುಡಿಯುವ ನೀರು ಇನ್ನಿತರ ವಿಷಯಗಳ ಪರಿಶೀಲನೆ ನಡೆಯಿತು. ಡಿಸಿ ಜೆ.ಮಂಜುನಾಥ್ ಅವರು ವಿವಿಧ ಇಲಾಖೆಗಳಿಂದ ಆಗಿರುವ ಪ್ರಗತಿ ಕುರಿತು ಮಾಹಿತಿ ನೀಡಿದರು.
    ಜಿಪಂ ಉಪಾಧ್ಯಕ್ಷೆ ಯಶೋಧಮ್ಮ, ಜಿಲ್ಲಾ ಜಾಗೃತ ಸಮಿತಿ ಸದಸ್ಯರಾದ ವಾಸುವೇವ್, ಡಾ.ವೇಣುಗೋಪಾಲ್, ಎಂ.ನಾರಾಯಣಸ್ವಾಮಿ, ವೆಂಕಟಲಕ್ಷ್ಮಮ್ಮ ಉಪಸ್ಥಿತರಿದ್ದರು.

    ಸಮಸ್ಯೆಯಾಗದಂತೆ ಎಚ್ಚರ ವಹಿಸಿ: ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಬಾರದಂತೆ ಎಚ್ಚರಿಕೆಯ ಕ್ರಮ ಕೈಗೊಳ್ಳಬೇಕು, ಸಿಎಸ್‌ಆರ್ ನಿಧಿಯಡಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಪಡೆಯಲು ಉದ್ದಿಮೆದಾರರ ವಿಶೇಷ ಸಭೆ ಕರೆಯುವಂತೆ ಶಾಸಕ ಕೆ.ಶ್ರೀನಿವಾಸಗೌಡ ಸಲಹೆ ನೀಡಿದರು.

    ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನ ಯಶಸ್ವಿಗಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೈಜೋಡಿಸಬೇಕು, ನಾನು ಬೀದಿಗಿಳಿದು ಕಸಗೂಡಿಸುವುದಕ್ಕೂ ಸಿದ್ಧ, 5 ಸ್ಟಾರ್ ಹೋಟೆಲ್‌ನಲ್ಲಿ ಇರುವುದಕ್ಕೂ ಸೈ, ಉತ್ತಮ ಪರಿಸರಕ್ಕಾಗಿ ಅಭಿಯಾನದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು.
    ಎಸ್.ಮುನಿಸ್ವಾಮಿ, ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts