ಹಿಂಜಾವೇ ಮುಖಂಡನ ಇರಿದು ಕೊಲೆ

ಈಶ್ವರಮಂಗಲ: ಸಂಪ್ಯ ಪೊಲೀಸ್ ಠಾಣೆ ಎದುರು ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ ವೀಕ್ಷಿಸುತ್ತಿದ್ದ ಪುತ್ತೂರು ತಾಲೂಕು ಹಿಂದು ಜಾಗರಣಾ ವೇದಿಕೆ ಕಾರ್ಯದರ್ಶಿ ಕಾರ್ತಿಕ್ ಸುವರ್ಣ ಮೇರ್ಲ(27) ಎಂಬುವರನ್ನು ಮಂಗಳವಾರ ರಾತ್ರಿ 11.30ರ ವೇಳೆಗೆ ಮೂವರು ಚೂರಿಯಿಂದ ತಿವಿದು ಕೊಲೆಗೈದಿದ್ದಾರೆ.
ಸಂಪ್ಯ ಠಾಣೆ ಹಿಂಭಾಗದ ನಿವಾಸಿಗಳಾದ ಚರಣ್‌ರಾಜ್ ರೈ, ಕಿರಣ್ ರೈ ಸಹೋದರರು ಮತ್ತು ಅವರ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ತೊಕ್ಕೊಟ್ಟು ಮೂಲದ ಪ್ರೀತೇಶ್ ಆರೋಪಿಗಳು. ಕಾರ್ತಿಕ್ ಸುವರ್ಣ ಆರ್ಯಾಪು ಗ್ರಾಮದ ಮೇರ್ಲ ನಿವಾಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ನಿವೃತ್ತ ಮ್ಯಾನೇಜರ್ ರಮೇಶ್ ಸುವರ್ಣ – ಆರ್ಯಾಪು ಗ್ರಾಪಂ ಮಾಜಿ ಸದಸ್ಯೆ ಹೇಮಾವತಿ ದಂಪತಿ ಪುತ್ರ.

ಎದೆಗೆ ತಿವಿದರು: ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಹೊರಟ ಬಳಿಕ ರಾತ್ರಿ ಗಣೇಶೋತ್ಸವ ಪೆಂಡಾಲ್‌ನಲ್ಲಿ ಯಕ್ಷಗಾನ ನಡೆಯುತ್ತಿತ್ತು. ಕಾರ್ತಿಕ್ ಯಕ್ಷಗಾನ ವೀಕ್ಷಿಸುತ್ತಿದ್ದ ವೇಳೆ ಅಲ್ಲಿಗೆ ಬಂದ ಆರೋಪಿಗಳು ಕಾರ್ತಿಕ್‌ಗೆ ಅವಾಚ್ಯ ಶಬ್ಧಗಳಿಂದ ಬೈದಿದ್ದರು. ಕಾರ್ತಿಕ್ ಅವರ ಕೈ ಕಿರಣ್ ಹಿಡಿದುಕೊಂಡಿದ್ದು, ಪ್ರೀತೇಶ್ ಚೂರಿಯಿಂದ ಎದೆಭಾಗಕ್ಕೆ ತಿವಿದಿದ್ದಾನೆ.

ಬಳಿಕ ಆರೋಪಿಗಳು ಚೂರಿಯೊಂದಿಗೆ ಕೆಎ.21ಝೆಡ್ 234 ನೋಂದಣಿಯ ಇಕೋ ಸ್ಪೋರ್ಟ್ಸ್ ಕಾರಿನಲ್ಲಿ ಪರಾರಿಯಾಗಿದ್ದಾರೆ. ಕುಸಿದು ಬಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದ ಕಾರ್ತಿಕ್‌ನನ್ನು ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ಘಟನೆಯಿಂದಾಗಿ ಯಕ್ಷಗಾನ ಕಾರ್ಯಕ್ರಮ ರದ್ದುಗೊಳಿಸಲಾಯಿತು.

ಸಂಬಂಧಿ ಕೇಶವ ಸುವರ್ಣ ದೂರು ನೀಡಿದ್ದು, ಸಂಪ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಸ್‌ಪಿ ಲಕ್ಷ್ಮೀಪ್ರಸಾದ್ ರಾತ್ರಿಯೇ ಭೇಟಿ ಪರಿಶೀಲಿಸಿದರು.

