More

    ಐತಿಹಾಸಿಕ ಸ್ಥಳಗಳ ಸಂರಕ್ಷಣಾ: ರಾಜ್ಯ ಸರ್ಕಾರದ ಹೊಸ ಯೋಜನೆ 

    ಎಲ್ಲ ಬಗೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮುಂದಾಗಿರುವ ಪ್ರವಾಸೋದ್ಯಮ ಇಲಾಖೆ, ರಾಜ್ಯದಲ್ಲಿನ ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಸಂರಕ್ಷಿಸಲು ‘ಸಂರಕ್ಷಣಾ’ ಯೋಜನೆ ಜಾರಿಗೊಳಿಸುತ್ತಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆ ಪತ್ತೆ ಹಚ್ಚಿ ಪಟ್ಟಿ ಮಾಡಿರುವಂತೆ 1,563 ಐತಿಹಾಸಿಕ ಸ್ಥಳಗಳಿವೆ.

    ಆದರೆ, ಇಲಾಖೆಯೇ ಹೇಳುವಂತೆ ಅದಕ್ಕಿಂತ 15 ಪಟ್ಟು ಹೆಚ್ಚಿನ ಸ್ಥಳ ಮತ್ತು ನಿರ್ವಣಗಳನ್ನು ಇನ್ನೂ ಗುರುತಿಸಬೇಕಿದೆ. ಅಂತಹ ಸ್ಥಳಗಳನ್ನು ಪತ್ತೆ ಮಾಡಿ ಸಂರಕ್ಷಿಸಲು ಮುಂದಾಗಿರುವ ಇಲಾಖೆ, ಅದಕ್ಕಾಗಿ ಸಂರಕ್ಷಣಾ ಯೋಜನೆ ರೂಪಿಸಿದೆ. ರಾಜ್ಯದಲ್ಲಿನ ಸಣ್ಣ, ದೊಡ್ಡದಾದ ಐತಿಹಾಸಿಕ, ಪಾರಂಪರಿಕ ಸ್ಥಳಗಳನ್ನು ಗುರುತಿಸಿ ಅದನ್ನು ಅಭಿವೃದ್ಧಿಪಡಿಸುವ ಉದ್ದೇಶ ಯೋಜನೆಯದ್ದಾಗಿದೆ.

    ಪ್ರತಿ ಜಿಲ್ಲೆಯಲ್ಲೂ ಸರ್ವೆ: ಇಲಾಖೆಯ ಅಧಿಕಾರಿಗಳು ರೂಪಿಸಿರುವ ಯೋಜನೆಯಂತೆ ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲೂ ಸರ್ವೆ ಕಾರ್ಯ ನಡೆಸಲಾಗುತ್ತದೆ. ಸಾಲು ಮಂಟಪ, ಉಯ್ಯಾಲೆ ಕಂಬ, ಪುರಾತನ ದೇವಸ್ಥಾನ, ಕಲ್ಯಾಣಿ ಹೀಗೆ ಎಲ್ಲ ಬಗೆಯ ಐತಿಹಾಸಿಕ ಸ್ಥಳಗಳನ್ನು ಗುರುತಿಸಲಾಗುತ್ತದೆ. ಹೀಗೆ ಗುರುತಿಸುವಾಗ ಆ ಸ್ಥಳದ ಪರಿಸ್ಥಿತಿ, ಗುರುತಿಸಲಾದ ಐತಿಹಾಸಿಕ ಸ್ಥಳ ಯಾವ ಕಾಲದ್ದು ಎಂಬುದು ಸೇರಿ ಇನ್ನಿತರ ಅಂಶಗಳುಳ್ಳ ವರದಿ ಮಾಡಲಾಗುತ್ತದೆ.

    ಧರ್ಮಸ್ಥಳದ ನೆರವು: ಜಿಲ್ಲಾ ಮಟ್ಟದಲ್ಲಿನ ಸ್ಥಳಗಳನ್ನು ಗುರುತಿಸಲು ತಾಂತ್ರಿಕ ನೆರವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧಮೋತ್ಥಾನ ಟ್ರಸ್ಟ್ ನೀಡಲಿದೆ. ಆ ಕುರಿತು ಟ್ರಸ್ಟ್​ನೊಂದಿಗೆ ಈಗಾಗಲೆ ಮಾತುಕತೆ ನಡೆಸಲಾಗಿದ್ದು, ಪ್ರತಿ ಜಿಲ್ಲೆಯಲ್ಲೂ ಸರ್ವೆ ಕಾರ್ಯ ನಡೆಸಲು ಬೇಕಾಗುವ ವ್ಯವಸ್ಥೆಯನ್ನು ಟ್ರಸ್ಟ್ ಮಾಡಿಕೊಡಲಿದೆ. ನಂತರ ಐತಿಹಾಸಿಕ ಸ್ಥಳಗಳ ಅಭಿವೃದ್ಧಿ ಹೇಗೆ ಮಾಡಬೇಕು ಎಂಬುದರ ಬಗ್ಗೆಯೂ ತಿಳಿಸಿಕೊಡಲಾಗುತ್ತದೆ.