ಆರೋಪಿಗಳ ಬಂಧನಕ್ಕೆ ಆಗ್ರಹ: ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಪುತ್ತೂರು ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಬಿಲ್ಲವ ಸಂಘ ಪದಾಧಿಕಾರಿಗಳು ಪುತ್ತೂರು ವಿಭಾಗ ಡಿವೈಎಸ್ಪಿ ಹಾಗೂ ಸಂಪ್ಯ ಠಾಣೆ ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಅಧ್ಯಕ್ಷ ಜಯಂತ ನಡುಬೈಲು, ಕಾರ್ಯದರ್ಶಿ ಶಶಿಧರ್ ಕಿನ್ನಿಮಜಲು, ನಾರಾಯಣ ಗುರುಸ್ವಾಮಿ ಮಂದಿರ ಅಧ್ಯಕ್ಷ ಆರ್.ಸಿ.ನಾರಾಯಣ್ ರೆಂಜ, ಸದಸ್ಯ ಉಲ್ಲಾಸ್ ಕೋಟ್ಯಾನ್, ಅನುಪ್ ಮತ್ತಿತರರಿದ್ದರು.

ಚಿಟ್‌ಫಂಡ್ ವಹಿವಾಟು ಕಾರಣ?: ಆರೋಪಿಗಳಲ್ಲೊಬ್ಬನಾದ ಕಿರಣ್ ರೈ ಕಾಮಗಾರಿ ಗುತ್ತಿಗೆದಾರನಾಗಿದ್ದು, ಆತನ ಸಹೋದರ ಚರಣ್‌ರಾಜ್ ದರ್ಬೆಯಲ್ಲಿ ‘ಮಾತೃಛಾಯ’ ಹೆಸರಿನಲ್ಲಿ ಚಿಟ್‌ಫಂಡ್ ವ್ಯವಹಾರ ನಡೆಸುತ್ತಿದ್ದ. ಅವರಿಗೂ ಕಾರ್ತಿಕ್ ಸಂಬಂಧಿ ಕಿಶೋರ್ ಎಂಬಾತನಿಗೂ ಚಿಟ್‌ಫಂಡ್ ಹಣಕಾಸಿನ ವಿಚಾರದಲ್ಲಿ ವರ್ಷದ ಹಿಂದೆ ತಕರಾರು ನಡೆದಿತ್ತು. ಆಗ ಕಾರ್ತಿಕ್ ತನ್ನ ಸಂಬಂಧಿಯ ಪರ ವಹಿಸಿದ್ದ.

ಚರಣ್‌ರಾಜ್‌ಗೆ ಕಿಶೋರ್ ನೀಡಬೇಕಾಗಿದ್ದ 4 ಲಕ್ಷ ರೂ. ನೀಡದಿದ್ದ ಕಾರಣಕ್ಕಾಗಿ ಚರಣ್‌ರಾಜ್ ಕಿಶೋರ್‌ಗೆ ವಕೀಲರ ಮೂಲಕ ನೋಟಿಸ್ ಕಳುಹಿಸಿದ್ದ. ಹಣ ನೀಡುವಂತೆ ಕಿಶೋರ್‌ಗೆ ಧಮ್ಕಿ ಹಾಕಿದ್ದರು ಎನ್ನಲಾಗಿದೆ. ಇದನ್ನು ಪ್ರಶ್ನಿಸಿ ಕಿಶೋರ್, ಆರ್ಯಾಪು ಗ್ರಾಮದ ಸಂಟ್ಯಾರು ನಿವಾಸಿ ಸುಜಿತ್ ಬಂಗೇರ, ಮನೀಶ್ ಕುಮಾರ್ ಹಾಗೂ ಸಂಪ್ಯದ ಪ್ರೀತಂ ಶೆಟ್ಟಿ ಎಂಬುವರ ಜತೆ ಸೇರಿಕೊಂಡು ಚರಣ್‌ರಾಜ್‌ಗೆ ಹಲ್ಲೆ ನಡೆಸಿದ್ದರು. ಹಲ್ಲೆಯಲ್ಲಿ ಚರಣ್‌ರಾಜ್ ಕೈಮೂಳೆ ಮುರಿತಕ್ಕೊಳಗಾಗಿತ್ತು. ಈ ಘಟನೆ 2018ರ ಜ.8ರಂದು ನಡೆದಿದ್ದು, ಈ ಸಂದರ್ಭ ಕಾರ್ತಿಕ್ ತನ್ನ ಸಂಬಂಧಿಕ ಕಿಶೋರ್ ಪರ ವಹಿಸಿದ್ದ ಸೇಡಿನ ಹಿನ್ನೆಲೆಯಲ್ಲಿ ಆರೋಪಿಗಳು ಈ ಕೃತ್ಯ ಎಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಇತ್ತೀಚೆಗಷ್ಟೇ ಜಾರಿಯಾದ ಋಣಮುಕ್ತ ಪರಿಹಾರ ಕಾಯ್ದೆಗೆ ಸಂಬಂಧಿಸಿ ಮಾತೃಛಾಯಾ ಚಿಟ್‌ಫಂಡ್ ವಿರುದ್ಧ ಅರ್ಜಿ ಸಲ್ಲಿಸಲು ಕೆಲವು ಫಲಾನುಭವಿಗಳಿಗೆ ಕಾರ್ತಿಕ್ ಪ್ರೇರಣೆ ನೀಡಿದ್ದು, ಈ ದ್ವೇಷವೂ ಕೊಲೆಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.
 ಪುತ್ತೂರಿನಲ್ಲಿ ಶವಯಾತ್ರೆ: ದೇರಳಕಟ್ಟೆ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಪುತ್ತೂರಿನ ಕಲ್ಲೇಗದಿಂದ ಸಂಪ್ಯ ತನಕ ಮಾಣಿ-ಮೈಸೂರು ಹೆದ್ದಾರಿಯಲ್ಲಿ ವಾಹನ ಶವಯಾತ್ರೆ ನಡೆಸಲಾಯಿತು. ಸಂಪ್ಯದಿಂದ ಮನೆ ತನಕ ಪಾದಯಾತ್ರೆ ಮೆರವಣಿಗೆಯಲ್ಲಿ ಮೃತದೇಹವನ್ನು ಮೇರ್ಲದ ಮನೆಗೆ ಕೊಂಡೊಯ್ಯಲಾಯಿತು. ಮನೆಯಲ್ಲಿ ಸಂಘದ ಗೌರವ ಸಮರ್ಪಿಸಲಾಯಿತು. ಶಾಸಕ ಸಂಜೀವ ಮಠಂದೂರು, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಹಿಂಜಾವೇ ಪ್ರಾಂತ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೆ.ಟಿ, ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ, ಪ್ರಾಂತ ಸಹ ಸಂಪರ್ಕ ಪ್ರಮುಖ್ ರವಿರಾಜ್ ಕಡಬ, ವಿಭಾಗ ಪ್ರಧಾನ ಕಾರ್ಯದರ್ಶಿ ರವಿರಾಜ್ ಬಿ.ಸಿ ರೋಡ್, ಬಜರಂಗದಳ ಪ್ರಾಂತ ಸಹ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ, ಆರೆಸ್ಸೆಸ್ ಮುಖಂಡ ನವೀನ್ ಪ್ರಸಾದ್ ಕೈಕಾರ, ಅರುಣ್‌ಕುಮಾರ್ ಪುತ್ತಿಲ, ಪುತ್ತೂರು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ತಾಪಂ ಸದಸ್ಯ ರಾಧಾಕೃಷ್ಣ ಬೋರ್ಕರ್ ಸಹಿತ ವಿವಿಧ ಹಿಂದು ಸಂಘಟನೆ ಮತ್ತು ಬಿಜೆಪಿ ಪ್ರಮುಖರು ಪಾಲ್ಗೊಂಡಿದ್ದರು.
 
ಆರೋಪಿಗಳ ಪತ್ತೆಗೆ 2 ತಂಡ: ಆರೋಪಿಗಳ ಪತ್ತೆಗಾಗಿ ಪ್ರತ್ಯೇಕ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಡಿವೈಎಸ್ಪಿ ದಿನಕರ ಶೆಟ್ಟಿ ತಿಳಿಸಿದ್ದಾರೆ. 

ವಿವಾಹ ನಿಶ್ಚಯವಾಗಿತ್ತು:
ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಕಾರ್ತಿಕ್ ಸಜ್ಜನ ಸ್ವಭಾವದವರಾಗಿದ್ದರು. ಅವರ ವಿವಾಹದ ಸಿದ್ಧತೆ ನಡೆದಿದ್ದು, ಯುವತಿ ಮನೆಯವರ ಜತೆ ಮಾತುಕತೆ ಅಂತಿಮಗೊಳಿಸಲಾಗಿತ್ತು. ಕಾರ್ತಿಕ್ ಅಂತಿಮ ದರ್ಶನದಲ್ಲಿ ಆ ಯುವತಿಯೂ ಮನೆಯವರ ಜತೆ ಬಂದು ಪಾಲ್ಗೊಂಡಿದ್ದಳು.