    15 ವರ್ಷದ ಯೋಜನೆ: ರಾಜ್ಯದೆಲ್ಲೆಡೆ ಇರುವ ಐತಿಹಾಸಿಕ ತಾಣಗಳನ್ನು ಗುರುತಿಸಿದರೆ ಅದರ ಪಟ್ಟಿ 15 ಸಾವಿರ ಮೀರಲಿದೆ. ಹೀಗೆ ಗುರುತಿಸಲಾಗುವ ಎಲ್ಲ ಸ್ಥಳಗಳ ಅಭಿವೃದ್ಧಿಗೆ 15 ವರ್ಷ ಬೇಕಾಗಲಿದೆ. ಅಷ್ಟು ವರ್ಷಕ್ಕೆ ತಕ್ಕಂತೆ ಯೋಜನೆ ರೂಪಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.

    ಪ್ರತಿ ವರ್ಷ 100 ಕೋಟಿ ರೂ.: ಇಲಾಖೆ ಅಧಿಕಾರಿಗಳು ರ್ಚಚಿಸಿರುವಂತೆ ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ಪ್ರತಿವರ್ಷ 100 ಕೋಟಿ ರೂ. ಬೇಕಾಗಲಿದೆ. ಅದರಂತೆ 15 ವರ್ಷಕ್ಕೆ 1,500 ಕೋಟಿ ರೂ. ಬೇಕು ಎಂದು ಅಂದಾಜಿಸಲಾಗಿದೆ. ಕೆಲವೊಂದು ಸ್ಥಳಗಳು ಸಣ್ಣದಾಗಿದ್ದು, ಲಕ್ಷ ರೂ.ಗಳಲ್ಲಿ ಅಭಿವೃದ್ಧಿಪಡಿಸಬಹುದು. ಅದೇ ದೊಡ್ಡ ಪ್ರಮಾಣದ ಸ್ಥಳಗಳ ಅಭಿವೃದ್ಧಿಗೆ ಕೋಟ್ಯಾಂತರ ರೂ. ಬೇಕಾಗುತ್ತದೆ.

    ಬಜೆಟ್​ನಲ್ಲಿ ಘೋಷಣೆ

    ಮಾರ್ಚ್ ತಿಂಗಳಲ್ಲಿ ಮಂಡನೆಯಾಗಲಿರುವ ಬಜೆಟ್​ನಲ್ಲಿ ನೂತನ ಯೋಜನೆ ಕುರಿತು ಘೋಷಣೆ ಮಾಡಲಾಗುತ್ತದೆ. ಅದಕ್ಕೂ ಮುನ್ನ ನಡೆಯಲಿರುವ ಬಜೆಟ್ ಪೂರ್ವಸಿದ್ಧತಾ ಸಭೆಯಲ್ಲಿ ಸಂರಕ್ಷಣಾ ಯೋಜನೆ ಕುರಿತು ರ್ಚಚಿಸಲಾಗುತ್ತದೆ. ಜತೆಗೆ, ಯೋಜನೆಗೆ ಅನುದಾನ ನಿಗದಿ ಮಾಡುವಂತೆ ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಲ್ಲಿ ಇಲಾಖೆ ಅಧಿಕಾರಿಗಳು ಮನವಿ ಮಾಡಿಕೊಳ್ಳಲಿದ್ದಾರೆ.

    ಸಂರಕ್ಷಣೆ ಖಾಸಗಿಯವರಿಗೆ

    ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಅದನ್ನು ಇಲಾಖೆಯಿಂದಲೇ ದುರಸ್ತಿ ಮಾಡಲು ನಿರ್ಧರಿಸಲಾಗಿದೆ. ಒಂದು ವೇಳೆ ಸರ್ಕಾರ ಒಪ್ಪಿದರೆ ಖಾಸಗಿಯವರಿಗೆ ಅದರ ಹೊಣೆ ನೀಡಲಾಗುತ್ತದೆ. ಅದಾಗದಿದ್ದರೆ, ಇಲಾಖೆಯಿಂದ ದುರಸ್ತಿ ಮಾಡಿ ನಂತರ, ಅದರ ನಿರ್ವಹಣೆ ಮತ್ತು ಸಂರಕ್ಷಣೆಯ ಹೊಣೆಯನ್ನು ಖಾಸಗಿಯವರಿಗೆ ದತ್ತು ನೀಡಲಾಗುತ್ತದೆ. ಅದಕ್ಕೂ ಮುನ್ನ ಖಾಸಗಿ ವ್ಯಕ್ತಿ ಅಥವಾ ಸಂಸ್ಥೆ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ.

    ಪ್ರವಾಸೋದ್ಯಮ ಇಲಾಖೆ ಅಂದಾಜಿಸಿರುವಂತೆ ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚಿನ ಐತಿಹಾಸಿಕ ತಾಣಗಳಿವೆ. ಅವುಗಳನ್ನು ಸಂರಕ್ಷಿಸಿ, ಪ್ರವಾಸಿಗರನ್ನು ಸೆಳೆಯುವಂತೆ ಮಾಡಲು ಸಂರಕ್ಷಣಾ ಯೋಜನೆ ರೂಪಿಸಲಾಗುತ್ತಿದೆ. ಬಜೆಟ್​ನಲ್ಲಿ ಆ ಕುರಿತು ಘೋಷಿಸಲಾಗುವುದು.

    | ಸಿ.ಟಿ.ರವಿ ಪ್ರವಾಸೋದ್ಯಮ ಸಚಿವ 

    | ಗಿರೀಶ್ ಗರಗ ಬೆಂಗಳೂರು 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts